
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಿಹಾರಿಕಾ ಎಂಬುವರು ಸಾವನ್ನಪ್ಪಿದ್ದಾರೆ.
ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಗೃಹಿಣಿಯ ಮೃತದೇಹ ಪತ್ತೆಯಾಗಿತ್ತು. ಗಂಡನೇ ಕೊಲೆ ಮಾಡಿದ್ದಾನೆಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತ ನಿಹಾರಿಕಾ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಳು. ಕೌಟುಂಬಿಕ ಕಲಹ ಹಿನ್ನೆಲೆ ಕೆಲವು ದಿನಗಳ ಹಿಂದೆ ಗಂಡನ ಮನೆ ತೊರೆದಿದ್ದ ನಿಹಾರಿಕಾ ತನ್ನ ಸಹೋದರಿಯ ಮನೆಯಲ್ಲಿದ್ದರು.
ನಿಹಾರಿಕಾಳ ಪತಿ ಕಾರ್ತಿಕ್ ಆಕೆಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಹೀಗಾಗಿ ಈ ದಂಪತಿಯ ಸಂಸಾರ ತಾಳ ತಪ್ಪಿತ್ತು ಎಂದು ತಿಳಿದು ಬಂದಿದೆ.
ಕಳೆದ 2 ದಿನಗಳ ಹಿಂದಷ್ಟೇ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಂತಾ ಹೇಳಿದ್ದ ನಿಹಾರಿಕಾಳ ಪತಿ ಕಾರ್ತಿಕ್ ಮನೆಗೆ ಕರೆದುಕೊಂಡು ಹೋಗಿದ್ದನಂತೆ.
ಶಾಲೆಯ ಕಾರ್ಯಕ್ರಮಕ್ಕೆ ತೆರಳುವ ವಿಚಾರಕ್ಕೆ ಸಂಬಂಧಿಸಿದಂತೆ ನಿಹಾರಿಕಾಗೆ ಪತಿ ನಿಂದನೆ ಮಾಡಿದ್ದನಂತೆ.
ಈ ವೇಳೆ ಮಾತಿಗೆ ಮಾತು ಬೆಳೆದು ಆಕೆಯನ್ನು ಆತನೇ ಕೊಲೆ ಮಾಡಿದ್ದಾನೆಂದು ನಿಹಾರಿಕಾಳ ಪೋಷಕರು ಆರೋಪಿಸಿದ್ದಾರೆ.
ಈ ಬಗ್ಗೆ ಮೃತಳ ಕುಟುಂಬಸ್ಥರು ಪುಟ್ಟೆನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮ್ಮ ಮಗಳಿಗೆ ಕಾರ್ತಿಕ್ ಕಿರುಕುಳ ನೀಡುತ್ತಿದ್ದ.
ಹೀಗಾಗಿಯೇ ಆಕೆ ಸಹೋದರಿಯ ಮನೆಯಲ್ಲಿ ಉಳಿದುಕೊಂಡಿದ್ದಳು. ಆಕೆಯನ್ನು ಹೇಗೋ ಪುಸಲಾಯಿಸಿ ಮತ್ತೆ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ ಕಾರ್ತಿಕ್ ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಂತಾ ಹೇಳಿದ್ದ.
ಆದರೆ ಈಗ ತಮ್ಮ ಮಗಳ ಜೀವವನ್ನೇ ತೆಗೆದಿದ್ದಾನೆ. ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಾ ಪೊಲೀಸರಿಗೆ ನಿಹಾರಿಕಾಳ ಪೋಷಕರು ಒತ್ತಾಯಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.