Accidentಅಪಘಾತರಾಷ್ಟ್ರಿಯ

ಗುಜರಾತ್‌ನ ಮೋರ್ಬಿ ತೂಗು ಸೇತುವೆ ದುರಂತ : ಯುವಕರ ಪುಂಡಾಟ, ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಕಾರಣವಾಯ್ತು 130 ಮಂದಿಯ ಸಾವು

ಮೋರ್ಬಿ: ಗುಜರಾತ್‌ನ ಮೋರ್ಬಿ ಜಿಲ್ಲೆಯಲ್ಲಿ ತೂಗು ಸೇತುವೆ ದುರಂತಕ್ಕೆ ಪ್ರವಾಸಿಗರ ಉಡಾಫೆ ವರ್ತನೆಯೇ ಕಾರಣ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಭದ್ರತಾ ಸಿಬ್ಬಂದಿಗಳ ನಿರ್ಲಕ್ಷ್ಯ ಹಾಗೂ ಪ್ರವಾಸಿಗರು ತೂಗು ಸೇತುವೆಯನ್ನು ಅಲ್ಲಾಡಿಸಿದ್ದೇ ದುರಂತಕ್ಕೆ ಕಾರಣ ಎಂದು ಘಟನೆಗೆ ಅಲ್ಪ ಮುನ್ನ ಸ್ಥಳದಿಂದ ಮರಳಿದ್ದ ಅಹಮದಾಬಾದ್‌ನ ನಿವಾಸಿ ವಿಜಯ್‌ ಗೋಸ್ವಾಮಿ ಅವರು ಹೇಳಿದ್ದಾರೆ.
ಮೋರ್ಬಿ ಜಿಲ್ಲೆಯ ಮಚ್ಚೂ ನದಿಗೆ ಅಡ್ಡಲಾಗಿ ಇದ್ದ ಈ ತೂಗು ಸೇತುವೆ ಭಾನುವಾರ ಸಂಜೆ ಕುಸಿದಿತ್ತು. ಪರಿಣಾಮ 132 ಮಂದಿ ಸಾವಿಗೀಡಾಗಿದ್ದಾರೆ. ಹಲವು ಮಂದಿ ಕಾಣೆಯಾಗಿದ್ದು, ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.

ದೀಪಾವಳಿ ರಜೆ ಕಳೆಯಲು ಭಾನುವಾರ ಮಧ್ಯಾಹ್ನ ಬಳಿಕ ಮೋರ್ಬಿಯ ತೂಗುಸೇವೆ ನೋಡಲು ನಾವು ಕುಟುಂಬ ಸಮೇತರಾಗಿ ತೆರಳಿದ್ದೆವು. ಸೇತುವೆಯ ಮೇಲೆ ನಿಂತಿದ್ದ ಕೆಲ ಯುವಕರು ಅದನ್ನು ಅಲ್ಲಾಡಿಸುತ್ತಿದ್ದರು. ಭಯಗೊಂಡ ನಾವು ಸೇತುವೆ ಮೇಲೆ ತೆರಳದೇ ಅರ್ಧಕ್ಕೆ ಹಿಂದಿರುಗಿದೆವು. ನಾವು ಮರಳಿದ ಕೆಲ ಗಂಟೆಗಳ ಬಳಿಕ ನಮ್ಮ ಊಹೆ ಸರಿಯಾಯ್ತು. ಸಂಜೆ 6.30ರ ಹೊತ್ತಿಗೆ ಸೇತುವೆ ಕುಸಿದ ಸುದ್ದಿ ಬಂತು’ ಎಂದು ಸೇತುವೆ ನೋಡಲು ಹೋಗಿದ್ದ ಅಹಮದಾಬಾದ್‌ನ ನಿವಾಸಿ ವಿಜಯ್‌ ಗೋಸ್ವಾಮಿ ಹೇಳಿದ್ದಾರೆ.

ನಾವು ಸೇತುವೆ ಮೇಲೆ ಹೋದಾಗ ಕೆಲ ಯುವಕರು ಉದ್ದೇಶಪೂರ್ವಕವಾಗಿ ಸೇತುವೆಯನ್ನು ಅಲುಗಾಡಿಸುತ್ತಿದ್ದರು. ನೂರಕ್ಕೂ ಹೆಚ್ಚು ಮಂದಿ ಇದ್ದ ಸೇತುವೆ ತೊಯ್ದಾಡುತ್ತಿತ್ತು. ಇದರಿಂದಾಗಿ ಹಲವು ಮಂದಿಗೆ ಸೇತುವೆ ಮೇಲೆ ನಡೆದುಕೊಂಡು ಬರಲು ಆಗಿರಲಿಲ್ಲ. ಹಗ್ಗದ ಸಹಾಯ ಇಲ್ಲದೇ ಸೇತುವೆ ಮೇಲೆ ನಿಲ್ಲಲೂ ಆಗುತ್ತಿರಲಿಲ್ಲ. ಸೇತುವೆಯ ಮಧ್ಯ ಇದ್ದ ನಮಗೆ ಇದು ಅಪಾಯಕಾರಿ ಎಂದನಿಸಿತು. ಹೀಗಾಗಿ ನಾವು ಹೊರಟೆವು. ಈ ಬಗ್ಗೆ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿಗಳಿಗೆ ತಿಳಿಸಿದರೂ ಪ್ರಯೋಜನವಾಗಲಿಲ್ಲ’ ಎಂದು ಗೋಸ್ವಾಮಿ ಹೇಳಿದ್ದಾರೆ.
‘ಸ್ಥಳದಿಂದ ಬಿಡುವ ಮೊದಲು ಅಲ್ಲಿದ್ದ ಭದ್ರತಾ ಸಿಬ್ಬಂದಿಗಳಿಗೆ ಯುವಕರ ಪುಂಡಾಟದ ಬಗ್ಗೆ ತಿಳಿಸಿದೆವು. ಅವರಿಗೆ ಎಚ್ಚರಿಕೆ ನೀಡಿ ಎಂದು ನಾವು ಮನವಿ ಮಾಡಿದೆವು. ಆದರ ಅದ್ಯಾವುದಕ್ಕೂ ಕಿವಿಗೊಡದೆ ಅವರು ಟಿಕೆಟ್‌ ಮಾರಾಟ ಮಾಡುವಲ್ಲಿ ತಲ್ಲೀನರಾಗಿದ್ದಾರೆ. ನಾವು ಒತ್ತಾಯ ಮಾಡಿದಾಗ, ಜನರನ್ನು ನಿಯಂತ್ರಿಸಲು ನಮಗೆ ಅಧಿಕಾರ ಇಲ್ಲ ಎಂದು ಹೇಳಿ ಸುಮ್ಮನಾದರು. ಇದಾದ ಕಲವೇ ನಿಮಿಷಗಳಲ್ಲಿ ದುರಂತದ ಸುದ್ದಿ ತಿಳಿಯಿತು’ ಎಂದು ಗೋಸ್ವಾಮಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸೇತುವೆ ಕುಸಿದ ಹಲವು ವಿಡಿಯೋಗಳು ವೈರಲ್ ಆಗಿದ್ದು, ವಿಡಿಯೋ ಒಂದರಲ್ಲಿ ಕೆಲ ಯುವಕರು ಸೇತುವೆಯನ್ನು ಅಲುಗಾಡಿಸುವ ಹಾಗೂ ಸೇತುವೆಯ ಹಗ್ಗಕ್ಕೆ ಕಾಲಿನಲ್ಲಿ ಒದೆಯುವ ದೃಶ್ಯಗಳು ಸೆರೆಯಾಗಿವೆ.
ಸೇತುವೆ ಕುಸಿದ ಸ್ಥಳ ಈಗ ಸ್ಮಶಾನವಾಗಿದ್ದು, ಹಲವು ಮಂದಿ ತಮ್ಮವರಿಗಾಗಿ ಕಾಯುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ಕಾಣೆಯಾದ ತಂದೆ ತಾಯಿಗಾಗಿ ಮಕ್ಕಳು ರೋಧಿಸುತ್ತಿರುವ ದೃಶ್ಯ, ನಾಪತ್ತೆಯಾದ ಮಕ್ಕಳಿಗೆ ಪೋಷಕರು ಅಳುತ್ತಿರುವ ದೃಶ್ಯ, ಸಂಬಂಧಿಕರ ಆಗಮನಕ್ಕೆ ಅಲ್ಲಿದ್ದವರ ಕಣ್ಣುಗಳು ಹುಡುಕುವ ದೃಶ್ಯಗಳಂತೂ ಮನಕಲುಕುವಂತಿದೆ.

Related Articles

Leave a Reply

Your email address will not be published. Required fields are marked *

Back to top button