
ಸೂರತ್: ಪಂಜಾಬ್ಗೆ ಲಗ್ಗೆ ಇಟ್ಟ ಬಳಿಕ ಗುಜರಾತ್ ಮೇಲೆ ಕಣ್ಣಿಟ್ಟಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಡಿಸೆಂಬರ್ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಪ್ರತಿ ತಿಂಗಳೂ 300 ಯುನಿಟ್ವರೆಗೆ ವಿದ್ಯುತ್ ಉಚಿತವಾಗಿ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಸೂರತ್ನಲ್ಲಿ ಗುರುವಾರ ಟೌನ್ ಹಾಲ್ ಸಭೆಯಲ್ಲಿ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ತಿಂಗಳಲ್ಲಿ ಅವರು ಗುಜರಾತ್ಗೆ ಭೇಟಿ ನೀಡಿರುವುದು ಇದು ಎರಡನೇ ಸಲವಾಗಿದೆ.

ಹಾಗೆಯೇ 2021ರ ಡಿಸೆಂಬರ್ಗಿಂತ ಮುಂಚಿನ ಎಲ್ಲ ಬಾಕಿ ಇರುವ ವಿದ್ಯುತ್ ಬಿಲ್ಗಳನ್ನು ಮನ್ನಾ ಮಾಡಲಾಗುವುದು ಎಂದೂ ತಿಳಿಸಿದ್ದಾರೆ.
ಮತದಾರರಿಗೆ ಉಚಿತ ಕೊಡುಗೆಗಳ ಭರವಸೆ ನೀಡುವ ರಾಜಕೀಯ ಪಕ್ಷಗಳು ಮತದಾರರಿಗೆ ‘ಸಿಹಿ ತಿನಿಸು’ ನೀಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಾರ ನೀಡಿದ್ದ ಹೇಳಿಕೆಯನ್ನು ಮತ್ತೆ ಉಲ್ಲೇಖಿಸಿ ಅವರು ವಾಗ್ದಾಳಿ ನಡೆಸಿದ್ದಾರೆ.
“ಕೆಲವು ಜನರು ‘ರೇವಾಡಿ’ (ಸಿಹಿ) ಬಗ್ಗೆ ಮಾತನಾಡುತ್ತಾರೆ. ಸಾರ್ವಜನಿಕರಿಗೆ ಸಿಹಿಯನ್ನು ಉಚಿತವಾಗಿ ವಿತರಿಸಿದಾಗ ಅದನ್ನು ‘ಪ್ರಸಾದ’ ಎಂದು ಕರೆಯಲಾಗುತ್ತದೆ. ಆದರೆ ಅದನ್ನು ನಿಮ್ಮ ಸ್ನೇಹಿತರು ಮತ್ತು ಸಚಿವರಿಗೆ ಉಚಿತವಾಗಿ ನೀಡಿದಾಗ ಅದನ್ನು ‘ಪಾಪ’ ಎಂದು ಕರೆಯಲಾಗುತ್ತದೆ” ಎಂದು ಟೀಕಿಸಿದ್ದಾರೆ.
ಗುಜರಾತ್ ಜನರು 27 ವರ್ಷಗಳ ಬಿಜೆಪಿ ಆಡಳಿತದಿಂದ ಹೈರಾಣಾಗಿದ್ದಾರೆ. ತಮ್ಮ ಪಕ್ಷವು ಮುಂದಿನ ಕೆಲವು ವಾರಗಳಲ್ಲಿ ಅವರಿಗಾಗಿ ಏನನ್ನು ಮಾಡುತ್ತೇವೆ ಎಂಬ ಯೋಜನೆಗಳಿರುವ ಅಜೆಂಡಾವನ್ನು ಹಂಚಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.