ಗಿಳಿ ಶಿಳ್ಳೆ ಹೊಡೆದಿದ್ದಕ್ಕೆ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್!

ಪುಣೆ: ಇಲ್ಲಿನ ಶಿವಾಜಿನಗರದ ನಿವಾಸಿಯೊಬ್ಬರು ತಮ್ಮ ನೆರೆಮನೆಯ ಸಾಕು ಗಿಳಿಯು ನಿರಂತರವಾಗಿ ಶಿಳ್ಳೆಹೊಡೆಯುತ್ತೆ ಮತ್ತು ಕಿರುಚಾಡುತ್ತದೆ ಎಂದು ಆರೋಪಿಸಿದ್ದಾರೆ.
ಗಿಳಿಯ ಶಿಳ್ಳೆ ಹಾಗೂ ಕಿರುಚಾಟದಿಂದ ಕೋಪಗೊಂಡಿರುವ ವ್ಯಕ್ತಿಯು, ಗಿಳಿಯ ಮಾಲೀಕರ ವಿರುದ್ಧ ಗುರುವಾರ ರಾತ್ರಿ ಖಡ್ಕಿ ಪೊಲೀಸರಿಗೆ ದೂರು ನೀಡಿದ್ದಾರೆ. ಹಿರಿಯ ನಾಗರಿಕರಿಂದ ದೂರನ್ನು ಸ್ವೀಕರಿಸಿದ ಮೇಲೆ ಪೊಲೀಸರು ಕಂಪ್ಲೇಟ್ ದಾಖಲಿಸಿಕೊಂಡಿದ್ದಾರೆ.
ಗಿಳಿಯ ಮಾಲೀಕರ ವಿರುದ್ಧ ಶಾಂತಿ ಭಂಗ ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪಗಳನ್ನು ಹೊರಿಸಿದ್ದಾರೆ.ಖಾಡ್ಕಿ ಪೊಲೀಸರ ಪ್ರಕಾರ, ಗಿಳಿಯ ಮಾಲೀಕರು ಮತ್ತು ದೂರುದಾರರು ಹಳೆಯ ಪುಣೆ-ಮುಂಬೈ ಹೆದ್ದಾರಿಯ ಶಿವಾಜಿನಗರದ ಹೌಸಿಂಗ್ ಸೊಸೈಟಿಯ ನೆರೆಹೊರೆಯವರು.
ಫ್ಲಾಟ್‌ನ ಪ್ರವೇಶ ದ್ವಾರದ ಬಳಿ ನೇತಾಡುವ ಪಂಜರದಲ್ಲಿ ಗಿಳಿಯನ್ನು ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಿಳಿಗಳ ಶಿಳ್ಳೆ ಮತ್ತು ಕಿರುಚಾಟವು 72 ವರ್ಷದ ವ್ಯಕ್ತಿಯನ್ನು ಅಸಮಾಧಾನಗೊಳಿಸಿತು ಎಂದು ಅವರು ಹೇಳಿದರು. ಈ ವಿಚಾರವಾಗಿ ದೂರುದಾರರು ಅನೇಕ ಬಾರಿ ಗಿಳಿಯ ಮಾಲೀಕರೊಂದಿಗೆ ಮಾತನಾಡಿದ್ದಾರೆ.
ಈ ಪಕ್ಷಿಯನ್ನು ಮನೆಯೊಳಗೆ ಇಟ್ಟುಕೊಳ್ಳುವಂತೆ ಸಹ ತಿಳಿಸಿದ್ದಾರೆ. ಆದರೆ, ಗಿಳಿಯ ಮಾಲೀಕರು ಮಾತ್ರ ದೂರುದಾರರಿಗೆ ಬೆದರಿಕೆ ಹಾಕಿದರು. ಅಲ್ಲದೇ ನಿಮ್ಮ ಕೆಲಸ ನೀವು ನೋಡಿಕೊಳ್ಳಿ ಎಂದಿದ್ದಾರಂತೆ.
ನಂತರ ದೂರುದಾರರು ಪೊಲೀಸರನ್ನು ಸಂಪರ್ಕಿಸಲು ನಿರ್ಧರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇತರರಿಗೆ ತೊಂದರೆಯಾಗದಂತೆ ಸಾಕುಪ್ರಾಣಿಯನ್ನು ಮನೆಯೊಳಗೆ ಇಟ್ಟುಕೊಳ್ಳುವಂತೆ ನಾವು ಗಿಳಿಯ ಮಾಲೀಕರಿಗೆ ಹೇಳಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.