
ಬೆಂಗಳೂರು: ಗಾಂಧಿ ಕುಟುಂಬದ ಹೆಸರಿನಲ್ಲಿ ಮೂರ್ನಾಲ್ಕು ತಲೆಮಾರು ಕೂತು ತಿನ್ನುವಷ್ಟು ಆಸ್ತಿ ಮಾಡಿಕೊಂಡಿರುವ ನಾವೆಲ್ಲರೂ ಈಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬೆಂಬಲಕ್ಕೆ ನಿಂತು ಗಾಂಧಿ ಕುಟುಂಬದ ಋುಣ ತೀರಿಸಬೇಕಿದೆ ಎಂದು ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್‌ನ ಹಿರಿಯ ಶಾಸಕ ಕೆ. ಆರ್. ರಮೇಶ್‌ಕುಮಾರ್ ಹೇಳಿದ್ದಾರೆ.
‘ರಾಜಕೀಯ ದುರುದ್ದೇಶದಿಂದ ಕೇಂದ್ರ ಸರಕಾರ ಇ. ಡಿ. ಬಳಕೆ ಮಾಡಿಕೊಂಡು ಎಐಸಿಸಿ ನಾಯಕರಿಗೆ ಕಿರುಕುಳ ನೀಡುತ್ತಿದ್ದು, ಈ ಕಠಿಣ ಸಂದರ್ಭದಲ್ಲಿ ನಾವೆಲ್ಲರೂ ಅವರ ಬೆಂಬಲಕ್ಕೆ ನಿಂತು, ಋುಣ ತೀರಿಸಬೇಕು. ಈ ಕರ್ತವ್ಯ ಮಾಡದಿದ್ದರೆ ನಾವು ತಿನ್ನುವ ಅನ್ನಕ್ಕೆ ಹುಳ ಬೀಳುತ್ತವೆ’ ಎಂದು ರಮೇಶ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋನಿಯಾ ಗಾಂಧಿ ಅವರನ್ನು ವಿಚಾರಣೆಗೆ ಗುರಿಪಡಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ರಮೇಶ್ ಕುಮಾರ್ ಆಡಿರುವ ಈ ಮಾತುಗಳು ಸಾರ್ವಜನಿಕ ವಲಯದಲ್ಲಿ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ರಮೇಶ್ ಕುಮಾರ್ ಅವರ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸದ್ದು ಮಾಡಿವೆ. ಸಮಾರಂಭದ ಬಳಿಕ ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲಿ ರಮೇಶ್‌ಕುಮಾರ್ ತಮ್ಮ ಈ ಮಾತುಗಳನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
‘ಗಾಂಧಿ ಕುಟುಂಬ ಸುಮಾರು ಏಳು ದಶಕಗಳ ಕಾಲ ದೇಶವಾಳಿದೆ. ಈ ಕುಟುಂಬದಿಂದ ನಾವೆಲ್ಲರೂ ತಲೆಮಾರುಗಳಿಗೆ ಆಗುವಷ್ಟು ಹಣ, ಆಸ್ತಿ ಮಾಡಿಕೊಂಡಿದ್ದೇವೆ. ಈಗ ಋುಣ ತೀರಿಸುವ ಕೆಲಸ ಆಗಬೇಕು. ದೇಶ ಉಳಿಯಲು ಮತ್ತು ಕಾಂಗ್ರೆಸ್ ಉಳಿಸಲು ನಾವೆಲ್ಲರೂ ಒಟ್ಟಾಗಿ ಸೋನಿಯಾ ಗಾಂಧಿ ಅವರಿಗೆ ನೈತಿಕ ಬೆಂಬಲ ನೀಡಬೇಕಿದೆ’ ಎಂದು ಹೇಳಿದರು.

ಹಿಟ್ಲರ್ ಅನುಯಾಯಿಗಳು: ‘ಒಬ್ಬ ನಾಯಕ, ಒಂದು ಸಿದ್ಧಾಂತ ಮತ್ತು ಒಂದು ಚಿಹ್ನೆಯಲ್ಲಿ ಬಿಜೆಪಿ ನಂಬಿಕೆ ಇಟ್ಟಿದೆ. ಅಸಮಾನತೆ ಮೂಲಕ ಶೋಷಣೆ ಮಾಡುವ ಚಿಂತನೆ ಬಿಜೆಪಿಯದ್ದು. ಪ್ರಜಾಪ್ರಭುತ್ವ ಮತ್ತು ಸಮಾನತೆ ಇರುವ ಕಡೆ ಬಡವರು, ದಲಿತರು, ಅಲ್ಪಸಂಖ್ಯಾತರನ್ನು ಶೋಷಣೆ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ವ್ಯವಸ್ಥೆಯನ್ನೇ ನಾಶ ಮಾಡಲು ಹೊರಟಿದ್ದಾರೆ. ಹಿಟ್ಲರ್‌ನನ್ನು ಆರ್‌ಎಸ್‌ಎಸ್‌ನವರು ಹಾಡಿ ಹೊಗಳಿದ್ದನ್ನು ಚರಿತ್ರೆಯಲ್ಲಿ ಕಾಣಬಹುದು’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಸಂಸದೀಯ ವ್ಯವಸ್ಥೆಯಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ಹಿಟ್ಲರ್ ಹೇಗೆ ತನ್ನ ವಿರೋಧಿಗಳನ್ನು ಸಂಹಾರ ಮಾಡಿದನೋ, ಅದೇ ರೀತಿ ಕೆಳ ಸಮುದಾಯದ ಜನರನ್ನು ದಾಸ್ಯಕ್ಕೆ ತಳ್ಳಿ, ದೇಶದಲ್ಲಿ ದರ್ಬಾರ್ ಮಾಡಲು ಬಿಜೆಪಿ ಹೊರಟಿದೆ. ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಈ ಚಳವಳಿ ಶುಕ್ರವಾರದಿಂದ ಜಿಲ್ಲಾ ಮಟ್ಟದಲ್ಲೂ ನಡೆಯಲಿದೆ. ಬಿಜೆಪಿ ಸೇರಿದರೆ ಎಲ್ಲ ಕೇಸ್ ವಜಾ ಮಾಡುವ ಆಮಿಷವೊಡ್ಡಿ ಕಾಂಗ್ರೆಸ್ ನಾಯಕರನ್ನು ಬೆದರಿಸಲಾಗುತ್ತಿದೆ. ಡಿ. ಕೆ. ಶಿವಕುಮಾರ್ ಅವರಿಗೂ ಈ ಅನುಭವ ಆಗಿದೆ. ಹಿಟ್ಲರ್ ತನ್ನ ಕಾಲದಲ್ಲಿ ಮಾಡುತ್ತಿದ್ದುದನ್ನೇ ನರೇಂದ್ರ ಮೋದಿ ಈಗ ಮಾಡುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಕಟು ವಾಗ್ದಾಳಿ ನಡೆಸಿದರು.
‘ರಾಜಕೀಯ ವಿರೋಧಿಗಳು ಇರಬಾರದು ಎಂಬ ದುರುದ್ಧೇಶದಿಂದ ಬಿಜೆಪಿ ಷಡ್ಯಂತ್ರ ರೂಪಿಸಿ ಎಐಸಿಸಿ ನಾಯಕರಿಗೆ ಕಿರುಕುಳ ನೀಡುತ್ತಿದ್ದಾರೆ. ಅದಕ್ಕಾಗಿ ಇ.ಡಿ, ಐಟಿ ಮತ್ತು ಸಿಬಿಐ ಛೂ ಬಿಟ್ಟಿದ್ದಾರೆ’ ಎಂದು ಮಾಜಿ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ.