ಗರ್ಭಿಣಿ ಮೇಲೆ ಹರಿದ ಟ್ರಕ್.. ಗರ್ಭ ಒಡೆದು ಹೊರಬಂದ ಮಗು

ಆಗ್ರಾ: ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಅಪಘಾತದಲ್ಲಿ ಎಂಟು ತಿಂಗಳ ಗರ್ಭಿಣಿ ತಾಯಿಯ ಗರ್ಭದಿಂದ ಹೆಣ್ಣು ಮಗುವೊಂದು ಪವಾಡ ಸದೃಶವಾಗಿ ಹೊರಬಂದಿದೆ.
ಮಗುವನ್ನು ಫಿರೋಜಾಬಾದ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾರ್ಖಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಬರ್ತಾರಾ ಗ್ರಾಮದ ಬಳಿ ಅಪಘಾತ ಸಂಭವಿಸಿದೆ ಎಂದು ಎಸ್‌ಎಚ್‌ಒ ಫತೇ ಬಹದ್ದೂರ್ ಸಿಂಗ್ ಬಧೋರಿಯಾ ಹೇಳಿದ್ದಾರೆ.
26 ವರ್ಷದ ಮಹಿಳೆಯನ್ನು ಆಗ್ರಾ ನಿವಾಸಿ ಕಾಮಿನಿ ಎಂದು ಗುರುತಿಸಲಾಗಿದೆ. ಆಕೆ ಮತ್ತು ಆಕೆಯ ಪತಿ ಕೋಟ್ಲಾ ಫರಿಹಾ ಪ್ರದೇಶದಲ್ಲಿರುವ ತನ್ನ ಪೋಷಕರ ಮನೆಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಡೆಯಲು ಯತ್ನಿಸಿದ ಆಕೆಯ ಪತಿ ರಾಮು ಬೈಕ್‌ನ ನಿಯಂತ್ರಣ ಕಳೆದುಕೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಕಾಮಿನಿ ಕೆಳಗೆ ಬಿದ್ದಿದ್ದು, ಹಿಂದಿನಿಂದ ಬಂದ ಟ್ರಕ್ ಆಕೆಯ ಮೇಲೆ ಹರಿದಿದೆ.
ಪರಿಣಾಮ ಕಾಮಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನವಜಾತ ಶಿಶು ಸುರಕ್ಷಿತವಾಗಿದ್ದು, ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಬೈಕ್ ಚಲಾಯಿಸುತ್ತಿದ್ದ ಮಗುವಿನ ತಂದೆಯೂ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಳಿಕ ಟ್ರಕ್ ಚಾಲಕ ಪರಾರಿಯಾಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದಾರೆ.
ಪತಿಯ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗುವುದು ಎಂದು ಎಸ್‌ಎಚ್‌ಒ ಬಧೋರಿಯಾ ಹೇಳಿದ್ದಾರೆ.