ಗರೀಬ್ ಕಲ್ಯಾಣ್ ಅನ್ನ ಯೋಜನೆ ವಿಸ್ತರಣೆ

ವಿಶ್ವದ ಅತಿದೊಡ್ಡ ಆಹಾರ ಭದ್ರತಾ ಕಾರ್ಯಕ್ರಮವೆಂದಿನಿಸಿರುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಉಚಿತ ಪಡಿತರ ವಿತರಣೆಯನ್ನು ಮತ್ತೆ ೩ ರಿಂದ ೬ ತಿಂಗಳುಗಳ ಕಾಲ ಕೇಂದ್ರ ಸರ್ಕಾರ ವಿಸ್ತರಿಸುವ ಸಾಧ್ಯತೆ ಹೆಚ್ಚಿದೆ.
ದೇಶದ ೮೦ ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ವಿತರಿಸುವ ಯೋಜನೆ ಗಡುವು ಸೆಪ್ಟಂಬರ್ ಅಂತ್ಯಕ್ಕೆ ಮುಗಿಯಲಿದ್ದು ಆ ಬಳಿಕ ಮತ್ತೆ ಮಹತ್ವಾಕಾಂಕ್ಷೆ ಯೋಜನೆಯನ್ನು ಮುಂದುವರಿಸುವ ಸಾಧ್ಯತೆ ಹೆಚ್ಚಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.ಈ ಯೋಜನೆಯಡಿ ಪಡಿತರ ಪೂರೈಕೆಗೆ ಸಾಕಷ್ಟು ಪ್ರಮಾಣದಲ್ಲಿ ಆಹಾರ ಧಾನ್ಯಗಳ ದಾಸ್ತಾನು ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.ಹೆಚ್ಚಿನ ಹಣದುಬ್ಬರ, ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳು ಮತ್ತು ಜಾಗತಿಕ ಪೂರೈಕೆ ಸರಪಳಿಯನ್ನು ಚೀನಾ ಅಡ್ಡಿಪಡಿಸುವುವಿಕೆ ಸೇರಿದಂತೆ, ವಿವಿಧ ಕಾರಣದಿಂದ ದೇಶದ ಬಡವರಿಗೆ ಉಚಿತ ಪಡಿತರ ನೀಡುವುದನ್ನು ಸರ್ಕಾರ ಮುಂದುವರಿಸಲು ಕೇಂದ್ರ ಮುಂದಾಗಿದೆ ಎಂದು ಉನ್ನತಾಧಿಕಾರಿಗಳು ಈ ವಿಷಯ ತಿಳಿಸಿದ್ದಾರೆ.
ಕೋವಿಡ್ -೧೯ ಸೋಂಕು ಕಾಣಿಸಿಕೊಂಡ ನಂತರ ಲಾಕ್‌ಡೌನ್‌ನಿಂದ ಬಡವರನ್ನು ರಕ್ಷಿಸಲು ೨೦೨೦ರ ಏಪ್ರಿಲ್ ನಲ್ಲಿ ಉಚಿತ ಪಡಿತರ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿತ್ತು. ಕಳೆದ ಮಾರ್ಚ್‌ನಲ್ಲಿ ಆರನೇ ಬಾರಿಗೆ ಯೋಜನೆಯನ್ನು ವಿಸ್ತರಿಸಲಾಗಿತ್ತು.
ಅಗತ್ಯ ದಾಸ್ತಾನು:ವಿಶ್ವದ ಅತಿದೊಡ್ಡ ಆಹಾರ ಭದ್ರತಾ ಯೋಜನೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಗಾಗಿ ಸಾಕಷ್ಟು ಆಹಾರ ಧಾನ್ಯಗಳ ದಾಸ್ತಾನು ಇದೆ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ತಿಳಿಸಿದೆ.
ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಮೀರಿ ಕಾರ್ಯಕ್ರಮ ಬೆಂಬಲಿಸಲು ಸಾಕಷ್ಟು ಸಂಖ್ಯೆಯಲ್ಲಿ ಪಡಿತರವಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.ಈ ಯೋಜನೆಯಡಿ ಫಲಾನುಭವಿಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ತಮ್ಮ ಸಾಮಾನ್ಯ ಆಹಾರ ಧಾನ್ಯಗಳ ಕೋಟಾದ ಜೊತೆಗೆ ಪ್ರತಿ ವ್ಯಕ್ತಿಗೆ ತಿಂಗಳಿಗೆ ೫ ಕೆಜಿ ಉಚಿತ ಪಡಿತರ ನೀಡುವ ಯೋಜನೆ ಇದಾಗಿದೆ.