ಗಣೇಶ ಪ್ರತಿಷ್ಠಾಪನೆಗೆ ಬರುವ ಅರ್ಜಿಗಳ ತ್ವರಿತ ಅನುಮತಿಗೆ ಆಯುಕ್ತರ ಸೂಚನೆ

ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಬರುವ ಅರ್ಜಿಗಳನ್ನು ಪರಿಶೀಲಿಸಿ ತ್ವರಿತವಾಗಿ ಅನುಮತಿ ನೀಡಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗಣೇಶ ಚತುರ್ಥಿ ಆಚರಣೆ ಸಂಬಂಧ ಇಂದು ನಡೆದ ವರ್ಚುವಲ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಗಣೇಶೋತ್ಸವ ಆಚರಣೆಗೆ ಅನುಕೂಲವಾಗುವ ದೃಷ್ಟಿಯಿಂದ ಬಿಬಿಎಂಪಿ, ಬೆಸ್ಕಾಂ, ಪೊಲೀಸ್ ಹಾಗೂ ಅಗ್ನಿಶಾಮಕ ಇಲಾಖೆಯನ್ನೊಳಗೊಂಡ ಅಧಿಕಾರಿಗಳು 63 ಉಪ ವಿಭಾಗಗಳಲ್ಲಿ ಏಕಗವಾಕ್ಷಿ ಪದ್ಧತಿಯಲ್ಲಿ ಅನುಮತಿ ನೀಡುವ ವ್ಯವಸ್ಥೆ ಕಲ್ಪಿಸಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಬಂದ ಅರ್ಜಿಗಳನ್ನು ಪರಿಶೀಲಿಸಿ ತ್ವರಿತವಾಗಿ ಅನುಮತಿ ನೀಡಲು ಸೂಚನೆ ನೀಡಿದರು.
ನಗರದಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಪ್ರಮುಖ ಕಲ್ಯಾಣಿಗಳಾದ ಹಲಸೂರು, ಯಡಿಯೂರು, ಸ್ಯಾಂಕಿ, ಹೆಬ್ಬಾಳ ಸೇರಿದಂತೆ ಇನ್ನಿತರೆ ಪ್ರಮುಖ ಕಲ್ಯಾಣಿಗಳನ್ನು ಸ್ವಚ್ಛತೆ ಮಾಡಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು. ಕಲ್ಯಾಣಿಗಳ ಬಳಿ ಪ್ರತ್ಯೇಕ ತಂಡಗಳನ್ನು ನಿಯೋಜಿಸಿಕೊಳ್ಳಿ ಹಾಗೂ ನುರಿತ ಈಜುಗಾರರಿರಬೇಕು.
ಮುಂಜಾಗ್ರತಾ ಕ್ರಮವಾಗಿ ಎಸ್‍ಡಿಆರ್‍ಎಫ್ ಹಾಗೂ ಫೈಯರ್ ಇಲಾಖೆಗೆ ಅಗ್ನಿಶಾಮಕ ವಾಹನ ಹಾಗೂ ಅಗತ್ಯ ಸಿಬ್ಬಂದಿಯ ವ್ಯವಸ್ಥೆ ಕಲ್ಪಿಸಲು ಕೂಡಲೆ ಪತ್ರ ಬರೆಯಬೇಕು ಎಂದು ಯೋಜನಾ ವಿಭಾಗದ ವಿಶೇಷ ಆಯುಕ್ತರಿಗೆ ಸೂಚನೆ ನೀಡಿದರು.
ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ವೇಳೆ ಗಣೇಶ ಮೂರ್ತಿಗಳಿಗೆ ಯಾವುದೇ ರೀತಿಯ ವಿಘ್ನ/ಲೋಪವಾಗದಂತೆ ವಿಸರ್ಜಿಸಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಿ. ವಿಸರ್ಜನಾ ಸ್ಥಳದಲ್ಲಿ ಭದ್ರತಾ ದೃಷ್ಟಿಯಿಂದ ಪಾಲಿಕೆ ಅಧಿಕಾರಿಗಳು, ಮಾರ್ಷಲ್‍ಗಳ ನಿಯೋಜನೆ, ಬ್ಯಾರಿಕೇಡಿಂಗ್, ದೀಪಗಳ ಅಳವಡಿಕೆ, ಸಿಸಿಟಿವಿ, ಕ್ರೇನ್ ಸೇರಿದಂತೆ ಇನ್ನಿತರೆ ಅಗತ್ಯ ವ್ಯವಸ್ಥೆ ಮಾಡಿಕೊಂಡು ಯಾವುದೇ ರೀತಿಯ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.
ಕಲ್ಯಾಣಿಗಳ ವ್ಯವಸ್ಥೆ ಇಲ್ಲದಿರುವ ಕಡೆ ಹೆಚ್ಚುವರಿಯಾಗಿ ತಾತ್ಕಾಲಿಕ ಮೊಬೈಲ್ ಟ್ಯಾಂಕರ್‍ಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲು ತೆರಳುವ ಮಾರ್ಗದಲ್ಲಿ ವಿದ್ಯುತ್ ದೀಪಗಳು ಸರಿಯಾಗಿರುವಂತೆ ನೋಡಿಕೊಳ್ಳಬೇಕು.
ವಿಸರ್ಜನಾ ಸ್ಥಳದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಘನತ್ಯಾಜ್ಯ ವಿಭಾಗದಿಂದ ತ್ವರಿತವಾಗಿ ವಿಲೇವಾರಿ ಮಾಡಲು ಸೂಚನೆ ನೀಡಿದರು.ಸಭೆಯಲ್ಲಿ ಎಲ್ಲಾ ವಲಯ ಆಯುಕ್ತರು, ವಲಯ ಜಂಟಿ ಆಯುಕ್ತರು, ಆಡಳಿತದ ವಿಭಾಗದ ಉಪ ಆಯುಕ್ತರು, ಮುಖ್ಯ ಅಭಿಯಂತರರು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.