ಗಂಧದ ಗುಡಿ ಟ್ರೈಲರ್ಗೆ ಮೋದಿ ಮೆಚ್ಚುಗೆ: ಅಪ್ಪುವಿನ ಕೊನೆಯ ಪ್ರಯತ್ನಕ್ಕೆ ಶುಭಕೋರಿದ ಪ್ರಧಾನಿ

ಬಿಡುಗಡೆಯಾಗಿರುವ ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರು ಕೊನೆಯದಾಗಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಗಂಧದ ಗುಡಿ ಟ್ರೈಲರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚಿಕೊಂಡಿದ್ದಾರೆ.
ಟ್ರೈಲರ್ ಬಿಡುಗಡೆ ಬೆನ್ನಲ್ಲೇ ಯೂಟ್ಯೂಬ್ ಲಿಂಕ್ ಅನ್ನು ಶೇರ್ ಮಾಡಿ ಟ್ವೀಟ್ ಮಾಡಿರುವ ಅಶ್ವಿನಿ ಪುನೀತ್ ರಾಜ್ಕುಮಾರ್, ನಮಸ್ತೆ ನರೇಂದ್ರ ಮೋದಿ ಅವರೇ ಇಂದು ನಮಗೆ ಭಾವನಾತ್ಮಕ ದಿನವಾಗಿದೆ.
ಅಪ್ಪು ಹೃದಯಕ್ಕೆ ತುಂಬಾ ಹತ್ತಿರವಾದ ಗಂಧದ ಗುಡಿಯ ಟ್ರೈಲರ್ ಅನ್ನು ನಾವು ಬಿಡುಗಡೆ ಮಾಡಿದ್ದೇವೆ. ಅಪ್ಪು ಯಾವಾಗಲೂ ನಿಮ್ಮೊಂದಿಗಿನ ಸಂವಹನವನ್ನು ಇಷ್ಟಪಡುತ್ತಿದ್ದರು ಮತ್ತು ನಿಮ್ಮೊಂದಿಗೆ ವೈಯಕ್ತಿಕವಾಗಿ ಹಂಚಿಕೊಳ್ಳಲು ಇಷ್ಟಪಡುತ್ತಿದ್ದರು ಎಂದು ಮೋದಿ ಅವರನ್ನು ಟ್ಯಾಗ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ ಅಪ್ಪು ಅವರು ವಿಶ್ವಾದ್ಯಂತ ಲಕ್ಷಾಂತರ ಹೃದಯಗಳಲ್ಲಿ ಜೀವಿಸುತ್ತಿದ್ದಾರೆ. ಅವರು ತೇಜಸ್ಸು, ಉತ್ಸಾಹದಿಂದ ತುಂಬಿದ ಮತ್ತು ಅಪ್ರತಿಮ ಪ್ರತಿಭೆಯಿಂದ ಆಶೀರ್ವದಿಸಿದ ವ್ಯಕ್ತಿಯಾಗಿದ್ದರು. ಅವರ ಗಂಧದ ಗುಡಿಯು ಪ್ರಕೃತಿ ಮಾತೆಗೆ, ಕರ್ನಾಟಕದ ನೈಸರ್ಗಿಕ ಸೌಂದರ್ಯ ಮತ್ತು ಪರಿಸರ ಸಂರಕ್ಷಣೆಗೆ ಸಲ್ಲಿಸಿದ ಗೌರವವಾಗಿದೆ. ಈ ಪ್ರಯತ್ನಕ್ಕೆ ನನ್ನ ಶುಭಾಶಯಗಳು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಅಂದಹಾಗೆ ಗಂಧದ ಗುಡಿ ಸಾಕ್ಷ್ಯಾಚಿತ್ರದಲ್ಲಿ ಕರ್ನಾಟಕದ ಅರಣ್ಯಗಳು ಹಾಗೂ ವನ್ಯಜೀವಿ ಪ್ರಪಂಚದ ಅದ್ಭುತ ದೃಶ್ಯವೈಭವವಿದೆ. ಇದಕ್ಕಾಗಿ ಪುನೀತ್ ಇಡೀ ಕರುನಾಡನ್ನು ಸುತ್ತಿದ್ದರು. ಅಪ್ಪು ಅಕಾಲಿಕ ಮರಣ ಹಿನ್ನೆಲೆಯಲ್ಲಿ ಗಂಧದ ಗುಡಿ ಸಾಕ್ಷ್ಯಾ ಚಿತ್ರಕ್ಕೆ ಸಿನಿಮಾ ರೂಪ ಕೊಟ್ಟು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಇದೇ ಅ.28ಕ್ಕೆ ಗಂಧದ ಗುಡಿ ಬಿಡುಗಡೆಯಾಗುತ್ತಿದೆ.
ಗಂಧದ ಗುಡಿ ಟ್ರೈಲರ್ ಮೈ ಝಮ್ ಅನ್ನುವಂತಿದೆ. ಸ್ಕೂಬಾ ಡೈವಿಂಗ್, ವನ್ಯ ಜೀವಿ, ಕಾಡುಗಳಲ್ಲಿ ಅಪ್ಪು ಪಯಣ ಸೇರಿದಂತೆ ಅನೇಕ ಸುಮಧುರ ಕ್ಷಣಗಳು ಟ್ರೈಲರ್ನಲ್ಲಿದ್ದು, ಕರ್ನಾಟಕದ ನೆಲ-ಜಲವನ್ನು ಸೊಗಸಾಗಿ ಚಿತ್ರೀಕರಿಸಲಾಗಿದೆ.