ಅಪರಾಧ

ಗಂಡ ಹೆಂಡತಿ ಜಗಳದಲ್ಲಿ ಮಗನನ್ನೇ ಕೊಂದ ಪಾಪಿ ತಂದೆ…!

ಬೆಳಗಾವಿ: ಅಪ್ಪ ಅಮ್ಮನ ನಡುವೆ ಕೂಸು ಬಡವಾಯಿತು ಅಂತಾರೆ… ಆದ್ರೇ ಇಲ್ಲಿ ಅಪ್ಪ ಅಮ್ಮನ ಜಗಳಕ್ಕೆ ಮುದ್ದಾದ ಕೂಸು ಬಲಿಯಾಗಿದೆ. ಹೆಂಡತಿಯ ಮೇಲಿನ ಸಂಶಯ ಇಬ್ಬರ ನಡುವೆ ಜಗಳ, ಕೊಲೆ ಹಂತಕ್ಕೆ ತಲುಪಿದ್ದು ಮಗು ಬಲಿಯಾಗಿದೆ.

ಅಷ್ಟಕ್ಕೂ ಬೆಳಗಾವಿಯಲ್ಲಿ ಗಂಡ ಹೆಂಡತಿ ಜಗಳದ ನಡುವೆ ಮಗು ಮರ್ಡರ್ ಆಗಿದ್ದು ಹೇಗೆ? ಅದ್ಯಾವ ಕಾರಣಕ್ಕೆ ಇಬ್ಬರ ನಡುವೆ ಜಗಳ? ಆಗಿದ್ದು ಏಕೆ? ಕಬ್ಬಿನ ಗದ್ದೆಗೆ ಔಷಧಿ ಸಿಂಪಡಿಸಲು ಹೋದ ಪಾಪಿ ತಂದೆ ಮಗನ ರಕ್ತ ಚಿಮ್ಮಿಸಿದ್ದು ಯಾಕೆ… ಇಲ್ಲಿದೆ ಡೀಟೇಲ್ ವರದಿ.

ಹೌದು, ಅಪ್ಪ ಅಂದ್ರೇ ಆಕಾಶ… ಅಮ್ಮ ತನ್ನ ಮಗುವನ್ನ ಕಂಕಳಲ್ಲಿ ಕೂರಿಸಿ ಜೋಪಾನ ಮಾಡಿದ್ರೇ ಅಪ್ಪ ಮಗನನ್ನ ತನ್ನ ಹೆಗಲ ಮೇಲೆ ಕೂರಿಸಿಕೊಂಡು ತಾನು ನೋಡಲಾರದ್ದನ್ನೂ ತನ್ನ ಮಗ ನೋಡಲಿ ಎಂದು ಬಯಸುವ ಹೃದಯ ಅಂತಾರೆ. ಆದ್ರೇ ಇಲ್ಲೊಬ್ಬ ಪಾಪಿ ತಂದೆ ಮಾಡಿದ ಕೆಲಸ ಕೇಳಿದ್ರೆ ಎಂಥವರ ರಕ್ತವೂ ಕುದಿಯುತ್ತೆ. ಈ ಪಾಪಿಯ ಹೆಸರು ಮುತ್ತೆಪ್ಪ ಅಂತಾ.

ಈತ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಶಿಲ್ತಿಭಾಂವಿ ಗ್ರಾಮದ ನಿವಾಸಿ. 5 ವರ್ಷಗಳ ಹಿಂದೆ ಈ ಮತ್ತೆಪ್ಪನಿಗೂ ಹಾಗೂ ಲಕ್ಷ್ಮೀಗೂ ಮದುವೆಯಾಗಿ ಅವರ ಸಂಸಾರಕ್ಕೆ ಸಾಕ್ಷಿ ಎಂಬಂತೆ ಬಾಳೇಶ್ ಎಂಬ ಮುದ್ದಾದ ಗಂಡು ಮಗೂ ಕೂಡ ಜನಿಸಿತ್ತು. ಕುಡಿತದ ಚಟಕ್ಕೆ ಬಿದ್ದಿದ್ದ ಗಂಡ ಮುತ್ತೆಪ್ಪನ ಹಿಂಸೆ ತಾಳಲಾರದೆ ಲಕ್ಷ್ಮೀ ತನ್ನ ತವರು ಮನೆಗೆ ಹೋಗಿದ್ದಳು.

ಒಂದೂವರೆ ವರ್ಷಗಳ ಕಾಲ ತವರು ಮನೆಯಲ್ಲಿದ್ದ ಲಕ್ಷ್ಮೀಯನ್ನ ಕೆಲ ದಿನಗಳ ಹಿಂದೆ ಹಿರಿಯರೆಲ್ಲ ರಾಜಿ ಪಂಚಾಯ್ತಿ ಮಾಡಿ ಗಂಡ ಹೆಂಡತಿಯನ್ನು ಒಂದು ಮಾಡುವಲ್ಲಿ ಯಶಸ್ವಿಯಾಗಿದ್ದರು. ಒಂದು ತಿಂಗಳ ಹಿಂದಷ್ಟೇ ಗಂಡನ ಮನೆಗೆ ಬಂದಿದ್ದ ಲಕ್ಷ್ಮೀ ಜತೆಗೆ ಮುತ್ತೆಪ್ಪ ಅನ್ನೋನ್ಯವಾಗಿದ್ದ.

ಕುಡಿಯುವುದನ್ನು ಕೂಡ ಕಡಿಮೆ ಮಾಡಿದ್ದ. ಆದರೆ, ಮುತ್ತೆಪ್ಪನಿಗೆ ಇತ್ತಿಚೀನ ದಿನಗಳಲ್ಲಿ ಹೆಂಡತಿ ಲಕ್ಷ್ಮೀ ಮೇಲೆ ಸಂಶಯ ಮೂಡಲು ಶುರು ಆಗಿತ್ತಂತೆ. ಇದೇ ಕಾರಣಕ್ಕೆ ಹೆಂಡತಿಯ ಜತೆಗೆ ಆಗಾಗ ಜಗಳವಾಡ್ತಿದ್ದ ಮುತ್ತೆಪ್ಪ ನಿನ್ನೆ ಕೂಡ ಜಗಳ ಮಾಡಿಕೊಂಡು ಹೆಂಡತಿಯನ್ನ ಕೊಲ್ಲಲು ಹೋಗಿ ಮಧ್ಯ ಬಂದ ಮಗನನ್ನ ತನ್ನ ಕೈಯಾರೆ ಕೊಂದು ಪೊಲೀಸರಿಗೆ ಶರಣಾಗಿದ್ದಾನೆ…

ಅಷ್ಟಕ್ಕೂ ಜಮೀನಿನಲ್ಲಿ ಕೆಲಸ ಮಾಡುವುದರ ಜತೆಗೆ ಜಮೀನಿನಲ್ಲಿ ಕೆಲಸ ಇಲ್ಲದಾಗ ಕೂಲಿ ಕೆಲಸಕ್ಕೂ ಮುತ್ತೆಪ್ಪ ಹೋಗ್ತಿದ್ದನಂತೆ. ಅದರಂತೆ ನಿನ್ನೆ ಕೆಲಸಕ್ಕೆ ಹೋಗಿದ್ದರ ವೇತನ ಬಂದಿದೆ ಹೀಗಾಗಿ ತಾಯಿಗೆ ಹೇಳಿ ನಿನ್ನೆ ಸಂತೆಗೆ ಹೋಗಿದ್ದ ಮುತ್ತೆಪ್ಪ ಸರಿಯಾಗಿ ಎಣ್ಣೆ ಹೊಡ್ಕೊಂಡು ಬಂದಿದ್ದ.

ಇದನ್ನ ನೋಡಿದ ಹೆಂಡತಿ ಮತ್ತೆ ಮುತ್ತೆಪ್ಪನ ಜತೆಗೆ ಜಗಳವಾಡುತ್ತಲೇ ಆತ ತಂದಿದ್ದ ತರಕಾರಿ ಮತ್ತು ಸಾಮಾಗ್ರಿಗಳನ್ನ ತೆಗೆದಿಟ್ಟಿದ್ದಾಳೆ. ಬಳಿಕ ಹೆಂಡತಿ ಮಗನನ್ನು ಕರೆದುಕೊಂಡು ಮುತ್ತೆಪ್ಪ ಕಬ್ಬಿನ ಗದ್ದೆಯತ್ತ ಹೆಜ್ಜೆ ಹಾಕಿದ್ದ.ಕಬ್ಬಿನ ಗದ್ದೆಗೆ ಔಷಧಿ ಸಿಂಪಡಿಸಲು ಹೋಗಿದ್ದ ದಂಪತಿ:

ಕಬ್ಬಿನ ಬೆಳೆಗೆ ಔಷಧಿ ಸಿಂಪಡಿಸೋಣ ಬಾ ಅಂತಾ ಮನೆಯಲ್ಲಿದ್ದ ಹೆಂಡತಿ ಮಗುವನ್ನು ಕರೆದುಕೊಂಡು ಹೊಲದತ್ತ ಹೆಜ್ಜೆ ಹಾಕಿದ್ದ ಮುತ್ತೆಪ್ಪ. ಗಂಡ ಹೆಂಡತಿ ಇಬ್ಬರೂ ಸಹ ಹೊಲದಲ್ಲಿ ಮಾತನಾಡುತ್ತಾ ಕುಳಿತುಕೊಂಡರೆ ಏನೂ ತಿಳಿಯದ 5 ವರ್ಷದ ಮಗು ಬಾಳೇಶ್ ಹೊಲದಲ್ಲಿ ಆಟವಾಡಲು ಶುರುಮಾಡಿದ್ದ.

ಈ ಮಧ್ಯೆ ದಂಪತಿಗಳ ನಡುವೆ ಇದ್ದಕ್ಕಿದ್ದಂತೆ ಜಗಳ ಆರಂಭವಾಗಿದೆ. ಸರಿಯಾಗಿ ಎಣ್ಣೆ ಏರಿಸಿ ಬಂದಿದ್ದ ಮುತ್ತೆಪ್ಪನಿಗೆ ಪಿತ್ತ ನೆತ್ತಿಗೇರಿತ್ತು‌. ಹೆಂಡತಿ ಮೇಲೆ ಸಂಶಯ ಪಡ್ತಿದ್ದ ಮುತ್ತೆಪ್ಪ ನಿನ್ನೆ ಉಳಿಸುವುದಿಲ್ಲ ಅಂತಾ ಕೈಯಲ್ಲಿದ್ದ ಕುಡಗೋಲು ಹೊರ ತೆಗೆದಿದ್ದಾನೆ. ಆಗ ಲಕ್ಷ್ಮೀ ಹಾಕು ನೋಡೋಣ ಅಂತಾ ಸವಾಲ್ ಹಾಕಿದ್ದಾಳೆ.

ಈ ವೇಳೆ ಆಟವಾಡ್ತಿದ್ದ ಮಗು ಏಕಾಏಕಿ ಅಡ್ಡ ಬಂದಿದ್ದು ತಾಯಿಗೆ ಬೀಳುವ ಏಟು ಮಗನಿಗೆ ಬಿದ್ದು ಮಗ ಬಾಳೇಶ್ ಮೃತಪಟ್ಟಿದ್ದಾನೆ. ಆಗ ಬಾಳೇಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದು ಕಂಡು ಮತ್ತಷ್ಟು ಕೆರಳಿದ ಮುತ್ತೆಪ್ಪ ತನ್ನ ಹೆಂಡತಿ ಲಕ್ಷ್ಮೀ ಮೇಲೂ ಹಲ್ಲೆಗೆ ಮುಂದಾಗಿದ್ದಾನೆ.

ಆಕೆಯ ಕುತ್ತಿಗೆ ಭಾಗಕ್ಕೂ ಗಂಭೀರವಾಗಿ ಗಾಯವಾಗಿದ್ದು ಲಕ್ಷ್ಮೀ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಇಷ್ಟೆಲ್ಲಾ ಕ್ರೌರ್ಯ ಮೆರೆದ ಪಾಪಿ ಮುತ್ತೆಪ್ಪ ಬಳಿಕ ಅಲ್ಲಿಂದ ಗೋಕಾಕ‌ ಗ್ರಾಮೀಣ ಠಾಣೆಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ. ಆದರೆ ಘಟನೆಯಲ್ಲಿ ಅದೃಷ್ಟವಷಾತ್ ಲಕ್ಷ್ಮೀ ಬದುಕುಳಿದಿದ್ದು ಗೋಕಾಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ವರದಿ ಆಗಿದೆ.

ಒಟ್ಟಿನಲ್ಲಿ ಗಂಡ ಹೆಂಡತಿ ನಡುವಿನ ಜಗಳದಲ್ಲಿ ಇದೀಗ ಏನೂ ಅರಿಯದ ಕಂದಮ್ಮ ಬಲಿಯಾಗಿದೆ. ಹೆಂಡತಿಯ ಮೇಲೆ ಸಂಶಯ ಪಡ್ತಿದ್ದ ಮುತ್ತೆಪ್ಪ ಹೆಂಡತಿಯನ್ನ ಏನಾದ್ರೂ ಮಾಡಿದ್ರೂ ಯಾರು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಆದ್ರೇ ಇವರಿಬ್ಬರ ನಡುವೆ ಮುದ್ದಾದ ಮಗುವನ್ನ ಬಲಿ ಪಡೆದಿದ್ದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

ಸದ್ಯ ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದು ಮೊಮ್ಮಗನೂ ಇಲ್ಲ, ಮಗನೂ ಇಲ್ಲದೇ ಎರಡು ಹಿರಿ ಜೀವಗಳು ಇದೀಗ ಬೀದಿಗೆ ಬಂದಿದ್ದು ಮಾತ್ರ ದುರ್ದೈವ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button