ಖಾದ್ಯ ತೈಲ 20 ರೂಪಾಯಿ ಅಗ್ಗ!

ಖಾದ್ಯ ತೈಲ ಬೆಲೆ ಇಳಿಕೆ: ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಆಹಾರ ಸಚಿವಾಲಯವು ಬುಧವಾರ ಆಯೋಜಿಸಿದ್ದ ಖಾದ್ಯ ತೈಲ ಕಂಪನಿಗಳ ಸಭೆಯಲ್ಲಿ ಎಲ್ಲಾ ತೈಲ ಕಂಪನಿಗಳಿಗೆ ಅಡುಗೆ ಎಣ್ಣೆ ದರವನ್ನು ಕಡಿತಗೊಳಿಸುವಂತೆ ಸೂಚಿಸಿದೆ. ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಅನ್ವಯ ಅಡುಗೆ ಎಣ್ಣೆ ದರಗಳು ಪ್ರತಿ ಲೀಟರ್‌ಗೆ 20 ರೂ.ವರೆಗೆ ಇಳಿಕೆಯಾಗುವ ಸಾಧ್ಯತೆ ಇದೇ ಎಂದು ಹೇಳಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಇದರ ಹೊರತಾಗಿಯೂ, ದೇಶದಲ್ಲಿ ಖಾದ್ಯ ತೈಲಗಳ ಬೆಲೆಗಳು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಪರವಾಗಿ ಖಾದ್ಯ ತೈಲ ಆಮದುದಾರರು ಮತ್ತು ಉತ್ಪಾದಕರನ್ನು ಮಾತುಕತೆಗೆ ಕರೆಯಲಾಗಿತ್ತು. ಈ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ಕೆಲ ತೈಲ ಕಂಪನಿಗಳು ಬೆಲೆಯನ್ನು ಮತ್ತಷ್ಟು ಇಳಿಸಲು ಒಪ್ಪಿಗೆ ಸೂಚಿಸಿವೆ ಎಂದು ತಿಳಿದುಬಂದಿದೆ.
ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಪ್ರಕಾರ, ಮುಂದಿನ ದಿನಗಳಲ್ಲಿ ಅಡುಗೆಎಣ್ಣೆ ಬೆಲೆಯನ್ನು ಮತ್ತಷ್ಟು ಕಡಿತಗೊಳಿಸಬಹುದು. ಸದ್ಯದ ಪರಿಸ್ಥಿತಿಯಲ್ಲಿ ಪ್ರತಿ ಲೀಟರ್‌ಗೆ 20 ರೂ.ವರೆಗೆ ಇಳಿಕೆಯಾಗಲಿದೆ ಎಂದು ಸರ್ಕಾರದ ಮೂಲಗಳು ಅಂದಾಜಿಸಿವೆ.
ಅಡುಗೆಎಣ್ಣೆಯಲ್ಲಿ ಬೆಲೆ ಇಳಿಕೆ ಮಾಡುವುದು ಮಾತ್ರವಲ್ಲದೆ, ಕಡಿಮೆ ಬೆಲೆಯನ್ನು ಎಂಆರ್‌ಪಿಯಲ್ಲಿಯೂ ಪ್ರತಿಬಿಂಬಿಸುವಂತೆ ತೈಲ ಕಂಪನಿಗಳಿಗೆ ಸರ್ಕಾರ ಸೂಚನೆ ನೀಡಿದೆ. ಇದಕ್ಕಾಗಿ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಕಂಪನಿಗಳಿಂದ ಭರವಸೆ ವ್ಯಕ್ತವಾಗಿದೆ ಎಂದು ಹೇಳಲಾಗುತ್ತಿದೆ.
ಗಮನಾರ್ಹವಾಗಿ, ಕಳೆದ ಒಂದು ತಿಂಗಳಲ್ಲಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳ ಬೆಲೆ $ 400 ವರೆಗೆ ಕುಸಿದಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಕೊರತೆಯ ಲಾಭ ಸಾರ್ವಜನಿಕರಿಗೆ ತಲುಪಬೇಕು ಎಂಬುದು ಸರ್ಕಾರದ ಆಶಯ. ತೈಲ ಬೆಲೆಯನ್ನು ಲೀಟರ್‌ಗೆ 20 ರೂ.ಗಳಷ್ಟು ಕಡಿಮೆಯಾದರೆ ಹಣದುಬ್ಬರದಿಂದ ತತ್ತರಿಸಿರುವ ಜನರಿಗೆ ಕೊಂಚ ಪರಿಹಾರ ದೊರೆತಂತಾಗುತ್ತದೆ.