ಅಪರಾಧ

ಖಾಕಿ ಕೋಟೆಯೊಳಗೇ ಹಗಲು ದರೋಡೆ: ಮಂಗಳೂರು ಕೆಎಸ್‌ಆರ್‌ಪಿ 7ನೇ ಬೆಟಾಲಿಯನ್‌ನಲ್ಲಿ ಮರಗಳ ಅಕ್ರಮ ಮಾರಾಟ

ಮಂಗಳೂರು: ಹೊರವಲಯದ ಅಸೈಗೋಳಿಯಲ್ಲಿರುವ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ (ಕೆಎಸ್‌ಆರ್‌ಪಿ) ಪಡೆ 7ನೇ ಬೆಟಾಲಿಯನ್‌ನಲ್ಲಿ ಲಕ್ಷಾಂತರ ರೂ. ಬೆಲೆಬಾಳುವ ಮರಗಳನ್ನು ಅಕ್ರಮವಾಗಿ ಕಡಿದು ಮಾರಾಟ ಮಾಡಲಾಗಿದೆ.

ಹಲಸು, ಅಕೇಶಿಯಾ ಮರಗಳು ಮಾಯವಾಗಿದ್ದು, ಈ ಪ್ರಕರಣ ಸ್ವತಃ ಬೆಟಾಲಿಯನ್‌ನ ಸಿಬ್ಬಂದಿಗಳಲ್ಲೇ ಅಚ್ಚರಿ ಮೂಡಿಸಿದೆ.ಬೆಲೆಬಾಳುವ ಮರಗಳನ್ನು ಕಡಿಯಬೇಕಾದರೆ ಅರಣ್ಯ ಇಲಾಖೆಯ ಪರವಾನಗಿ ಅಗತ್ಯ. ಇದಕ್ಕೆ ಮೊದಲೇ ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು. ಉದ್ದೇಶ ಸ್ಪಷ್ಟವಾಗಿದ್ದರೆ ಮಾತ್ರ ಅರಣ್ಯ ಇಲಾಖೆಯಿಂದ ಟೆಂಡರ್‌ ಮೂಲಕ ಮರ ಕಡಿಯಲು ಅನುಮತಿ ನೀಡಲಾಗುತ್ತದೆ.

ಆದರೆ ಕೆಎಸ್‌ಆರ್‌ಪಿ 7ನೇ ಬೆಟಾಲಿಯನ್‌ ಎಂಟ್ರಿಯಾಗುವ ಪ್ರಧಾನ ಗೇಟ್‌ನಿಂದ ಕ್ಯಾಂಟೀನ್‌ಗೆ ತೆರಳುವ ಹಾದಿಯಲ್ಲಿ 6 ಹಲಸಿನ ಮರಗಳು, 1 ಅಕೇಶಿಯಾ ಮರ, ಕ್ಯಾಂಟೀನ್‌ ಸಮೀಪದಲ್ಲಿದ್ದ 1 ಮರ, ಕ್ವಾರ್ಟರ್ಸ್‌ ರೋಡ್‌ ಸಮೀಪ 2 ಮರಗಳು ಸೇರಿದಂತೆ ಒಟ್ಟು 10ಕ್ಕೂ ಅಧಿಕ ಮರಗಳನ್ನು ಅರಣ್ಯ ಇಲಾಖೆಗೆ ಗೊತ್ತೇ ಇಲ್ಲದಂತೆ ಮಾಯವಾಗಿದೆ.

ಸಾಕ್ಷಿ ಹೇಳುತ್ತಿವೆ ಬುಡ, ಗೆಲ್ಲುಗಳುಬೆಟಾಲಿಯನ್‌ ಅಧಿಕಾರಿಗಳು ಯಾರ ಅನುಮತಿಯನ್ನೂ ಪಡೆಯದೆ ಏಕಾಏಕಿ ಮರಗಳು ಮಾರಾಟ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಮರ ಕಡಿದಿರುವುದಕ್ಕೆ ಬೆಟಾಲಿಯನ್‌ ಕ್ಯಾಂಪಸ್‌ನಲ್ಲಿ ಮರದ ಬುಡಗಳು, ಒಣಗಿದ ಮರದ ಟೊಂಗೆಗಳು ಸಾಕ್ಷಿ ಹೇಳುತ್ತಿವೆ.

ಬೆಟಾಲಿಯನ್‌ನ ಆವರಣಕ್ಕೆ ಬೃಹತ್‌ ಕಾಂಪೌಂಡ್‌ ಇರುವ ಕಾರಣ ಒಳಗೆ ನಡೆದಿರುವ ಈ ಬೆಳವಣಿಗೆ ಹೊರಗೆ ಗೊತ್ತೇ ಆಗದಂತೆ ವ್ಯವಸ್ಥಿತವಾಗಿ ಮಾಡಲಾಗಿದೆ.ಹಿಂದೆಯೂ ಇದೇ ರೀತಿ ಬೆಟಾಲಿಯನ್‌ನಲ್ಲಿದ್ದ ಮರವನ್ನು ಅನಧಿಕೃತವಾಗಿ ಕಡಿದು ಮಾರಾಟ ಮಾಡಲಾಗಿದೆ ಎಂದು ಕೆಎಸ್‌ಆರ್‌ಪಿ ಮೂಲಗಳು ತಿಳಿಸಿವೆ.

ಮರಗಳನ್ನು ಅನಧಿಕೃತವಾಗಿ ಮಾರಾಟ ಮಾಡಿರುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಸೋರಿಕೆಯಾದ ವಿಷಯ ಹಿರಿಯ ಅಧಿಕಾರಿಗಳಿಗೆ ತಿಳಿಯುತ್ತಿದ್ದಂತೆ ಬೆಟಾಲಿಯನ್‌ ಪ್ರವೇಶ ದ್ವಾರದಲ್ಲೇ ಭದ್ರತೆ ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button