ಪೊಲೀಸ್ಬೆಂಗಳೂರುರಾಜ್ಯ

ಖಾಕಿ ಕುಟುಂಬಗಳಿಗೆ ವರ್ಗಾವಣೆ ಸಂಕಷ್ಟ; ಒತ್ತಡದಲ್ಲಿಯೇ ಕಾರ್ಯ ನಿರ್ವಹಣೆ; ಸರಕಾರಕ್ಕೆ ಪ್ರವೀಣ್‌ ಸೂದ್‌ ಪತ್ರ

ಬೆಂಗಳೂರು: ”ಸುಮಾರು ಐನೂರು ಕಿಲೋಮೀಟರ್‌ ದೂರದ ಬೆಳಗಾವಿ ನನ್ನೂರು. ಕೆಲ ದಿನಗಳ ಹಿಂದೆ ಮಗುವಿಗೆ ಹುಷಾರಿಲ್ಲ ಎಂದು ಗೊತ್ತಾಯ್ತು. ನಡುರಾತ್ರಿ ನನ್ನ ಪತ್ನಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು.

ನಾನು ರಾಜಧಾನಿಯ ಬಂದೋಬಸ್ತ್ ಕರ್ತವ್ಯದಲ್ಲಿದ್ದೆ. ಅನಾರೋಗ್ಯಪೀಡಿತ ಮಗುವನ್ನು ಮಾರನೇ ದಿನ ವಿಡಿಯೋ ಕಾಲ್‌ನಲ್ಲಿ ಮಾತನಾಡಿಸಿದ್ದಾಯ್ತು..,”

ಇವು ನಗರ ಪೊಲೀಸ್‌ ಕಮಿಷನರೇಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನ್ಸ್‌ಟೆಬಲ್‌ವೊಬ್ಬರ ದುಃಖದ ಮಾತುಗಳು.

ಹೌದು, 2021ರಲ್ಲಿ ಜಾರಿಗೆ ತಂದ ರಾಜ್ಯ ನಾಗರಿಕ ಸೇವಾ ತಿದ್ದುಪಡಿ ನಿಯಮ 16 (ಎ) ರದ್ದು ಸರಕಾರಿ ನೌಕರರಿಗೆ ಸಂಕಷ್ಟ ತಂದೊಡ್ಡಿದೆ. ರಾಜ್ಯ ಸರಕಾರಿ ನೌಕರ ದಂಪತಿ ‘ಕೌಟುಂಬಿಕ’ ಜೀವನಕ್ಕೆ ವಿಘ್ನ ಉಂಟಾಗಿದೆ.

ಅದರಲ್ಲೂ ಶಿಸ್ತಿನ ಇಲಾಖೆ ಆಗಿರುವ ಪೊಲೀಸ್‌ ಇಲಾಖೆ ಸಿಬ್ಬಂದಿ ತೊಳಲಾಟ ಅನುಭವಿಸುತ್ತಿದ್ದು, ಕರ್ತವ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ಪೊಲೀಸ್‌ ಇಲಾಖೆಯಲ್ಲಿ ಎಂಟು ತಿಂಗಳಿನಿಂದ ಪತಿ- ಪತ್ನಿ ವರ್ಗಾವಣೆ ಪ್ರಕರಣಗಳು ನನೆಗುದಿಗೆ ಬಿದ್ದಿವೆ. ಬೆಂಗಳೂರು ನಗರ ಕಮಿಷನರೇಟ್‌, ಎಂಟು ಪೊಲೀಸ್‌ ವಲಯಗಳಲ್ಲಿ ಪತಿ- ಪತ್ನಿ ವರ್ಗಾವಣೆ ನಡೆದಿಲ್ಲ. ಪರಿಣಾಮ ಕುಟುಂಬ ಒಂದು ಕಡೆ, ನೌಕರರು ಬೇರೊಂದು ಕಡೆ ಕೆಲಸ ಮಾಡುತ್ತಿದ್ದಾರೆ.

ಸೇವಾ ಜ್ಯೇಷ್ಠತೆ ಬಿಟ್ಟು ಕೊಟ್ಟು ಬೇರೆ ಘಟಕಗಳಿಗೆ ವರ್ಗಾವಣೆ ಆಗಲು ಬಯಸಿರುವ ಸಾವಿರಾರು ಪೊಲೀಸ್‌ ಸಿಬ್ಬಂದಿ ಮನವಿ ಅರ್ಜಿಗಳು ಹಿರಿಯ ಪೊಲೀಸ್‌ ಅಧಿಕಾರಿಗಳ ಕಡತಗಳಲ್ಲಿಯೇ ಉಳಿದುಕೊಂಡಿವೆ.

ಪತಿ/ಪತ್ನಿ ವರ್ಗಾವಣೆ, ಅಂತರ ವಲಯ ವರ್ಗಾವಣೆ ಕೋರಿ ಬರುತ್ತಿರುವ ಮನವಿ ಪತ್ರಗಳನ್ನು ಗಮನಿಸಿರುವ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಸರಕಾರದ ಗಮನಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಪೊಲೀಸ್‌ ಸಿಬ್ಬಂದಿ ದೈಹಿಕ ಹಾಗೂ ಮಾನಸಿಕ ಸ್ಥೈರ್ಯದಿಂದ ಕೆಲಸ ಮಾಡುವ ಅವಶ್ಯಕತೆ ಇರುವುದರಿಂದ ಜ್ಯೇಷ್ಠತಾ ನಿಯಮಗಳಿಗೆ ಒಳಪಟ್ಟು ಪತಿ/ಪತ್ನಿ ವರ್ಗಾವಣೆ ಮಾಡಲು ಅನುಮತಿ ನೀಡುವಂತೆ ಕೋರಿ ಡಿಜಿಪಿ ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಆದರೆ, ಸರಕಾರ ಮಾತ್ರ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

ಪತಿ/ಪತ್ನಿ ವರ್ಗಾವಣೆ ತೀರಾ ಅವಶ್ಯ ಎಂಬುದು ಸಂಕಷ್ಟಕ್ಕೆ ಒಳಗಾದ ಪೊಲೀಸ್‌ ಸಿಬ್ಬಂದಿ ಅಳಲು. ಸರಕಾರಕ್ಕೆ ಅವರು ಬರೆದಿರುವ ಪತ್ರದಲ್ಲಿ ಪೊಲೀಸ್‌ ಸಿಬ್ಬಂದಿ ಒತ್ತಡದಲ್ಲಿಯೇ ಕೆಲಸ ಮಾಡುತ್ತಾರೆ.

ಜತೆಗೆ, ಅವರ ಕುಟುಂಬದ ಯೋಗಕ್ಷೇಮ ನೋಡಿಕೊಳ್ಳುವ ಅನಿವಾರ್ಯತೆಯಿದೆ. ವೈದ್ಯಕೀಯ ಕಾರಣಗಳನ್ನು ಮುಂದಿಟ್ಟು ಪತಿ/ಪತ್ನಿ ವರ್ಗಾವಣೆ ಮನವಿಗಳು ಬಂದಿವೆ ಎಂದು ತಿಳಿಸಿದ್ದಾರೆ.

ರಾಜ್ಯ ನಾಗರಿಕ ಸೇವಾ ನಿಯಮ 16(ಎ) ಅನ್ವಯ ಈ ಹಿಂದೆ ಸೇವಾ ಜ್ಯೇಷ್ಠತೆ ಬಿಟ್ಟುಕೊಟ್ಟು ಬೇರೆ ಪೊಲೀಸ್‌ ವಲಯ, ಜಿಲ್ಲೆಗಳಿಗೆ ವರ್ಗಾವಣೆಯಾಗುವ ಅವಕಾಶವಿತ್ತು. ಪತಿ/ಪತ್ನಿ ಇಬ್ಬರು ಸರಕಾರಿ ನೌಕರರಾಗಿದ್ದರೆ, ಇಬ್ಬರೂ ಒಂದೇ ಜಿಲ್ಲೆಗೆ ವರ್ಗಾವಣೆ ಪಡೆಯಬಹುದಿತ್ತು.

ಆದರೆ, 16(ಎ) ರದ್ದುಪಡಿಸಿದ ನಂತರ ಅಂತರ ವಲಯ ವರ್ಗಾವಣೆಗೆ ಅವಕಾಶವಿಲ್ಲ. ಇದರಿಂದ ಪಿಎಸ್‌ಐ, ಎಎಸ್‌ಐ, ಪೊಲೀಸ್‌ ಕಾನ್ಸ್‌ಟೆಬಲ್‌ಗಳು ಹಾಗೂ ಇಲಾಖೆಯ ಗ್ರೂಪ್‌ (ಸಿ) (ಡಿ)ವೃಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಎಂಟು ತಿಂಗಳ ಹಿಂದೆ ಮದುವೆಯಾಗಿದ್ದೇನೆ. ಪತ್ನಿ ಸರಕಾರಿ ನೌಕರಿಯಲ್ಲಿರುವುದರಿಂದ ಉತ್ತರ ಕರ್ನಾಟಕ ಜಿಲ್ಲೆಯಲ್ಲಿದ್ದಾರೆ. ನಾನು ಬೆಂಗಳೂರಿನಲ್ಲಿದ್ದೇನೆ.

ಕೆಲಸದ ಒತ್ತಡ, ಸರಿಯಾದ ರಜೆಗಳು ಸಿಗದ ಕಾರಣ ಮನೆಗೆ ಹೋಗಿ ಮೂರು ತಿಂಗಳಾಗಿವೆ. ನಮ್ಮ ಕಷ್ಟ ಕೇಳುವವರು ಯಾರು? ಜ್ಯೇಷ್ಠತೆ ಆಧಾರದಲ್ಲಿ ನಾನು ಬೇರೆ ವಲಯಕ್ಕೆ ವರ್ಗಾವಣೆಯಾಗಲು ಅರ್ಹನಿದ್ದೇನೆ.

ಆದರೆ 16(ಎ)ಅನ್ವಯ ವರ್ಗಾವಣೆ ಸಿಗದ ಕಾರಣದಿಂದ ಕುಟುಂಬದಿಂದ ದೂರವಾಗಿದ್ದೇನೆ, ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್‌ ಸಿಬ್ಬಂದಿ ನೋವು ತೋಡಿಕೊಳ್ಳುತ್ತಾರೆ.

ಸಮಸ್ಯೆಗಳೇನು?

ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯ

ಸಂಬಂಧ, ಬಾಂಧವ್ಯಗಳಿಂದ ದೂರ

ಕಾರ್ಯಕ್ಷಮತೆ ಮೇಲೆ ಪ್ರತಿಕೂಲ

ಮಾನಸಿಕ ಆರೋಗ್ಯದ ಮೇಲೆ ಪರಿಣಾಮ

ಸರಕಾರಿ ನೌಕರ ‘ದಂಪತಿ’ ಒಂದೇ ವಲಯದಲ್ಲಿ ಕೆಲಸ ಮಾಡುವ ಅವಕಾಶವಿರಬೇಕು. 16(ಎ) ರದ್ದುಪಡಿಸಿರುವುದರಿಂದ ಗ್ರೂಪ್‌ ಸಿ, ಡಿ, ವೃಂದಕ್ಕೆ ಸಾಕಷ್ಟು ತೊಂದರೆ ಉಂಟಾಗಿದೆ.

ಹೀಗಾಗಿ, ಸರಕಾರ ಪತಿ/ಪತ್ನಿ ವರ್ಗಾವಣೆಗೆ ಅವಕಾಶ ಮಾಡಿಕೊಡಬೇಕು.

ಬಿ.ಎಂ. ಶಶಿಧರ್‌ ಅಧ್ಯಕ್ಷ, ರಾಜ್ಯ ಪೊಲೀಸ್‌ ಮಹಾಸಂಘ

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button