ಅಂತಾರಾಷ್ಟ್ರೀಯ
ಕ್ಯೂಬಾದ ಹೆಸರಾಂತ ಹೋಟೆಲ್‌ನಲ್ಲಿ ಭೀಕರ ಸ್ಫೋಟ – 22 ಮಂದಿ ಸಾವು

ಹವಾನಾ: ಕ್ಯೂಬಾದ ರಾಜಧಾನಿ ಹವಾನಾದ ಡೌನ್‌ಟೌನ್‌ನಲ್ಲಿರುವ ಪ್ರಸಿದ್ಧ ಹೋಟೆಲ್‌ನಲ್ಲಿ ಶುಕ್ರವಾರ ಭಾರೀ ಸ್ಫೋಟ ಸಂಭವಿಸಿದ್ದು, 22 ಮಂದಿ ಸಾವನ್ನಪ್ಪಿದ್ದಾರೆ. 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ನಗರದ ಹೆಸರಾಂತ ಸರಟೋಗಾ ಹೋಟೆಲ್‌ನಲ್ಲಿ ಭಾರೀ ಸ್ಫೋಟಕ್ಕೆ ಅನಿಲ ಸೋರಿಕೆ ಕಾರಣ ಎಂದು ತಿಳಿದುಬಂದಿದೆ. ಸ್ಫೋಟದಿಂದಾಗಿ ಕಟ್ಟಡ ಭಾಗಶಃ ಧ್ವಂಸಗೊಂಡಿದೆ. ಸ್ಫೋಟದ ಬಳಿಕ ಕ್ಯೂಬಾ ಅಧ್ಯಕ್ಷ ಮಾಧ್ಯಮಗಳ ಮುಂದೆ ಕಳವಳ ವ್ಯಕ್ತಪಡಿಸಿದ್ದಾರೆ.
ಸ್ಫೋಟ ಸಂಭವಿಸಿದ ಹೋಟೆಲ್ ಬಳಿಯಲ್ಲಿ ಶಾಲೆಯೂ ಇದ್ದು, 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಫೋಟದ ವೇಳೆ ಹಾಜರಾಗಿದ್ದರು. ಘಟನೆಯಿಂದಾಗಿ 15 ಮಕ್ಕಳು ಗಾಯಗೊಂಡಿದ್ದು, ಒಂದು ಮಗು ಸಾವನ್ನಪ್ಪಿರುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ.
ಸರಟೋಗಾ ಹೋಟೇಲ್ ಕಟ್ಟಡ ಶತಮಾನಕ್ಕೂ ಹಳೆಯದ್ದಾಗಿದ್ದು, ಸ್ಫೋಟದ ಸಮಯದಲ್ಲಿ ಮುಚ್ಚಲಾಗಿತ್ತು. ಕಾರ್ಮಿಕರು ಮಾತ್ರವೇ ಹೋಟೆಲ್ ಒಳಗಿದ್ದರು ಎಂದು ವರದಿಯಾಗಿದೆ.