
ಪಟಿಯಾಲಾ (ಪಂಜಾಬ್): ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಪಂಜಾಬ್‌ನ ಪಟಿಯಾಲಾ ಸೆಷನ್ಸ್ ಕೋರ್ಟ್‌ಗೆ ಶರಣಾಗಿದ್ದಾರೆ. 1988 ರ ರಸ್ತೆ ರಂಪಾಟ ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣರಾದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಗುರುವಾರವಷ್ಟೇ ಸಿಧು ಅವರಿಗೆ 1 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತ್ತು.
ಶುಕ್ರವಾರ ಬೆಳಗ್ಗೆಯೇ ಸಿಧು ಅವರು ಕೋರ್ಟ್‌ಗೆ ಶರಣಾಗಬೇಕಿತ್ತು. ಆದ್ರೆ, ಅನಾರೋಗ್ಯದ ಕಾರಣವೊಡ್ಡಿ ಸಿಧು ಅವರ ಶರಣಾಗತಿಗೆ ಸಮಯ ನೀಡುವಂತೆ ಸಿಧು ಪರ ವಕೀಲ, ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರು ಸುಪ್ರೀಂ ಕೋರ್ಟ್ ಕದ ತಟ್ಟಲು ನಿರ್ಧರಿಸಿದ್ದರು. ಆದ್ರೆ, ಸಂಜೆ ವೇಳೆಗೆ ಸಿಧು ಅವರು ಕೋರ್ಟ್‌ಗೆ ಶರಣಾಗಲು ನಿರ್ಧರಿಸಿದರು.

ನವಜೋತ್ ಸಿಂಗ್ ಸಿಧು ತಮ್ಮ ನಿವಾಸದಿಂದ ಪಟಿಯಾಲಾ ಸೆಷನ್ ಕೋರ್ಟ್‌ಗೆ ಸಾಗುವ ಹಾದಿಯುದ್ಧಕ್ಕೂ ಅವರ ನೂರಾರು ಅಭಿಮಾನಿಗಳು ಸಿಧು ಕಾರಿನ ಸುತ್ತ ಸೇರಿದ್ದರು. ತಮ್ಮ ನೆಚ್ಚಿನ ನಾಯಕನ ಪರ ಘೋಷಣೆಗಳನ್ನು ಕೂಗಿದರು.ಈ ಕುರಿತು ಪ್ರತಿಕ್ರಿಯೆ ನೀಡಿರುವ ನವಜೋತ್ ಸಿಂಗ್ ಸಿಧು ಅವರ ಮಾಧ್ಯಮ ಸಲಹೆಗಾರ ಹಾಗೂ ಕಾಂಗ್ರೆಸ್ ನಾಯಕ ಸುರೀಂದರ್ ದಲ್ಲಾ, ಸಿಧು ಅವರು ನ್ಯಾಯಾಧೀಶರ ಎದುರು ತಾವೇ ಖುದ್ದಾಗಿ ಶರಣಾಗಿದ್ದಾರೆ ಎಂದು ತಿಳಿಸಿದರು.

ಮೊದಲಿಗೆ ಸಿದ್ದು ಅವರನ್ನು ನ್ಯಾಯಾಂಗ ಬಂಧನಕ್ಕೆ ತೆಗೆದುಕೊಳ್ಳಲಾಗುವುದು. ಅವರ ವೈದ್ಯಕೀಯ ಪರೀಕ್ಷೆ ಹಾಗೂ ಇನ್ನಿತರ ಕಾನೂನಾತ್ಮಕ ಪ್ರಕ್ರಿಯೆಗಳೂ ನಡೆಯಲಿವೆ ಎಂದು ದಲ್ಲಾ ಅವರು ಮಾಹಿತಿ ನೀಡಿದ್ದಾರೆ.
ಏನಿದು ಪ್ರಕರಣ..?
ಪಂಜಾಬ್‌ನ ಪಟಿಯಾಲಾದಲ್ಲಿ 1988 ಡಿಸೆಂಬರ್ 27 ರಂದು ಜಿಪ್ಸಿ ವಾಹನದಲ್ಲಿ ತೆರಳುತ್ತಿದ್ದ ಸಿಧು, ರಸ್ತೆ ಮಧ್ಯದ ಕ್ರಾಸಿಂಗ್‌ನಲ್ಲಿ ತಮ್ಮ ವಾಹನ ನಿಲ್ಲಿಸಿದ್ದರು. ಈ ವೇಳೆ ಸಿಧು ಜೊತೆಗೆ ಅವರ ಸ್ನೇಹಿತ ರೂಪಿಂದರ್ ಸಿಂಗ್ ಸಂಧು ಕೂಡಾ ಇದ್ದರು. ಇದೇ ಮಾರ್ಗದಲ್ಲಿ ಮಾರುತಿ ಕಾರ್‌ನಲ್ಲಿ ಬಂದ ಗುರ್ನಾಮ್ ಸಿಂಗ್ ಎಂಬ ವೃದ್ಧರು ತಮಗೆ ಜಾಗ ಬಿಡುವಂತೆ ಸಿಧು ಅವರಿಗೆ ಕೇಳಿಕೊಂಡಿದ್ದರು. ಬ್ಯಾಂಕ್‌ಗೆ ತೆರಳಿ ಮದುವೆಗೆ ಹಣ ಡ್ರಾ ಮಾಡಿಕೊಂಡು ಬರುವ ತರಾತುರಿಯಲ್ಲಿ ಗುರ್ನಾಮ್ ಸಿಂಗ್ ಇದ್ದರು. ಆದ್ರೆ, ಸಿಧು ಅವರು ಗುರ್ನಾಮ್ ಅವರ ವಾಹನ ಸಾಗಲು ದಾರಿ ಬಿಡಲಿಲ್ಲ ಎಂದು ಅರೋಪಿಸಲಾಗಿದೆ. ಈ ವೇಳೆ ವೃದ್ಧ ಗುರ್ನಾಮ್ ಸಿಂಗ್ ಹಾಗೂ ಅವರ ಜೊತೆಗೆ ಇದ್ದ ಜಸ್ವಿಂದರ್ ಸಿಂಗ್ ಅವರ ಮೇಲೆ ಸಿಧು ಹಲ್ಲೆ ನಡೆಸಿದರು ಎಂದೂ ಆರೋಪಿಸಲಾಗಿದೆ. ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದ ಗುರ್ನಾಮ್ ಸಿಂಗ್ ಅವರು ಹಲ್ಲೆಯಿಂದಾಗಿ ಅಸ್ವಸ್ಥರಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತ ಪಟ್ಟಿದ್ದರು. ಈ ವೇಳೆ ಸ್ಥಳದಿಂದ ಪರಾರಿಯಾಗಿದ್ದ ನವಜೋತ್ ಸಿಂಗ್ ಸಿಧು ಅವರನ್ನು ಬಂಧಿಸಿದ್ದ ಪೊಲೀಸರು ಕೆಲ ದಿನಗಳ ಕಾಲ ಬಂಧನದಲ್ಲಿ ಇಟ್ಟಿದ್ದರು.