ಕೋಟೆನಾಡಿನಲ್ಲಿ ಭಾರತ್ ಜೋಡೋ ಯಾತ್ರೆ

ಕಳೆದ ಎರಡು ದಿನಗಳಿಂದ ಕಲ್ಪತರುನಾಡಿನಲ್ಲಿ ಅಭೂತಪೂರ್ವ ಜನ ಬೆಂಬಲದೊಂದಿಗೆ ಕಾಂಗ್ರೆಸ್ ಯುವರಾಜ ರಾಹುಲ್‌ಗಾಂಧಿ ನೇತೃತ್ವದಲ್ಲಿ ಸಾಗಿದ ಭಾರತ್ ಜೋಡೋ ಯಾತ್ರೆ ಇಂದು ಕೋಟೆನಾಡು ಚಿತ್ರದುರ್ಗದ ಹಿರಿಯೂರಿನತ್ತ ಹೆಜ್ಜೆಹಾಕಿತು.
ರಾಜ್ಯದಲ್ಲಿ ಕಳೆದ ೧೦ ದಿನಗಳಿಂದ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಕಲ್ಪತರುನಾಡಿನ ತುರುವೇಕೆರೆ, ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಾಗಿ ರಾತ್ರಿ ಚಿಕ್ಕನಾಯಹನಳ್ಳಿ ತಾಲ್ಲೂಕಿನ ಬರಕನಹಾಳ್ ಗೇಟ್‌ನಲ್ಲಿ ವಾಸ್ತವ್ಯ ಹೂಡಿತ್ತು.
ಇಂದು ಬೆಳಿಗ್ಗೆ ೬ ಗಂಟೆಗೆ ಬರಕನಹಾಳ್-ಪೋಚಕಟ್ಟೆ ಗೇಟ್‌ನಿಂದ ರಾಹುಲ್‌ಗಾಂಧಿ ನೇತೃತ್ವದ ಯಾತ್ರೆ ಪುನರಾರಂಭಗೊಂಡು ಚಿತ್ರದುರ್ಗ ಜಿಲ್ಲೆ ಪ್ರವೇಶಿಸಿತು. ರಾಹುಲ್‌ಗಾಂಧಿಯವರೊಂದಿಗೆ ಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ಟಿ.ಬಿ. ಜಯಚಂದ್ರ, ಮಾಜಿ ಶಾಸಕ ಕೆ.ಎನ್. ರಾಜಣ್ಣ ಸೇರಿದಂತೆ ಚಿಕ್ಕನಾಯಕನಹಳ್ಳಿ ಹಾಗೂ ಸಿರಾ ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು ಹೆಜ್ಜೆ ಹಾಕಿದರು.
ಪೋಚಕಟ್ಟೆಯಿಂದ ಹುಳಿಯಾರಿಗೆ ಬರುವ ಮಾರ್ಗಮಧ್ಯೆ ನಿಂತಿದ್ದ ತಾಂಡದ ಮಹಿಳೆಯರನ್ನು ರಾಹುಲ್‌ಗಾಂಧಿ ಅವರು ಮಾತನಾಡಿಸಿ, ಅವರ ಸಮಸ್ಯೆಗಳ ಕಿವಿಯಾಗಿ ಸಮಸ್ಯೆಗಳನ್ನು ಆಲಿಸಿದರು.ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರುಗಳು ಕಾಂಗ್ರೆಸ್ ಬಾವುಟ ಹಿಡಿದು ಕಾಂಗ್ರೆಸ್ ಪಕ್ಷ, ಸೋನಿಯಾಗಾಂಧಿ, ರಾಹುಲ್‌ಗಾಂಧಿ ಹಾಗೂ ಭಾರತ್ ಜೋಡೋ ಯಾತ್ರೆ ಪರ ಜೈಕಾರದ ಘೋಷಣೆಗಳನ್ನು ಮೊಳಗಿಸಿದರು.
ಪಾದಯಾತ್ರೆ ಹುಳಿಯಾರು ಪಟ್ಟಣದ ಮೂಲಕ ಬೆಳಿಗ್ಗೆ ೧೦ ಗಂಟೆ ವೇಳೆಗೆ ಕೆಂಕೆರೆಗೆ ತಲುಪಿದ್ದು, ಅಲ್ಲಿಯೇ ಚೇತನ್ ಎಂಬುವರ ಮನೆ ಮುಂದೆ ರಾಹುಲ್‌ಗಾಂಧಿ ಸೇರಿದಂತೆ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ನಾಯಕರುಗಳು, ಕಾರ್ಯಕರ್ತರುಗಳು ಉಪಹಾರ ಸೇವಿಸಿದರು.ಉಪಹಾರ ಸೇವನೆ ಬಳಿಕ ಕೆಂಕೆರೆಯಿಂದ ಭಾರತ್ ಜೋಡೋ ಯಾತ್ರೆಯು ಸ್ವಲ್ಪ ದೂರ ಕ್ರಮಿಸಿದ್ದು, ಕಲ್ಪತರುನಾಡಿನಲ್ಲಿ ಮೂರು ದಿನಗಳ ಕಾಲ ಅಭೂತಪೂರ್ವ ಜನ ಬೆಂಬಲದೊಂದಿಗೆ ನಡೆದ ಭಾರತ್ ಜೋಡೋ ಯಾತ್ರೆ ಸಂಪನ್ನಗೊಂಡಿತು.
ಕಲ್ಪತರುನಾಡಿನಲ್ಲಿ ಯಾತ್ರೆ ಮುಕ್ತಾಯಗೊಂಡ ಬಳಿಕ ಕಾಂಗ್ರೆಸ್ ನಾಯಕರು ಕಾರಿನಲ್ಲಿ ಕೋಟೆನಾಡು ಚಿತ್ರದುರ್ಗದ ಹಿರಿಯೂರಿನತ್ತ ತೆರಳಿದರು.ಹಿರಿಯೂರಿಗೆ ತೆರಳುವ ಮಾರ್ಗಮಧ್ಯೆ ಅರಣ್ಯ ಪ್ರದೇಶ ಇರುವುದರಿಂದ ಭದ್ರತಾ ದೃಷ್ಠಿಯಿಂದ ಪಾದಯಾತ್ರೆ ಬದಲು ಕಾರಿನಲ್ಲಿ ತೆರಳುವಂತೆ ಪೊಲೀಸ್ ಇಲಾಖೆಯ ಮನವಿ ಮೇರೆಗೆ ಕಾಂಗ್ರೆಸ್ ನಾಯಕರು ಕೆಂಕೆರೆ ಸಮೀಪವೇ ಪಾದಯಾತ್ರೆ ಮುಕ್ತಾಯಗೊಳಿಸಿ ಕಾರಿನಲ್ಲಿ ಹಿರಿಯೂರಿಗೆ ತೆರಳಿದರು.ಮಧ್ಯಾಹ್ನ ೩ ಗಂಟೆ ನಂತರ ಹಿರಿಯೂರಿನಿಂದ ಭಾರತ್ ಜೋಡೋ ಪಾದಯಾತ್ರೆ ಮುಂದುವರೆಯಲಿದ್ದು, ಹರ್ತಿಕೋಟೆಯಲ್ಲಿ ರಾತ್ರಿ ರಾಹುಲ್‌ಗಾಂಧಿ ಹಾಗೂ ಯಾತ್ರೆಯಲ್ಲಿ ಪಾಲ್ಗೊಳ್ಳುವ ನಾಯಕರುಗಳು, ಕಾರ್ಯಕರ್ತರು ವಾಸ್ತವ್ಯ ಹೂಡಲಿದ್ದಾರೆ.