ಕೋಟಿ ಕೋಟಿ ಲೂಟಿ ಹೊಡೆದ ಭ್ರಷ್ಟ ಬಿಬಿಎಂಪಿ ಅಧಿಕಾರಿಗಳಿಗೆ ಇಡಿ ಚಾಟಿ

ಅಭಿವೃದ್ಧಿ ನೆಪದಲ್ಲಿ ಕೋಟಿ ಕೋಟಿ ಲೂಟಿ ಹೊಡೆದು ತಣ್ಣಗೆ ನಿದ್ರಿಸುತ್ತಿದ್ದ ಭ್ರಷ್ಟ ಬಿಬಿಎಂಪಿ ಅಧಿಕಾರಿಗಳಿಗೆ ಇದೀಗ ಇಡಿ ಕಾಟ ಕಾಡಲಾರಂಭಿಸಿದೆ.ನಗರದಲ್ಲಿ ಬೋರ್‍ವೆಲ್ ಕೊರೆಯುವುದು ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವ ನೆಪದಲ್ಲಿ 800 ಕೋಟಿ ರೂ
.ಗಳಿಗೂ ಹೆಚ್ಚು ಹಣ ದುರುಪಯೋಗಪಡಿಸಿಕೊಂಡಿರುವ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಿಬಿಎಂಪಿ ಎಂಜಿನಿಯರ್‍ಗಳ ಡ್ರಿಲ್ ನಡೆಸುತ್ತಿದ್ದಾರೆ.ಬೋರ್‍ವೆಲ್ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಹೆಸರಲ್ಲಿ ನೂರಾರು ಕೋಟಿ ಅಕ್ರಮ ನಡೆಸಲಾಗಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರು ಎಸಿಬಿ ಹಾಗು ಜಾರಿ ನಿರ್ದೇಶನಾಲಯಕ್ಕೆ ನೀಡಿದ ದೂರಿನ ಆಧಾರದ ಮೇರೆ ಇಡಿ ಅಧಿಕಾರಿಗಳು ಆಖಾಡಕ್ಕೆ ಇಳಿದಿದ್ದಾರೆ.ಬಿಬಿಎಂಪಿಯ ಎಲ್ಲಾ ಎಂಟು ವಲಯಗಳ ಜಂಟಿ ಆಯುಕ್ತರುಗಳು, ಪ್ರಧಾನ ಅಭಿಯಂತರರು ಹಾಗೂ ಚೀಫ್ ಎಂಜಿನಿಯರ್‍ಗಳಿಗೆ ನೋಟೀಸ್ ಜಾರಿ ಮಾಡಿ ಕೊಳವೆ ಬಾವಿ ಕೊರೆಸಿರುವುದು ಹಾಗೂ ಆರ್.
ಒ ಪ್ಲಾಂಟ್‍ಗಳ ಸ್ಥಾಪನೆ ಬಗ್ಗೆ ಸಮರ್ಪಕ ಮಾಹಿತಿ ನೀಡುವಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.ಕಳೆದ ಮೂರು ದಿನಗಳಿಂದ ಬಿಬಿಎಂಪಿ ಪ್ರಧಾನ ಅಭಿಯಂತರ ಪ್ರಹ್ಲಾದ್ ಅವರ ಬೆನ್ನು ಬಿದ್ದಿರುವ ಇಡಿ ಅಧಿಕಾರಿಗಳು ಅವರಿಂದ ಸಮಗ್ರ ಮಾಹಿತಿ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.ಪ್ರಹ್ಲಾದ್ ಅವರು ಇಡಿ ಅಧಿಕಾರಿಗಳು ಕೇಳುವ ಪ್ರಶ್ನೆಗೆ ಉತ್ತರಿಸಲಾಗದೆ ತತ್ತರಿಸಿ ಹೋಗಿದ್ದು, ಸಮಗ್ರ ಮಾಹಿತಿ ನೀಡಲು ಕೆಲ ದಿನಗಳ ಗಡುವು ಬೇಕೆಂದು ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ನೀವು ಎಷ್ಟು ದಿನ ಬೇಕಾದರೂ ತೆಗೆದುಕೊಳ್ಳಿ ಆದರೆ, ನಮಗೆ ಮಾಹಿತಿ ಬೇಕೇ ಬೇಕು ಎಂದು ಇಡಿ ಅಧಿಕಾರಿಗಳು ಪಟ್ಟು ಹಿಡಿದಿರುವುದರಿಂದ ಬೋರ್‍ವೆಲ್ ಹಾಗೂ ಆರ್.ಒ ಪ್ಲಾಂಟ್ ಅಕ್ರಮದಲ್ಲಿ ಭಾಗಿಯಾಗಿ ಕೋಟಿ ಕೋಟಿ ಹಣ ಜೇಬಿಗಿಳಿಸಿಕೊಂಡಿರುವ ಅಧಿಕಾರಿಗಳಿಗೆ ನಡುಕ ಶುರುವಾಗಿದೆಯಂತೆ.ಏನಿದು ಹಗರಣ: ಕಳೆದ 2018 -2019ರ ಅವಯಲ್ಲಿ ಕೊಳವೆ ಬಾವಿ ಹಾಗೂ ಆರ್‍ಓ ಪ್ಲಾಂಟ್ ಘಟಕ ಆರಂಭಕ್ಕೆ 800 ಕೋಟಿ ರೂ.ಗಳಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಲಾಗಿತ್ತು.
ಕೊಳವೆ ಬಾವಿ ಕೊರೆಸುವುದಕ್ಕೆ 671 ಕೋಟಿ ರೂ. ಹಾಗೂ ಶುದ್ಧ ಕುಡಿಯವ ನೀರಿನ ಘಟಕ ಸ್ಥಾಪನೆಗೆ 156 ಕೋಟಿ ರೂ.ಗಳ ಅನುದಾನದಲ್ಲಿ ನಗರದಲ್ಲಿ 9588 ಕೊಳವೆ ಬಾವಿ ನಿರ್ಮಾಣ ಮಾಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದರು.ಒಂದು ಕೊಳವೆ ಬಾವಿ ಕೊರೆಸಲು 6 ಲಕ್ಷ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ 16 ಲಕ್ಷ ವೆಚ್ಚ ಮಾಡಿ 976 ಆರ್‍ಓ ಪ್ಲಾಂಟ್‍ಗಳನ್ನು ನಿರ್ಮಾಣ ಮಾಡಿರುವುದಾಗಿ ಲೆಕ್ಕ ತೋರಿಸಲಾಗಿತ್ತು.
ಆದರೆ, ಅಧಿಕಾರಿಗಳು ನೀಡಿರುವ ಲೆಕ್ಕ ತಪ್ಪು, ನಕಲಿ ದಾಖಲೆ ಸೃಷ್ಟಿಸಿ ಕೋಟಿ ಕೋಟಿ ಹಣ ಲಪಟಾಯಿಸಲಾಗಿದೆ ಎಂದು 2019 ರಲ್ಲಿ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರು ಭ್ರಷ್ಟಾಚಾರ ನಿಗ್ರಹ ದಳ ಹಾಗೂ ಜಾರಿ ನಿರ್ದೇಶನಾಲಯಕ್ಕೆ 273 ಪುಟಗಳ ದಾಖಲೆ ನೀಡಿ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು.
ರಮೇಶ್ ಅವರು ನೀಡಿದ ದೂರಿನ ಆಧಾರದ ಮೇರೆ ಪ್ರಕರಣ ದಾಖಲಿಸಿಕೊಂಡಿರುವ ಇಡಿ ಅಧಿಕಾರಿಗಳು ಇದೀಗ ಭ್ರಷ್ಟ ಅಧಿಕಾರಿಗಳ ನಿದ್ದೆಗೆಡಿಸಿದ್ದಾರೆ.