ಅಪರಾಧ

ಕೊಲೆಗಾರನ ಬಗ್ಗೆ ಮಾಹಿತಿ ಕೊಟ್ಟವನೇ ಕೊಲೆಗಾರ! ಹಾಸನದ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!!

ಹಾಸನ: ಕೊಲೆ ಮಾಡಿದ ಆರೋಪಿಯೇ ಪೊಲೀಸರಿಗೆ ದಾರಿ ತಪ್ಪಿಸಿದಂತಹ ಪ್ರಕರಣ ಇದಾಗಿದ್ದು, ಕೊನೆಗೂ ಆತನನ್ನು ಎಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ತಿಂಗಳು ಹಾಸನ ಜಿಲ್ಲೆಯ ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾರಾಯಣಪುರ ಗ್ರಾಮದ ರತ್ನಮ್ಮ ಎಂಬ ಮಹಿಳೆಯೊಬ್ಬರು ನಾಪತ್ತೆಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲು ಮಾಡಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಕೊಲೆ ಮಾಡಿದ ವ್ಯಕ್ತಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದ.ಮಧುರಾಜ್ (24) ಎಂಬಾತ ಪೊಲೀಸರನ್ನು ಸಂಪರ್ಕಿಸಿ, ರತ್ನಮ್ಮನವರ ಚಿಕ್ಕಪ್ಪನ ಮಗ ಮಹೇಶ್ ಎಂಬಾತನೇ ಕೊಲೆ ಮಾಡಿರುವ ಶಂಕೆಯಿದೆ.

ತನ್ನ ಜತೆಗೆ ಸ್ನೇಹ ಹೊಂದಿರುವ ಆತ, ಕುಡಿದ ಅಮಲಿನಲ್ಲಿ ತನಗೆ 20 ಸಾವಿರ ರೂ. ಕೊಟ್ಟರೆ ರತ್ನಮ್ಮನ ಇರುವಿಕೆಯ ಬಗ್ಗೆ ವಿವರ ಕೊಡುವುದಾಗಿ ಹೇಳುತ್ತಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದ.

ಹೀಗಾಗಿ, ಪೊಲೀಸರು ಮಹೇಶನನ್ನು ವಶಕ್ಕೆ ಪಡೆದು ತಮ್ಮದೇ ಆದ ರೀತಿಯಲ್ಲಿ ಪ್ರತಿದಿನ ವಿಚಾರಣೆ ನಡೆಸಿದ್ದರು.ಇತ್ತ ವಿಚಾರಣೆ ನಡೆಯುತ್ತಿರುವಾಗ, ನಾರಾಯಣಪುರ ಗ್ರಾಮದ ಸ್ವಾಮಿ ಎಂಬುವವರ ಜೋಳದ ಜಮೀನಿನಲ್ಲಿ ಮಹಿಳೆಯ ಕೆಲ ಮೂಳೆಗಳು ಮತ್ತು ಒಂದು ಕಾಲುಂಗುರ ದೊರೆತಿತ್ತು. ಮಧುರಾಜ್ ನೀಡಿದ್ದ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಪೊಲೀಸರು ತನಿಖೆ ಮಾಡಲು ಮುಂದಾದರು.

ಜಮೀನಿನಲ್ಲಿ ಸಿಕ್ಕಿದ್ದ ಪಳೆಯುಳಿಕೆಗಳು ರತ್ನಮ್ಮನ ಮೃತ ದೇಹದ ಕೆಲ ಭಾಗಗಳು ಎಂಬುದು ಖಚಿತವಾದವು.ಅತ್ತ, ರತ್ನಮ್ಮನ ಪೋಷಕರು ಕೂಡಾ ಸಂಬಂಧಿಕ ಮಹೇಶ್ ಮೇಲೆಯೇ ಆರೋಪ ಮಾಡಿದ್ದರು. ಕುಡಿದ ಅಮಲಿನಲ್ಲಿ ಕೊಲೆ ಮಾಡಿರಬಹುದು ಎಂದು ದೂರನ್ನೂ ನೀಡಿದ್ದರು.ಹಾಗಾಗಿ, ಪುನಃ ಮಹೇಶನನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಿಸಿದಾಗ ಆತ, ತಾನು ಕೊಲೆ ಮಾಡಿಲ್ಲ.

ಇದಕ್ಕೂ ನಂಗೂ ಯಾವುದೇ ಸಂಬಂಧ ಇಲ್ಲ ಅಂತಲೇ ಹೇಳಿದ್ದ. ಪೊಲೀಸ್ ರೀತಿಯಲ್ಲಿ ವಿಚಾರಣೆ ಮಾಡಿದಾಗಲೂ ಆತ ಅದನ್ನೇ ಹೇಳಿದ್ದ. ತೀರಾ ಗೊಂದಲಮಯವಾಗಿದ್ದ ಈ ಪ್ರಕರಣವನ್ನು ಪೊಲೀಸರು ವಿವಿಧ ಆಯಾಮಗಳಲ್ಲಿ ಭೇದಿಸಲು ಮುಂದಾದರು.ಆಗ ಪೊಲೀಸರಿಗೆ ಒಂದು ಉಪಾಯ ಹೊಳೆಯಿತು.

ರತ್ನಮ್ಮನ ಆಭರಣಕ್ಕಾಗಿಯೇ ಕೊಲೆ ನಡೆದಿರುವುದು ಖಚಿತವಾಗಿದ್ದರಿಂದ, ಆರೋಪಿಯು ಅದನ್ನು ಎಲ್ಲಾದರೂ ಮಾರಿರುತ್ತಾನೆ ಅಥವಾ ಗಿರವಿ ಇಟ್ಟಿರುತ್ತಾನೆ ಎಂದೆಣಿಸಿ ಅದನ್ನು ಭೇದಿಸಲು ಮುಂದಾದರು.ಹಾಗಾಗಿ, ಜಿಲ್ಲೆಯ ಎಲ್ಲಾ ಗಿರವಿ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ರತ್ನಮ್ಮನ ಚಿನ್ನಾಭರಣಗಳು ಖಾಸಗಿ ಚಿನ್ನದ ಅಂಗಡಿಯಲ್ಲಿ ಗಿರವಿ ಇಟ್ಟಿದ್ದು ಗೊತ್ತಾಯಿತು.

ಗಿರವಿ ಇಟ್ಟ ವ್ಯಕ್ತಿ ಯಾರೆಂದು ವಿಚಾರಿಸಿದಾಗ ಅದು ಮಹೇಶ್ ಮೇಲೆ ಕೊಲೆಯ ಆರೋಪ ಮಾಡುತ್ತಿದ್ದ ಮಧುರಾಜ್ ನಿಜವಾದ ಕೊಲೆಗಾರ ಎಂಬುದು ಮನದಟ್ಟಾಯಿತು. ಆತನನ್ನು ಕರೆಸಿ ಪೊಲೀಸರ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ, ಇಡೀ ಪ್ರಕರಣ ಬಯಲಾಯಿತು.ರತ್ನಮ್ಮನ ಕೊಲೆ ಪ್ರಕರಣದಲ್ಲಿ ಅದೇ ಗ್ರಾಮದ ಮಧುರಾಜ್ (24) ಕೊಲೆ ಮಾಡಿ ರಾಜಾರೋಷವಾಗಿ ಗ್ರಾಮದಲ್ಲಿ ತಿರುಗಾಡಿಕೊಂಡಿದ್ದ.

ಪೊಲೀಸರು ಬಂದಾಗ್ಲೂ ಕೂಡ ನಿರ್ಭೀತ ನಾಗದೇ, ನಾನು ಕೊಲೆ ಮಾಡಿದ ಪ್ರಕರಣವನ್ನು ಮುಚ್ಚಿ ಹಾಕಲು ಮತ್ತೊಬ್ಬನ ಮೇಲೆ ಆರೋಪ ಒರೆಸಿ, ತನ್ನ ಪಾಡಿಗೆ ತಾನಿದ್ದ ಆದರೆ ಈತನ ಬಗ್ಗೆ, ತನಿಖೆ ನಡೆಸಿದಾಗ ಇತನೇ ಕೊಲೆಗಾರ ಎಂಬುದು ಗೊತ್ತಾಗುತ್ತದೆ ಅಲ್ಲದೆ ಈ ಹಿಂದೆ, ಗುಂಡು ಹಾರಿಸಿದ ಪ್ರಕರಣ ಒಂದರಲ್ಲಿ ಮೂರನೆಯ ಆರೋಪಿಯಾಗಿದ್ದ ಎಂಬುದು ಗೊತ್ತಾಗಿದೆ.

ಪ್ರಕರಣ ಭರಿಸಿದ ತಂಡಕ್ಕೆ ಎಸ್‌ಪಿ ಹರಿರಾಮ ಶಂಕರ್ 20 ಸಾವಿರ ರೂ. ನಗದನ್ನ ಬಹುಮಾನವಾಗಿ ನೀಡಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button