ಕೊರೊನಾ ನಿಗ್ರಹಕ್ಕೆ ಮಾಕ್ ಡ್ರಿಲ್

ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿ ಮಹಾಮಾರಿ ಕೋವಿಡ್ ತಾರಕಕ್ಕೇರಿದ್ದು, ಭಾರತದಲ್ಲೂ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಸೋಂಕು ಉಲ್ಬಣಗೊಳ್ಳದಂತೆ ತಡೆಯಲು ಕೇಂದ್ರ ಸರ್ಕಾರ ಕಠಿಣಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ದೇಶಾದ್ಯಂತ ಎಲ್ಲ ಆಸ್ಪತ್ರೆಗಳಲ್ಲಿ ಅಗತ್ಯ ಮೂಲಸೌಕರ್ಯಗಳ ಪರಿಶೀಲನೆ ಹಾಗೂ ಸಿದ್ಧತೆಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಕಳೆದ ಕೆಲವು ತಿಂಗಳುಗಳಿಂದ ಕಡಿಮೆಯಾಗಿದ್ದ ಕೊರೊನಾ, ಇದೀಗ ಚೀನಾದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಇದು ಸಹಜವಾಗಿ ಭಾರತದ ಮೇಲೆ ನೇರ ಪರಿಣಾಮ ಬೀರಿದೆ. ಅದರಲ್ಲೂ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಗೆ ತಯಾರಿ ನಡೆಸಿದ್ದ ದೇಶದ ಜನತೆಗೆ ಮತ್ತೆ ಕೋವಿಡ್ ಬಿಸಿ ತಟ್ಟಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆಗೂ ಚಾಲನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.ಕೋವಿಡ್ ಹತ್ತಿಕ್ಕಲು ನಿನ್ನೆ ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ಸಚಿವರು ಹಾಗೂ ಅಧಿಕಾರಿಗಳ ಜತೆ ಉನ್ನತ ಮಟ್ಟದ ಸಭೆ ನಡೆಸಿ ಸೋಂಕು ಹತೋಟಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಸೋಂಕು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದೇಶದ ಎಲ್ಲ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಲಿಂಡರ್, ವೆಂಟಿಲೇಟರ್, ಪಿಎಸ್‌ಎ ಘಟಕಗಳು ಹಾಗೂ ಮಾನವ ಸಂಪನ್ಮೂಲ ಸೇರಿದಂತೆ ಕೋವಿಡ್ ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಎಲ್ಲ ಸೌಲಭ್ಯಗಳನ್ನು ಸನ್ನದ್ಧಗೊಳಿಸುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ.
ದೇಶದ ವಿಮಾನನಿಲ್ದಾಣಗಳಲ್ಲಿ ಪ್ರಯಾಣಿಕರ ಮೇಲೆ ನಿಗಾವಹಿಸಿದ್ದು, ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲು ಮುಂದಾಗಿದೆ. ಕೋವಿಡ್ ಸೋಂಕಿತರಿಂದ ಸಂಗ್ರಹಿಸಲಾಗುವ ಮಾದರಿಗಳನ್ನು ಕೇಂದ್ರ ಸರ್ಕಾರದ ವೈರಾಣು ಸಂರಚನೆ ವಿಶ್ಲೇಷಣೆ ಸಂಸ್ಥೆ ಪ್ರಯೋಗಾಲಯಗಳಿಗೆ ರವಾನಿಸುವಂತೆಯೂ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದ್ದು, ಹೊಸ ಮಾದರಿ ಇದ್ದರೆ ಅದನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಲು ಸಾಧ್ಯವಾಗಲಿದೆ ಎಂದು ತಿಳಿಸಿದೆ.
ದೇಶದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೧೬೩ ಹೊಸ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಚೇತರಿಕೆ ಪ್ರಮಾಣ ಶೇ.೯೮.೮೦ಯಷ್ಟಿದೆ. ಇದುವರೆಗೆ ೪,೪೧,೪೨,೬೦೮ ಮಂದಿ ಚೇತರಿಸಿಕೊಂಡಿದ್ದಾರೆ. ಈ ಪೈಕಿ ೩,೩೮೦ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.ಕಳೆದ ೨೪ ಗಂಟೆಗಳ ಅವಧಿಯಲ್ಲಿ ಒಟ್ಟು ೨೨ ಪ್ರಕರಣಗಳು ದಾಖಲಾಗಿವೆ.
ದೇಶದಲ್ಲಿ ಒಟ್ಟು ಸಾವಿನ ಸಂಕ್ಯೆ ೫೩೦,೬೯೦ ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.ರಾಜ್ಯಗಳೊಂದಿಗೆ ಸಭೆವಿಶ್ವದ ಕೆಲವು ಭಾಗಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ದೇಶದಲ್ಲಿಯೂ ಎಚ್ಚರಿಕೆ ವಹಿಸುವ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಮಧ್ಯಾಹ್ನ ೩ ಗಂಟೆಗೆ ರಾಜ್ಯಗಳೊಂದಿಗೆ ವರ್ಚುವಲ್ ಸಂವಾದ ನಡೆಸಲು ಮುಂದಾಗಿದ್ಧಾರೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರ ಜೊತೆ ನಡೆಯಲಿರುವ ಸಂವಾದದಲ್ಲಿ ಸೋಂಕು ತಡೆಗಟ್ಟಲು ಅನುಸರಿಸಬೇಕಾದ ಕ್ರಮ ಸೇರಿದಂತೆ ಇನ್ನಿತರೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚಿಸುವ ಸಾಧ್ಯತೆಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ..ಸೋಂಕು ತಡೆಗೆ ಕಟ್ಟುನಿಟ್ಟಾದ ನಿಯಮ ಪಾಲನೆ ಮಾಡುವ ಜೊತೆಗೆ ಕಣ್ಗಾವಲು ಕ್ರಮ ಅದರಲ್ಲಿಯೂ ವಿಶೇಷವಾಗಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಬಲಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ನಿರ್ದೇಶನ ನೀಡಿರುವ ಬೆನ್ನಲ್ಲೇ ಇಂದು ಮಧ್ಯಾಹ್ನ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಅವರು ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಮಹತ್ವದ ವಿಡಿಯೋ ಸಂವಾದ ನಡೆಸಲಿದ್ದಾರೆ.