ಅಪರಾಧ

ಕೇರಳದಲ್ಲಿ ರಾಸಾಯನಿಕ ಮಿಶ್ರಿತ ಹಾಲು ಪತ್ತೆ; ಓಣಂ ಮೇಲೆ ಕಣ್ಣು

ಕಾಸರಗೋಡು: ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬ ಗಾದೆಮಾತು ಈಗ ಕೇರಳದ ಮಾರುಕಟ್ಟೆಯಲ್ಲಿ ಲಭಿಸುವ ಹಾಲಿಗೂ ಅನ್ವಯವಾಗುತ್ತಿದೆ. ಕೇರಳದ ಓಣಂ ಮಾರುಕಟ್ಟೆಯನ್ನು ಗುರಿಯಾಗಿಸಿ ಕಲಬೆರಕೆ ದಂಧೆ ದೊಡ್ಡ ಮಟ್ಟಿನಲ್ಲಿ ನಡೆಯುತ್ತಿದ್ದು, ನೆರೆ ರಾಜ್ಯ ತಮಿಳುನಾಡಿನಿಂದ ಕೇರಳಕ್ಕೆ ಭಾರಿ ಪ್ರಮಾಣದ ಕಲಬೆರಕೆ ಹಾಲು ಪೂರೈಕೆಯಾಗಿರುವುದನ್ನು ಪತ್ತೆ ಹಚ್ಚಲಾಗಿದೆ.

ಮಾವಿನಹಣ್ಣು, ತರಕಾರಿಗಳು, ತೆಂಗಿನೆಣ್ಣೆ, ಇತರ ಅಡುಗೆ ತೈಲಗಳು, ಬೆಲ್ಲ ಹೀಗೆ ಹಲವಾರು ಆಹಾರ ವಸ್ತುಗಳಲ್ಲಿ ವಿಷಾಂಶ ಬೆರೆಸುವುದನ್ನು ಈಗಾಗಲೇ ಪತ್ತೆಹಚ್ಚಲಾಗಿದೆ. ಈಗ ಹೊಸದಾಗಿ ಹಾಲಿನಲ್ಲಿ ಕಲಬೆರಕೆ ಪತ್ತೆಹಚ್ಚಲಾಗಿದೆ. ಇದರಿಂದ ಹಾಲು ಮಾರುಕಟ್ಟೆ ತಲ್ಲಣಗೊಂಡಿದೆ.

ಕೋವಿಡ್‌ ಮಹಾಮಾರಿಯ ಹರಡುವಿಕೆ ಕಾರಣ ನಿಯಂತ್ರಣಗಳನ್ನು ಹೇರಿರುವುದರಿಂದ ಕಳೆದ ಎರಡು ವರ್ಷಗಳಲ್ಲಿ ಕೇರಳದಲ್ಲಿ ಅದ್ಧೂರಿಯ ಓಣಂ ಆಚರಣೆ ನಡೆದಿಲ್ಲ. ಆದರೆ ಈ ಬಾರಿ ನಿಯಂತ್ರಣಗಳು ಸಡಿಲಗೊಂಡಿದ್ದು, ಓಣಂ ಮಾರುಕಟ್ಟೆಯನ್ನು ಗುರಿಯಾಗಿಸಿ ಹಲವು ಸಾಮಗ್ರಿಗಳು ಹೊರನಾಡಿನಿಂದ ಸಾಗಾಟವಾಗಲು ಆರಂಭಗೊಂಡಿವೆ.

ಈ ಹಿಂದೆಯೂ ಓಣಂ ಸಂದರ್ಭ ಕಲಬೆರಕೆಯ ಹಾಲು ಪತ್ತೆಹಚ್ಚಲಾಗಿತ್ತು. ಈ ಬಾರಿ ಕೂಡಾ ಓಣಂ ಆರಂಭಲ್ಲೇ ಕಲಬೆರಕೆಯ ಹಾಲನ್ನು ಮಾರುಕಟ್ಟೆಗೆ ತಲುಪಿಸುವ ಪ್ರಯತ್ನ ನಡೆದಿದೆ.ಗುರುವಾರ ತಮಿಳುನಾಡಿನಿಂದ ಕೇರಳಕ್ಕೆ ಸಾಗಿಸಲು ಯತ್ನಿಸಿದ ಕಲಬೆರಕೆ ಹಾಲನ್ನು ಮೀನಾಕ್ಷಿಪುರ ಚೆಕ್‌ಪೋಸ್ಟ್‌ನಲ್ಲಿ ವಶಪಡಿಸಲಾಗಿದೆ. ಯೂರಿಯಾ ಬೆರೆಸಿದ 12,700 ಲೀಟರ್‌ ಹಾಲು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಮುಂದಿನ ಕ್ರಮಗಳಿಗಾಗಿ ಹಾಲನ್ನು ಆಹಾರ ಭದ್ರತಾ ಇಲಾಖೆಗೆ ಹಸ್ತಾಂತರಿಸಲಾಗಿದೆ. ಟ್ಯಾಂಕರ್‌ ಲಾರಿಯನ್ನು ತಮಿಳುನಾಡಿಗೆ ಹಿಂತಿರುಗಿಸಲಾಗಿದೆ. ತಮಿಳುನಾಡಿನ ಕೃಷ್ಣಗಿರಿಯಿಂದ ತೃಶ್ಯೂರಿಗೆ ಹಾಲಿನೊಂದಿಗೆ ಬಂದ ಟ್ಯಾಂಕರ್‌ ಲಾರಿಯಲ್ಲಿ ರಾಸಾಯನಿಕ ವಸ್ತುವಿನ ಅಂಶ ಪತ್ತೆಹಚ್ಚಲಾಗಿದೆ. ಆಹಾರ ಭದ್ರತಾ ವಿಭಾಗ ಸ್ಯಾಂಪಲ್‌ ತೆಗೆದು ಸಮಗ್ರ ತಪಾಸಣೆಗೆ ಕಳುಹಿಸಿದೆ. ಕ್ಷೀರಾಭಿವೃದ್ಧಿ ಇಲಾಖೆಯು ಟ್ಯಾಂಕರ್‌ನ್ನು ಹಿಂತಿರುಗಿಸಿದೆ.

ಓಣಂ ಮೊದಲಾದ ಉತ್ಸವ ದಿನಗಳು ಸಮೀಪಿಸಿರುವಾಗ ಈ ಕಲಬೆರಕೆ ಹಾಲು ಪತ್ತೆಯಾಗಿದೆ.ಕಲಬೆರಕೆ ಹೇಗೆ?: ಹಾಲು ದಪ್ಪವಾಗಿ ಕಾಣಲು ಯೂರಿಯಾ ಮೊದಲಾದವುಗಳನ್ನು ಬೆರೆಸಲಾಗುತ್ತದೆ. ಹಾಲಿಗೆ ಯೂರಿಯವನ್ನು ಸೇರ್ಪಡಿಸಿದರೆ ಹಾಲಿಗೆ ನೀರು ಬೆರೆಸಿರುವುದು ತಿಳಿಯುವುದಿಲ್ಲ. ಹಾಲಿಗೆ ನೀರು ಬೆರೆಸುವುದರಿಂದ ಹಾಲು ತೆಳ್ಳಗಾಗುವುದು. ಆದರೆ ಅದಕ್ಕೆ ಯೂರಿಯಾ ಬೆರೆಸಿದರೆ ಹಾಲು ದಪ್ಪವಾಗುತ್ತದೆ.

ಇದರಿಂದ ಹಾಲಿಗೆ ನೀರು ಬೆರೆಸಿರುವುದು ತಿಳಿದು ಬರುವುದಿಲ್ಲ. ಯೂರಿಯಾ ಮಾತ್ರವಲ್ಲದೆ ಮೆಲಾನಿನ್‌ನಂತಹ ರಾಸಾಯನಿಕ ವಸ್ತುಗಳನ್ನು ಕೂಡಾ ಈ ರೀತಿ ಬಳಸಲಾಗುತ್ತದೆ ಎಂದು ಆಹಾರ ಭದ್ರತಾ ಕ್ಷೇತ್ರದ ತಜ್ಞರು ಹೇಳುತ್ತಾರೆ.ಯೂರಿಯ ಮೊದಲಾದ ರಾಸಾಯನಿಕ ವಸ್ತುಗಳ ಬಣ್ಣ ಬಿಳಿಯಾಗಿರುವುದರಿಂದ ಇದು ಹಾಲಿನಲ್ಲಿ ಬೆರೆತರೆ ತಿಳಿದುಬರುವುದಿಲ್ಲ.

ರುಚಿಯಲ್ಲಿ ಅಲ್ಪ ವ್ಯತ್ಯಾಸ ಕಂಡುಬರುತ್ತದೆಯಾದರೂ ಖರೀದಿ ಸಂದರ್ಭ ಅರಿವಿಗೆ ಬರುವುದಿಲ್ಲ. ಓಣಂ ಮೊದಲಾದ ಉತ್ಸವ ದಿನಗಳಲ್ಲಿ ಪಾಯಸ ಇತ್ಯಾದಿಗಳ ತಯಾರಿಗೆ ಮನೆಗಳು, ಸಂಸ್ಥೆಗಳು ಲೀಟರ್‌ಗಟ್ಟಲೆ ಹಾಲು ಖರೀದಿಸುವಾಗ ಇಂತಹ ಕಲಬೆರಕೆಯ ಕುರಿತು ಅರಿವಿಲ್ಲದೆ ಮೋಸ ಹೋಗುತ್ತಾರೆ.

ಈ ಅವಕಾಶವನ್ನು ಸದುಪಯೋಪಡಿಸಿ ಓಣಂ ಮಾರುಕಟ್ಟೆಯನ್ನು ಗುರಿಯಾಗಿಸಿ ಈ ಕಲಬೆರಕೆ ದಂಧೆ ನಡೆಸಲಾಗುತ್ತಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button