ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ರಾತ್ರಿ ಬೆಂಗಳೂರಿಗೆ ಬಂದಿಳಿದ್ದಾರೆ.

ಬೆಂಗಳೂರು, ಮೇ 3: ರಾಜ್ಯದಲ್ಲಿ ನಾಯಕತ್ವದ ಕೂಗು ಎದ್ದಿರುವ ಮದ್ಯೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ರಾತ್ರಿ ಬೆಂಗಳೂರಿಗೆ ಬಂದಿಳಿದ್ದಾರೆ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದಾಳವೊಂದನ್ನು ಉರುಳಿಸಿದ್ದಾರೆ.
2018ರ ಚುನಾವಣೆಯ ನಂತರ ರಾಜ್ಯದಲ್ಲಿ ಅನೇಕ ಬದಲಾವಣೆಗಳು ನಡೆದ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದರು. ಬಿಎಸ್‌ವೈ ಮೂರು ವರ್ಷದ ಅವಧಿ ಮುಗಿಯುತ್ತಿದ್ದಂತೆ ವಯಸ್ಸಿನ ಕಾರಣ ನೀಡಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲಾಯಿತು. ಆಗ ಅವರೇ ಸೂಚಿಸಿದಂತಹ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂಡಿಸಲಾಯಿತು. ಬಸವರಾಜ ಬೊಮ್ಮಾಯಿ ಅವರು ಅಧಿಕಾರಕ್ಕೆ ಬಂದು ಹತ್ತನೇ ತಿಂಗಳ ಅಧಿಕಾರ ನಡೆಸುತ್ತಿದ್ದಾರೆ.
ಈ ಮಧ್ಯೆ ಬಸವರಾಜ ಬೊಮ್ಮಾಯಿ ಅವರನ್ನೂ ಬದಲಿಸಬೇಕು. ಹಿಂದುತ್ವದ, ಸಂಘ ಪರಿವಾರದ ಹಿನ್ನೆಲೆ ಇರುವವರನ್ನು ಅಧಿಕಾರದಲ್ಲಿ ಕೂಡಿಸಬೇಕು. ಉತ್ತರ ಪ್ರದೇಶದಲ್ಲಿ ಹಿಂದುತ್ವದ ಮಾದರಿ ಯಶಸ್ವಿ ಆಗಿರುವುದರಿಂದ ಅದನ್ನು ಕರ್ನಾಟಲದಲ್ಲಿಯೂ ಪ್ರದರ್ಶಿಸಬೇಕು ಎಂಬುದು ಹಲವರು ಬಹಿರಂಗವಾಗಿ ಹೇಳಿಕೊಳ್ಳದಿದ್ದರೂ ಅಂತರಂಗದಲ್ಲಿ ತುಡಿತ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ ದೆಹಲಿ ನಾಯಕರಿಗಿಂತ ಸ್ಥಳೀಯ ನಾಯಕರೇ ಪ್ರಭಾವಿ ಎಂಬುದು ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ.
ದಾಳ ಉರುಳಿಸಿದ ಯಡಿಯೂರಪ್ಪ:
ಮುಖ್ಯಮಂತ್ರಿ, ಸಚಿವ ಸಂಪುಟದಲ್ಲಿ ಹಲವು ಸಚಿವರು, ಪಕ್ಷದ ರಾಜ್ಯಾಧ್ಯಕ್ಷ ಸಹಿತ ಇಡೀ ಸರ್ಕಾರ ಮತ್ತು ಪಕ್ಷದೊಳಗೆ ಬದಲಾವಣೆ ಮಾಡಬೇಕು ಎಂಬುದು ಬಿಜೆಪಿ ನಿಲುವಾಗಿದೆ. ಇದಕ್ಕಾಗಿಯೇ ಅಮಿತ್ ಶಾ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಆದರೆ, ಯಡಿಯೂರಪ್ಪ ತಮ್ಮ ನಿರ್ಧಾರವನ್ನು ಒಂದು ದಿನ ಮುಂಚಿತವಾಗಿಯೇ ತಿಳಿಸಿದಂತಿದೆ.
ಮುಖ್ಯಮಂತ್ರಿ ಬದಲಾವಣೆ ಇಲ್ಲ
‘ರಾಜ್ಯದ ನಾಯಕತ್ವ ಬದಲಾವಣೆಯ ಉದ್ದೇಶದಿಂದ ಅಮಿತ್ ಶಾ ಭೇಟಿ ನೀಡುತ್ತಿದ್ದಾರೆ ಎಂಬುದೆಲ್ಲಾ ಊಹಾಪೋಹ. ಅಂತಹ ಯಾವುದೇ ನಿರ್ಧಾರಗಳೂ ಆಗುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬದಲಾಯಿಸುವ ಆಲೋಚನೆಯೇ ಇಲ್ಲ’ ಎಂದು ಸ್ಪಷ್ಟವಾಗಿ ತಿಳಿಸುವ ಮೂಲಕ ಮುಖ್ಯಮಂತ್ರಿ ಬದಲಾವಣೆಯನ್ನು ಆಲೋಚಿಸಬಾರದು ಎಂಬ ಸಂದೇಶವನ್ನೂ ನೀಡಿದಂತಿದೆ.
ಅಮಿತ್ ಶಾ ಭೇಟಿ ಮಾಡುತ್ತೇನೆ:
”ನಾನು ಅಮಿತ್ ಶಾ ಅವರನ್ನು ಭೇಟಿ ಮಾಡುತ್ತೇನೆ. ಅವರು ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳಲಿದ್ದಾರೆ. ಮುಂದೆ ವಿಧಾನಸಭೆ ಚುನಾವಣೆ ಇರುವ ಕಾರಣ ಪ್ರಧಾನಿ ಮತ್ತು ಅಮಿತ್ ಶಾ ಅವರು ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳ ಗುರಿ ತಲುಪಲು ಸಲಹೆ ನೀಡಲಿದ್ದಾರೆ,” ಎಂದು ಯಡಿಯೂರಪ್ಪ ಹೇಳಿದ್ದಾರೆ.
ನಾಯಕತ್ವ ಬದಲಾವಣೆ ಮತ್ತು ಕೆಲವು ಹಾಲಿ ಶಾಸಕರಿಗೆ ಮುಂಬರುವ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಸಿಗದೆ ಇರಬಹುದು ಎಂದು ಎಂದು ಬಿ.ಎಲ್. ಸಂತೋಷ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಎಸ್‌ವೈ, “ಈ ವಿಷಯದ ಬಗ್ಗೆ ಚರ್ಚಿಸಲು ನಾನು ಇಷ್ಪಪಡುವುದಿಲ್ಲ” ಎಂದಷ್ಟೇ ಹೇಳಿದರು.