ಕೆವೈಸಿ ಅಪ್ ಡೇಟ್ ಸೋಗಿನಲ್ಲಿ ದಾಖಲೆ ಪಡೆದು 9 ಲಕ್ಷ ಎಗರಿಸಿ ಆನ್ ಲೈನ್ ವಂಚಕರು..!

ಬೆಂಗಳೂರು: ನಗರ ಆಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆ ಕಾನ್ ಸ್ಟೇಬಲ್‌ನ ಸಮಯಪ್ರಜ್ಞೆ ಹಾಗೂ ತ್ವರಿತ ಕಾರ್ಯಾಚರಣೆಯಿಂದ ಲೋಕಾಯುಕ್ತ ನಿವೃತ್ತ ರಿಜಿಸ್ಟ್ರಾರ್ ಅವರ ಬ್ಯಾಂಕಿನಿಂದ ಸೈಬರ್ ಖದೀಮರು ಎಗರಿಸಿದ್ದ 9 ಲಕ್ಷ ರೂಪಾಯಿ ತಡೆದು ಮತ್ತೆ ದೂರುದಾರರಿಗೆ ಹಣ ವಾಪಸ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೆವೈಸಿ ಅಪ್ ಡೇಟ್ ಮಾಡುವುದಾಗಿ ಬ್ಯಾಂಕ್ ಹೆಸರೇಳಿಕೊಂಡು ನಿವೃತ್ತ ಲೋಕಾಯುಕ್ತ ರಿಜಿಸ್ಟ್ರಾರ್ ರೊಬ್ಬರಿಗೆ ಕರೆ ಮಾಡಿದ ಆನ್ ಲೈನ್ ವಂಚಕರು ಎಲ್ಲಾ ದಾಖಲಾತಿಗಳನ್ನ ಪೋನ್ ನಲ್ಲಿ ಪಡೆದುಕೊಂಡು ಕ್ಷಣಾರ್ಧದಲ್ಲಿ ಜೀವಮಾನವೀಡಿ ಸಂಪಾದಿಸಿದ್ದ 9 ಲಕ್ಷ ಪಿಂಚಣಿ ಹಣ ಎಗರಿಸಿದ್ದರು.
ಹಣ ಕಳೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ದೂರುದಾರರು ಕೂಡಲೇ ಆಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.ಈ ವೇಳೆ ರಜೆಯಿದ್ದರೂ ಅನ್ಯ ಕಾರ್ಯನಿಮಿತ್ತ ಠಾಣೆಗೆ ಬಂದಿದ್ದ ಕಾನ್ ಸ್ಟೇಬಲ್ ಆಶ್ತಪ್ ಸಬ್ ಪಿಂಜಾರ, ದೂರು ದಾಖಲಿಸಿಕೊಳ್ಳದೆ ಕೂಡಲೇ ಕೆನೆರಾ ಬ್ಯಾಂಕ್ ಮ್ಯಾನೇಜರ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ರಾಜಸ್ತಾನದಲ್ಲಿದ್ದ ಮ್ಯಾನೇಜರ್ ಕೂಡಲೇ ಕಾರ್ಯಪ್ರವೃತ್ತರಾಗಿ ಸೈಬರ್ ಖದೀಮರ ಬ್ಯಾಂಕ್ ಅಕೌಂಟ್ ಖಾತೆಯನ್ನ ಫ್ರೀಜ್ ಮಾಡಿದ್ದಾರೆ. ಅಕೌಂಟ್ ನಲ್ಲಿದ್ದ 9 ಲಕ್ಷ ಹಣವನ್ನ ದೂರುದಾರರಿಗೆ ವಾಪಸ್ ಕೊಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.