
ಆರೋಗ್ಯ ಸಂಜೀವಿನಿ ಯೋಜನೆ ಯಿಂದ ಹೊರಗಿಟ್ಟಿರುವ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ರಾಜ್ಯದ 10 ಮಹಾನಗರ ಪಾಲಿಕೆಗಳ ಎರಡು ಲಕ್ಷಕ್ಕೂ ಹೆಚ್ಚು ನೌಕರರು ಹಾಗೂ ಪೌರ ಕಾರ್ಮಿಕರು ಇಂದಿನಿಂದ ಕೆಲಸ ಕಾರ್ಯ ಬಹಿಷ್ಕರಿಸಿ ಮುಷ್ಕರ ನಡೆಸುತ್ತಿದ್ದಾರೆ.
ತುಮಕೂರು, ಮೈಸೂರು, ಹುಬ್ಬಳಿ-ಧಾರವಾಡ ಸೇರಿದಂತೆ 10 ಮಹಾನಗರ ಪಾಲಿಕೆಗಳ ಲಕ್ಷಾಂತರ ನೌಕರರು ತಮ್ಮ ಬೇಡಿಕೆ ಈಡೇರುವವರೆಗೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸರ್ಕಾರದಿಂದ ಇದೆಂಥಾ ಒಡೆದು ಆಳುವ ದ್ವಂದ್ವ ನೀತಿ, ಸರ್ಕಾರಿ ನೌಕರರ ನಡುವೆಯೇ ತಂದಿಟ್ಟು ನೋಡುವ ಧೋರಣೆ, ಆರೋಗ್ಯ ಕ್ಷೇಮಕ್ಕಿರುವ ಯೋಜನೆಯ¯್ಲ ಪಕ್ಷಪಾತ ಎಂದು ಮಹಾನಗರ ಪಾಲಿಕೆಗಳ ನೌಕರರು ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಭಿತರಿಗೆ ಸರ್ಕಾರ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಿದೆ.
ಆದರೆ, ಪ್ರತಿನಿತ್ಯ ಸಾರ್ವಜನಿಕರೊಂದಿಗೆ ಒಡನಾಟವಿಟ್ಟುಕೊಂಡಿರುವ ಹಾಗೂ ಸ್ವಚ್ಚತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮಹಾನಗರ ಪಾಲಿಕೆಗಳ ನೌಕರರನ್ನು ಯೋಜನೆಯಿಂದ ಹೊರಗಿಟ್ಟಿರುವುದು ಏಕೆ ಎಂದು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆಗಳ ನೌಕರರ ಸಂಘದ ಅಧ್ಯಕ್ಷ ಅಮೃತ್‍ರಾಜ್ ಪ್ರಶ್ನಿಸಿದ್ದಾರೆ.
ಸರ್ಕಾರಿ ಇಲಾಖೆಗಳ ನೌಕರರಿಗೆ ಮಾತ್ರ ಏಕೆ ಯೋಜನೆಯ ಪ್ರಯೋಜನ, ನಗರದ ಸ್ವಚ್ಛತೆಯಲ್ಲಿ ನಿರ್ಣಾಯಕ- ಮುಂಚೂಣಿ ಯಲ್ಲಿ ರುವವರ ನಿರ್ಲಕ್ಷ್ಯವೇಕೆ..
ನಗರಗಳ ಸ್ವಚ್ಛತೆಯಲ್ಲಿ ಮುಂಚೂಣಿ ಯಲ್ಲಿರುವ ನೌಕರರೇನು ಪಾಪ ಮಾಡಿದ್ರು.. ಸ್ವಚ್ಛತೆ- ಸೌಂದರ್ಯ ಕಾಪಾ ಡೊಕ್ಕೆ ಮಾತ್ರ ಪಾಲಿಕೆ ನೌಕರರು ಬೇಕಾ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಬೇಡಿಕೆ ಈಡೇರದಿದ್ದರೆ ಯಾವುದೇ ನಗರಗಳ ಸ್ವಚ್ಚತಾ ಕಾರ್ಯದಲ್ಲಿ ಪೌರ ಕಾರ್ಮಿಕರು ಪಾಲ್ಗೊಳ್ಳುವುದಿಲ್ಲ. ಹೀಗಾಗಿ ಕೂಡಲೆ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಅಮೃತ್‍ರಾಜ್ ಒತ್ತಾಯಿಸಿದ್ದಾರೆ.