
ಫೇಸ್ಬುಕ್ ಸ್ನೇಹಿತ ಒಡ್ಡಿದ ಆಮಿಷ ನಂಬಿ ಉತ್ತಮ ವೇತನದ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ಬಿಹಾರ ಮೂಲದ 17 ವರ್ಷದ ಬಾಲಕನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇರಿಸಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಪಟ್ಟೇಗಾರಪಾಳ್ಯದ ಕನಕನಗರ ನಿವಾಸಿ ಎ.ಪ್ರಭಾತ್ (21), ಕುಣಿಗಲ್ ನಿವಾಸಿಗಳಾದ ಬಿ.ಕೆ.ರಂಗನಾಥ್ ಅಲಿಯಾಸ್ ಡಾಲಿ (19) ಹಾಗೂ ಬಿ.ಎಸ್.ಕುಶಾಲ್ (19) ಬಂಧಿತರು.
ಆರೋಪಿಗಳು ಬಿಹಾರದಿಂದ ರೈಲಿನಲ್ಲಿ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದ ಪ್ರವೀಣ್ ಕುಮಾರ್ (17) ಎಂಬಾತನನ್ನು ಡಿ.12ರಂದು ಅಪಹರಿಸಿ ಹಣಕ್ಕೆ ಬೇಡಿಕೆ ಇರಿಸಿದ್ದರು.
ಆರೋಪಿ ಪ್ರಭಾತ್ ಬಿಹಾರ ಮೂಲದವನಾಗಿದ್ದು, ಈತನ ಕುಟುಂಬ 25 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದೆ. ಪ್ರಭಾತ್ ನಗರದ ಖಾಸಗಿ ಕಾಲೇಜಿನಲ್ಲಿ ಡಿಪ್ಲೊಮಾ ಓದುತ್ತಿದ್ದಾನೆ.
ಆರೋಪಿ ರಂಗನಾಥ್ ಕುಣಿಗಲ್ ಕಾಲೇಜಿನಲ್ಲಿ ಪಿಯು ಮಾಡಿದ್ದಾನೆ. ಇನ್ನು ಕುಶಾಲ್ ಎಸ್ಸೆಸ್ಸೆಎಲ್ಸಿ ಅರ್ಧಕ್ಕೆ ಮೊಟಕುಗೊಳಿಸಿ ಕೃಷಿ ಮಾಡಿಕೊಂಡಿದ್ದ. ಆರೋಪಿ ಪ್ರಭಾತ್ ಕಾಲೇಜಿಗೆ ಹೋಗುವಾಗ ಈ ಇಬ್ಬರು ಆರೋಪಿಗಳು ಪರಿಚಯವಾಗಿದ್ದರು.
ಇತ್ತೀಚೆಗೆ ಪ್ರಭಾತ್ ಹಾಗೂ ಪ್ರವೀಣ್ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದರು. ಆರೋಪಿ ಪ್ರಭಾತ್ ಬೆಂಗಳೂರಿಗೆ ಬಂದಲ್ಲಿ ಕೈತುಂಬ ಸಂಬಳದ ಉತ್ತಮ ಕೆಲಸ ಕೊಡಿಸುವುದಾಗಿ ಪ್ರವೀಣ್‌ಗೆ ಹೇಳಿದ್ದ.
ನಂಬಿದ ಪ್ರವೀಣ್ ಡಿ.12ರ ರಾತ್ರಿ 7.30ಕ್ಕೆ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದಿದ್ದ. ಆರೋಪಿ ಪ್ರಭಾತ್, ಪ್ರವೀಣ್‌ನನ್ನು ರೈಲು ನಿಲ್ದಾಣದಿಂದ ಪಟ್ಟೇಗಾರಪಾಳ್ಯದ ರೂಮ್‌ಗೆ ಕರೆದೊಯ್ದು ಕೂಡಿ ಹಾಕಿದ್ದ.
ಅಲ್ಲಿಗೆ ಸ್ನೇಹಿತರಾದ ರಂಗನಾಥ ಮತ್ತು ಕುಶಾಲ್‌ನನ್ನು ಕರೆಸಿಕೊಂಡಿದ್ದ.ಪ್ರವೀಣ್ ತಂದೆಗೆ ಕರೆ ಮಾಡಿದ್ದ ಆರೋಪಿಗಳು 5 ಲಕ್ಷಕ್ಕೆ ಬೇಡಿಕೆ ಇರಿಸಿದ್ದರು. ಆರೋಪಿಗಳು ನೀಡಿದ್ದ ಮೊಬೈಲ್ ನಂಬರ್‌ಗೆ 40 ಸಾವಿರ ಹಾಕಿದ್ದರು.
ಮತ್ತೆ ಕರೆ ಮಾಡಿ ಆರೋಪಿಗಳು 60 ಸಾವಿರ ಫೋನ್ ಪೇ ಮಾಡದಿದ್ದರೆಮಗನ ಕೈ ಕತ್ತರಿಸುವುದಾಗಿ ಬೆದರಿಸಿದ್ದರು. ಆತಂಕಗೊಂಡ ಪ್ರವೀಣ್ ತಂದೆ ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.