ರಾಜ್ಯ

ಕೆರೆ ಕಬಳಿಕೆ ಸಮಗ್ರ ತನಿಖೆ

ಬೆಂಗಳೂರಿನಲ್ಲಿ ಕೆರೆ ಒತ್ತುವರಿ, ರಾಜಕಾಲುವೆ ಹಾಗೂ ಸರ್ಕಾರಿ ಜಮೀನು ಒತ್ತುವರಿ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿಂದು ಪ್ರಕಟಿಸಿದರು.

ಮಳೆ ಅತಿವೃಷ್ಠಿಗೆ ಸಂಬಂಧಿಸಿದಂತೆ ಸದನದಲ್ಲಿ ನಡೆದ ಚರ್ಚೆಗೆ ಕಂದಾಯ ಸಚಿವ ಆರ್. ಅಶೋಕ್ ಉತ್ತರ ನೀಡುತ್ತಿದ್ದಾಗ ಮಧ್ಯೆ ಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಬೆಂಗಳೂರಿನಲ್ಲಿ ಕೆರೆಗಳು ಕಬಳಿಕೆಯಾಗಿರುವುದು ಸತ್ಯ.

ಯಾವ ಕಾಲದಲ್ಲಿ ಯಾರ್ಯಾರು ಈ ಕಬಳಿಕೆ ನಡೆಸಿದ್ದಾರೆ, ಯಾವ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದರು.ಕೆರೆ ಒತ್ತುವರಿಯ ಜತೆಗೆ ರಾಜಕಾಲುವೆ ಒತ್ತುವರಿ, ರಾಜಕಾಲುವೆ ಮೇಲೆ ಬೇನಾಮಿ ಹೆಸರಿನಲ್ಲಿ ರಾಜಕಾರಣಿಗಳಾಗಲೀ ಅಥವಾ ಇನ್ನೊಬ್ಬರಾಗಲೀ ಕಟ್ಟಡಗಳನ್ನು ನಿರ್ಮಿಸಿರುವುದು ೨೦೦೭ ರ ಹಸಿರು ನ್ಯಾಯ ಮಂಡಳಿ ಆದೇಶದ ನಂತರ ಬಫರ್ ಜೋನ್‌ನಲ್ಲಿ ಆಗಿರುವ ಒತ್ತುವರಿ ಎಲ್ಲದರ ಬಗ್ಗೆಯೂ ತನಿಖೆ ನಡೆಸುವುದಾಗಿ ಹೇಳಿದರು.

ಕೆರೆ, ರಾಜಕಾಲುವೆ ಒತ್ತುವರಿಯ ತನಿಖೆಯ ಸ್ವರೂಪ ಯಾವ ರೀತಿ ಇರಬೇಕು ಎನ್ನುವುದನ್ನು ಮುಂದಿನ ದಿನಗಳಲ್ಲಿ ವಿವರವಾಗಿ ತಿಳಿಸುತ್ತೇನೆ. ಈ ಹಿಂದೆಯೂ ಸಹ ಕೆರೆ ಒತ್ತುವರಿ ಬಗ್ಗೆ ತನಿಖೆ ನಡೆಸುತ್ತೇನೆ ಎಂದು ಸದನದ ಹೊರಗೆ ಹೇಳಿದ್ದೆ. ಅದರಂತೆ ಈಗ ಸದನದ ಒಳಗೆ ತನಿಖೆ ನಡೆಸುವುದಾಗಿ ಹೇಳಿದ್ದೇನೆ ಎಂದರು.

ಬೆಂಗಳೂರಿನಲ್ಲಿ ಕೆರೆ, ರಾಜಕಾಲುವೆ ಒತ್ತುವರಿಗೆ ಯಾರು ಕಾರಣ, ಯಾವೆಲ್ಲ ಅಧಿಕಾರಿಗಳು, ಪ್ರಭಾವಿಗಳು ಇದರಲ್ಲಿ ಭಾಗಿಯಾಗಿದ್ದಾರೆ, ಈ ಬಗ್ಗೆ ತನಿಖೆ ನಡೆಯಲಿದೆ ಎಂದರು.ನಾಗರಿಕತೆ ಬೆಳೆದಂತೆ ಗೋಮಾಳ, ಸರ್ಕಾರಿ ಜಮೀನುಗಳನ್ನು ಉಳಿಸುವುದು ಕಷ್ಟವಾಗುತ್ತಿದೆ. ಯಾರ ಕಾಲದಲ್ಲಿ ಒತ್ತುವರಿಯಾಗಿದೆ ಎಂಬುದು ಎಲ್ಲವೂ ತನಿಖೆಯಲ್ಲಿ ಹೊರ ಬರಲಿದೆ.

ಇದು ನಮ್ಮಸರ್ಕಾರ, ನಿಮ್ಮ ಸರ್ಕಾರ ಎಂಬ ಪ್ರಶ್ನೆಯಿಲ್ಲ. ವ್ಯವಸ್ಥೆ ಕೆಟ್ಟಿದೆ. ಅದನ್ನು ಸರಿಪಡಿಸಬೇಕು ಎಂದು ಅವರು ಹೇಳಿದರು.ಒತ್ತುವರಿ ತೆರವು ಸಂದರ್ಭದಲ್ಲೂ ಕೆಲವರು ಇದು ಬಡವರದ್ದು, ಇದು ಶ್ರೀಮಂತರದ್ದು ತೆರವು ಬೇಡ ಎಂಬ ಒತ್ತಡಗಳು ಬಂದಿವೆ.

ನಾವು ಯಾರ ರಕ್ಷಣೆಗೂ ಇಲ್ಲ. ಒತ್ತುವರಿಗಳನ್ನು ತೆರವು ಮಾಡಲಾಗುವುದು ಎಂದರು.ಬೆಂಗಳೂರಿನಲ್ಲಿ ಈ ಹಿಂದೆ ಕೆರೆಗಳು ಬತ್ತಿವೆ ಎಂದು ಅವುಗಳನ್ನು ನಕಾಶೆಯಿಂದ ತೆಗೆಯುವ ಪ್ರಯತ್ನವೂ ನಡೆದಿತ್ತು. ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಆ ಪ್ರಯತ್ನವನ್ನು ಕೈ ಬಿಡಲಾಯಿತು ಎಂದರು.

ಈ ಹಂತದಲ್ಲಿ ಕಾಂಗ್ರೆಸ್‌ನ ಕೆ.ಜೆ. ಜಾರ್ಜ್ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿ, ಈ ರೀತಿ ಕೆರೆಗಳನ್ನು ಕೈ ಬಿಡುವ ಬಗ್ಗೆ ಹಿಂದಿನ ಸರ್ಕಾರ ಯಾವುದೇ ತೀರ್ಮಾನ ಮಾಡಿರಲಿಲ್ಲ.

ದಾಖಲೆಗಳನ್ನು ಕೊಡಿ ಎಂದು ಒತ್ತಾಯಿಸಿದಾಗ ಮುಖ್ಯಮಂತ್ರಿಗಳು ೨೦೧೮ ರಲ್ಲಿ ಸಚಿವ ಸಂಪುಟದ ಟಿಪ್ಪಣಿಯನ್ನು ಸದನದಲ್ಲಿ ಓದಿದರು.ನಾನು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿಲ್ಲ, ಪ್ರಯತ್ನ ನಡೆದಿತ್ತು ಎಂದು ಹೇಳಿದ್ದೆ. ಕೆಲ ಅಧಿಕಾರಿಗಳು ಕೆರೆಗಳು ನಿರುಪಯುಕ್ತವಾಗಿವೆ.

ಇದನ್ನು ಮೂಲಭೂತ ಸೌಕರ್ಯಗಳಿಗೆ ಬಳಸಿಕೊಳ್ಳಬಹುದು ಎಂದು ಸರ್ಕಾರಗಳಿಗೆ ತಪ್ಪು ಮಾರ್ಗದರ್ಶನ ಮಾಡುವುದು ಸಹಜ. ಏನೇ ಇರಲಿ, ಎಲ್ಲದರ ಬಗ್ಗೆಯೂ ತನಿಖೆ ನಡೆಸುತ್ತೇನೆ ಎಂದು ಅವರು ತಿಳಿಸಿದರು.ಈ ಹಂತದಲ್ಲಿ ಮುಖ್ಯಮಂತ್ರಿಗಳ ಜತೆ ಕಾಂಗ್ರೆಸ್‌ನ ಕೆ.ಜೆ. ಜಾರ್ಜ್ ಹಾಗೂ ಕೆಲ ಸದಸ್ಯರು ವಾಗ್ದಾದಕ್ಕಿಳಿದು ಸದನದಲ್ಲಿ ಕೆಲಕಾಲ ಗದ್ದಲದ ವಾತಾವರಣ ಉಂಟಾಯಿತು.ಮುಖ್ಯಮಂತ್ರಿ ತಮ್ಮ ಮಾತಲ್ಲಿ ಸತ್ಯವಿದೆ.

ಕೆರೆಗಳನ್ನು ನಕಾಶೆಯಿಂದ ಕೈ ಬಿಡುವ ಪ್ರಯತ್ನ ನಡೆದಿತ್ತು. ಇದರಲ್ಲಿ ಎರಡು ಮಾತಿಲ್ಲ ಎಂದು ತಮ್ಮ ಮಾತುಗಳನ್ನು ಸಮರ್ಥಿಸಿಕೊಂಡರು.ಇದಕ್ಕೂ ಮೊದಲು ಮಳೆ, ಅತಿವೃಷ್ಠಿಗೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್. ಅಶೋಕ್ ಅವರು ಉತ್ತರ ನೀಡುತ್ತಿದ್ದಾಗ ಕಾಂಗ್ರೆಸ್‌ನ ಕೆ.ಜೆ. ಜಾರ್ಜ್ ಅವರು, ಕಬಳಿಸಿದ್ದೇನೆ ಎಂಬ ರೀತಿಯಲ್ಲಿ ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ.

ಇದು ಸರಿಯಲ್ಲ. ತಪ್ಪಿದ್ದರೆ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಿ ಎಂದು ಸವಾಲು ಹಾಕಿದ್ದರು.ಆಗ ಮುಖ್ಯಮಂತ್ರಿಗಳು ಎದ್ದುನಿಂತು ಕೆರೆ, ರಾಜಕಾಲುವೆ ಒತ್ತುವರಿ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿ, ಜಾರ್ಜ್ ಅವರ ಮೇಲೆ ನಾವ್ಯಾರು ಆರೋಪ ಮಾಡಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಸ್ವಾಗತಾರ್ಹಮುಖ್ಯಮಂತ್ರಿಗಳು ಕೆರೆ ಒತ್ತುವರಿ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿರುವುದು ಸ್ವಾಗತಾರ್ಹ. ತನಿಖೆ ಹಿಂದಿನಿಂದಲೂ ಆಗಲಿ. ಯಾರ್ಯಾರ ಕಾಲದಲ್ಲಿ ಏನೇನು ಆಗಿದೆ ಎಂಬುದು ಬೆಳಕಿಗೆ ಬಂದಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button