
ನಾನು ಕೆಜಿಎಫ್ 2 ಸಿನಿಮಾ ಬಗ್ಗೆ ಆಡಿದ ಮಾತನ್ನು ತಪ್ಪಾಗಿ ಗ್ರಹಿಸಲಾಗಿದೆ. ಆಡದ ಪದಗಳನ್ನು ಬಳಸಿ ತಪ್ಪಾಗಿ ಗ್ರಹಿಸುವಂತೆ ಮಾಡಲಾಗಿದೆ. ನಾನು ಕೆಲವು ಮಾತುಗಳನ್ನು ಆಡಿರಲೇ ಇಲ್ಲ, ಅದನ್ನು ಬೇರೆ ರೀತಿಯಲ್ಲಿ ತಲುಪಿಸುವ ಪ್ರಯತ್ನ ಆಗಿದೆ.
ಇದಕ್ಕೆ ನನ್ನ ವಿಷಾದವಿದೆ ಎಂದು ನಟ ಕಿಶೋರ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ರಶ್ಮಿಕಾ ವಿಷಯದ ಚರ್ಚೆಯಲ್ಲಿ ಆಯ್ಕೆಯ ಸ್ವಾತಂತ್ರ್ಯದ ಮಾತುಗಳ ನಡುವೆ ಸುಳಿದ ಮಾತುಗಳಲ್ಲಿ ಯಾರ ಮನಸ್ಸನ್ನೂ ನೋಯಿಸುವ ಉದ್ದೇಶವಿರಲಿಲ್ಲ.
ಮೈಂಡ್ ಲೆಸ್ ನನ್ನ ಪದವಲ್ಲ. ಚರ್ಚಿಸಲು, ಚಿಂತಿಸಲು ನಿಜವಾದ ಸಮಸ್ಯೆಗಳು ಹಲವಿರುವಾಗ ನನ್ನ ಲೋಕಾಭಿರಾಮದ ಯಾವುದೇ ಮಾತು ಚರ್ಚೆಗೆ ಗ್ರಾಸವಾಗುವುದೋ, ಜನರ ಸಮಯ ಹಾಳು ಮಾಡುವುದೋ ನನ್ನ ಮಟ್ಟಿಗೆ ಅಕ್ಷಮ್ಯ.
ಆದರೂ ಅದಕ್ಕಾಗಿ ಕ್ಷಮೆ ಇರಲಿ ಎಂದು ಕಿಶೋರ್ ಪ್ರತಿಕ್ರಿಯಿಸಿದ್ದಾರೆ.ಕಾಂತಾರ ಸಿನಿಮಾದಿಂದ ಶುರುವಾದ ಅವರ ಮಾತುಗಳು, ಕೆಜಿಎಫ್ 2 ಅನ್ನೂ ಸೇರಿಸಿಕೊಂಡವು.
ಬಾಲಿವುಡ್ ನಲ್ಲಿ ನಡೆಯುತ್ತಿರುವ ಬಾಯ್ಕಾಟ್ ಕುರಿತಾಗಿಯೂ ಬರೆದುಕೊಂಡಿದ್ದಾರೆ. ಬಾಲಿವುಡ್ ಅನ್ನು ನಾವು ರಕ್ಷಿಸಬೇಕು. ಇಡೀ ದೇಶವೇ ಬಾಲಿವುಡ್ ಪರ ನಿಲ್ಲಬೇಕು ಎಂದು ಬರೆದುಕೊಂಡಿದ್ದಾರೆ.
ನಾನಾ ಕಾರಣಗಳಿಂದಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಬಾಲಿವುಡ್ ಅನ್ನು ತೆಗಳುವ ವಾತಾವರಣ ಭಾರತದಲ್ಲಿ ಉಂಟಾಗಿದೆ. ಅನೇಕ ಸಿನಿಮಾಗಳು ಬಾಯ್ಕಾಟ್ ಬಿಸಿಗೆ ಬೆಂದು ಹೋದವು.
ಅನೇಕ ಕಲಾವಿದರು ನಿರ್ದೇಶಕರು ಹಾಗೂ ತಂತ್ರಜ್ಞರು ನಿಂದನೆಗೆ ಒಳಗಾದರು. ಖಾನ್ ಖಾಂದಾನ್ ಗಳನ್ನೂ ಒಟ್ಟಾಗಿಸಿ ಸೇರಿಸಿ ಮಂಗಳಾರತಿ ಮಾಡಲಾಯಿತು. ಈ ಕಡೆ ದೀಪಿಕಾ ಪಡುಕೋಣೆ, ಕಂಗನಾ ರಣಾವತ್ ಕೂಡ ಬೈಯಿಸಿಕೊಳ್ಳುವುದನ್ನು ಬಿಡಲಿಲ್ಲ.
ದೇಶದ ಚಿತ್ರರಂಗ ಒಕ್ಕೊರಲಿನಿಂದ ಬಾಲಿವುಡ್ ನ ವಿರುದ್ಧ ನಡೆಯುತ್ತಿರುವ ಬಾಯ್ಕಾಟ್ ಟ್ರೆಂಡನ್ನು, ಮತಾಂಧ ಗೂಂಡಾಗಿರಿಯನ್ನು, ದ್ವೇಷದ ರಾಜಕೀಯವನ್ನು ಖಂಡಿಸಿ ನಿಲ್ಲುವ ಕಾಲ ಬಂದಿದೆ.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ವ್ಯಾಪಾರ ಅಥವಾ ಉದ್ಯಮದ ಸುರಕ್ಷತೆಯನ್ನು ಖಚಿತಪಡಿಸಲು ಸಾಧ್ಯವಾಗದಿರುವುದು ಸರ್ಕಾರಗಳ ವೈಫಲ್ಯಕ್ಕೆ ಸಾಕ್ಷಿ.
ಇದು ಸಮಾಜವನ್ನು ವಿಷಪೂರಿತಗೊಳಿಸುವ ಸ್ಪಷ್ಟ ಕಾನೂನು ಉಲ್ಲಂಘನೆಯಾಗಿದ್ದು, ಇದನ್ನು ತಡೆಯಬೇಕಿದೆ, ಶಿಕ್ಷಿಸಬೇಕಾಗಿದೆ. ದ್ವೇಷದ ಈ ಬೆಂಕಿ ಸ್ಥಳೀಯ ಚಿತ್ರೋದ್ಯಮಗಳಿಗೂ ವ್ಯಾಪಿಸುವ ಮುನ್ನ ಎಂದು ಹೇಳಿದ್ದಾರೆ.