ಅಪರಾಧ

ಕೆಎಂಎಫ್‌ನಲ್ಲಿ ಉದ್ಯೋಗ ಕೊಡಿಸುವ ನೆಪ: 1.84 ಕೋಟಿ ರೂ. ವಂಚಿಸಿದ್ದ ಆರೋಪಿ ಅಂದರ್

ಬೆಂಗಳೂರಿನ ಕೆಎಂಎಫ್‌ ಸಂಸ್ಥೆಯೊಂದರಲ್ಲಿ ಉದ್ಯೋಗ ದೊರಕಿಸಿ ಕೊಡುವುದಾಗಿ ನಂಬಿಸಿ 138ಕ್ಕೂ ಅಧಿಕ ಮಂದಿಯಿಂದ 1.84 ಕೋಟಿ ರೂ.ಗಳಿಗೂ ಅಧಿಕ ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.

ಬಂಟ್ವಾಳ ಸಾಲೆತ್ತೂರಿನ ರಾಮ ಪ್ರಸಾದ್‌ ರಾವ್‌ ಪಿ. (37) ಬಂಧಿತ ಆರೋಪಿ. ಫರಂಗಿ ಪೇಟೆ ವಳಚ್ಚಿಲ್‌ ಪದವಿನ ದೇವಿ ಪ್ರಸಾದ್‌ ಅವರು ಪಿಯುಸಿ ವಿದ್ಯಾಭ್ಯಾಸ ಮಾಡಿ ಉದ್ಯೋಗ ಸಿಗದೆ ಮನೆಯಲ್ಲೇ ಇದ್ದರು. ಆ ಸಂದರ್ಭ ಅವರ ಸ್ನೇಹಿತ ಪ್ರೀತೇಶ್‌ ಕುಮಾರ್‌ ಸಲಹೆ ನೀಡಿದ್ದು, ಬೆಂಗಳೂರಿನ ಕೆಎಂಎಫ್‌ ಸಂಸ್ಥೆಯಲ್ಲಿ ಉದ್ಯೋಗವಿದ್ದು, ಗುಟ್ಟಾಗಿ ಹಣ ನೀಡಿದರೆ ಉದ್ಯೋಗ ದೊರೆಯುತ್ತದೆ.

ಪಡೀಲ್‌ ನಿವಾಸಿ, ಡೈರಿಯ ಉದ್ಯೋಗಿ ಚಂದ್ರಾವತಿ ಮೂಲಕ ಹಣ ನೀಡಬೇಕು ಎಂದು ತಿಳಿಸಿದ್ದ. ಇದನ್ನು ನಂಬಿದ ದೇವಿ ಪ್ರಸಾದ್‌ ಅವರು ಚಂದ್ರಾವತಿಯನ್ನು ಸಂಪರ್ಕಿಸಿದ್ದು, ಆ ಮಹಿಳೆ ‘ಉದ್ಯೋಗ ನೀಡಲು 1.80 ಲಕ್ಷ ರೂ. ನೀಡಬೇಕು. ಅದರಲ್ಲಿ 80,000 ರೂ. ತುರ್ತಾಗಿ ನೀಡಬೇಕು’ ಎಂದಿದ್ದಳು. ಅದರಂತೆ ದೇವಿ ಪ್ರಸಾದ್‌ ಅವರು ಚಂದ್ರಾವತಿಗೆ ಹಣ ಪಾವತಿಸಿದ್ದರು.

ಅದಕ್ಕೆ ಪ್ರತಿಯಾಗಿ ಚಂದ್ರಾವತಿ ಅವರು ದೇವಿ ಪ್ರಸಾದ್‌ ಅವರಿಗೆ ಕ್ಲರ್ಕ್ ಆಗಿ ನೇಮಕವಾದ ನೇಮಕಾತಿ ಆದೇಶ (ನಕಲಿ) ನೀಡಿದ್ದಳು.ತರಬೇತಿಯನ್ನೂ ನೀಡಿದ್ದರು!: 2021 ಡಿಸೆಂಬರ್ 15 ರಂದು ರಾಮ ಪ್ರಸಾದ್‌ ರಾವ್‌ ಎಂಬಾತ ಚಿಲಿಂಬಿಯ ಹಾಲ್‌ವೊಂದರಲ್ಲಿ ಸುಮಾರು 38 ಮಂದಿಗೆ ‘ತರಬೇತಿ’ ಆಯೋಜಿಸಿದ್ದ.

ರಾಮ್‌ ಪ್ರಸಾದ್‌, ಮೂಡಿಗೆರೆಯ ಡಾ. ಹೇಮಂತ್‌, ಬೆಂಗಳೂರಿನ ಸುರೇಂದ್ರ ರೆಡ್ಡಿ, ದರ್ಶನ್‌ ಎಂಬುವರು ತರಬೇತಿ ನೀಡಿದ್ದರು. ತರಬೇತಿಯಲ್ಲಿ ದೇವಿ ಪ್ರಸಾದ್‌ ಹಾಗೂ ಇತರ 37 ಮಂದಿ ಪಾಲ್ಗೊಂಡಿದ್ದರು. ತಮಗೆ ಉದ್ಯೋಗ ದೊರೆಯಿತು ಎಂಬ ಭರವಸೆ ಅವರಲ್ಲಿ ಮೂಡಿತ್ತು. ರಾಮ್‌ಪ್ರಸಾದ್‌ ತಾನು ‘ಕೆಎಂಎಫ್‌ ಡೈರೆಕ್ಟರ್‌ ಹರೀಶ್‌ ಕೆ.’ ಎಂಬುದಾಗಿ ಪರಿಚಯಿಸಿಕೊಂಡು ವಿಸಿಟಿಂಗ್‌ ಕಾರ್ಡ್‌ ನೀಡಿದ್ದ. ಈತ ರಾಮ ಪ್ರಸಾದ್‌ ರಾವ್‌ ಪಿ.

ಎಂದಲ್ಲದೆ ಹರೀಶ್‌, ಕೇಶವ ಮತ್ತು ಶಶಿಧರ ಎಂಬ ಹೆಸರಿನಲ್ಲಿಯೂ ಗುರುತಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ವಂಚನೆ ಜಾಲ ದೊಡ್ಡದಿದೆ: ಉದ್ಯೋಗ ನೇಮಕಾತಿಯಾದ ವಿಚಾರವನ್ನು ದೇವಿ ಪ್ರಸಾದ್‌ 2022ರ ಜನವರಿಯಲ್ಲಿ ಸ್ನೇಹಿತರಾದ ಅಶ್ವಿನಿ ಮತ್ತು ದೀಕ್ಷಿತ್‌ಗೆ ತಿಳಿಸಿದ್ದರು. ಅವರು ಕೂಡ ತಮ್ಮನ್ನು ಸೇರ್ಪಡೆಗೊಳಿಸುವಂತೆ ಹೇಳಿದ್ದರು. ಈ ವಿಚಾರವನ್ನು ದೇವಿ ಪ್ರಸಾದ್‌ ಅವರು ಚಂದ್ರಾವತಿಗೆ ತಿಳಿಸಿದಾಗ ಅಶ್ವಿನಿ (ಅಸಿಸ್ಟೆಂಟ್‌ ಎಚ್‌ಆರ್‌ ಉದ್ಯೋಗಕ್ಕೆ) 2.60 ಲಕ್ಷ ರೂ., ದೀಕ್ಷಿತ್‌ (ಕ್ಲರ್ಕ್ ಉದ್ಯೋಗಕ್ಕೆ) 90,000 ರೂ. ನೀಡುವಂತೆ ತಿಳಿಸಿದರು.

ಆ ಹಣವನ್ನು ಕೂಡ ಚಂದ್ರಾವತಿಗೆ ಪಾವತಿ ಮಾಡಲಾಗಿತ್ತು. 2022ರ ಮಾರ್ಚ್‌ನಲ್ಲಿ ದೇವಿ ಪ್ರಸಾದ್‌ ಅವರಲ್ಲಿ ಚಂದ್ರಾವತಿ ‘3 ಅಫೀಸರ್‌ ಉದ್ಯೋಗವಿದೆ’ ಎಂದು ತಿಳಿಸಿದರು. ಅದನ್ನು ದೇವಿಪ್ರಸಾದ್‌ ಅವರ ಪರಿಚಯಸ್ಥರಲ್ಲಿ ಹೇಳಿದ್ದು, ಭವ್ಯ ಕೆ., ಧನ್ಯಶ್ರೀ ಮತ್ತು ಯಕ್ಷಿತ್‌ ಉದ್ಯೋಗಕ್ಕೆ ಸೇರಲು ಮುಂದಾದರು. ಅವರು ಚಂದ್ರಾವತಿಯನ್ನು ಸಂಪರ್ಕಿಸಿದರು. ಮೂವರು ಕೂಡ ತಲಾ 3.50 ಲಕ್ಷ ರೂ. ಚಂದ್ರಾವತಿಗೆ ನೀಡಿದ್ದರು.

ಈ ಪೈಕಿ ಅಶ್ವಿನಿಗೆ ನೇಮಕಾತಿ ಆದೇಶ ನೀಡಲಾಗಿತ್ತು!ಹಣ ವಾಪಸ್‌ ನೀಡಲು ಒತ್ತಾಯ: 2022ರ ಮೇ ತಿಂಗಳವರೆಗೂ ನೇಮಕಾತಿ ಆಗದೇ ಇದ್ದಾಗ ದೇವಿ ಪ್ರಸಾದ್‌ ಮತ್ತು ಇತರರು ಚಂದ್ರಾವತಿಗೆ ಕರೆ ಮಾಡಿದ್ದರು. ಆಗ ಚಂದ್ರಾವತಿ ಅದನ್ನು ರಾಮಪ್ರಸಾದ್‌ಗೆ ತಿಳಿಸಿದ್ದಳು.

ಆಗ ರಾಮಪ್ರಸಾದ್‌ ‘ನಿಮ್ಮ ಹಣಕ್ಕೆ ನಾನು ಇದ್ದೇನೆ’ ಎಂದಿದ್ದ. 2022ರ ಮೇ 4 ರಂದು ಚಂದ್ರಾವತಿ 10.70 ಲಕ್ಷ ರೂ. ಮೊತ್ತದ ಚೆಕ್‌ನ್ನು ನೀಡಿದ್ದಳು. ಅದು 2022ರ ಮೇ 5ರಂದು ಕ್ಲಿಯರೆನ್ಸ್‌ ಆಗಿತ್ತು.ಮತ್ತೆ ಹಣ ಪಡೆದ ರಾಮಪ್ರಸಾದ್‌: ಚಂದ್ರಾವತಿ ಹಣ ವಾಪಸ್‌ ನೀಡಿದ ನಂತರ ದೇವಿಪ್ರಸಾದ್‌ ಅವರಿಗೆ ರಾಮ್‌ ಪ್ರಸಾದ್‌ ಕರೆ ಮಾಡಿ ‘ಚಂದ್ರಾವತಿ ನೀಡಿದ ಹಣದ ಪೈಕಿ 1 ಲಕ್ಷ ರೂ ನನ್ನ ಖಾತೆಗೆ ಹಾಕಬೇಕು.

ಕೂಡಲೇ ಉದ್ಯೋಗ ನೀಡುತ್ತೇನೆ’ ಎಂದಿದ್ದ. ಇದನ್ನು ನಂಬಿದ ದೇವಿ ಪ್ರಸಾದ್‌ 1 ಲಕ್ಷ ರೂ.ಗಳನ್ನು ರಾಮಪ್ರಸಾದ್‌ಗೆ ನೀಡಿದರು. ಅನಂತರ ರಾಮ ಪ್ರಸಾದ್‌ ಮತ್ತೆ 50,000 ರೂ.ಗಳಿಗೆ ಬೇಡಿಕೆ ಇಟ್ಟ. ಅದನ್ನು ಕೂಡ ದೇವಿ ಪ್ರಸಾದ್‌ ನೀಡಿದರು. ಆದರೂ ಉದ್ಯೋಗ ನೀಡಲಿಲ್ಲ. ದೇವಿಪ್ರಸಾದ್‌ ಅವರಿಂದ ರಾಮಪ್ರಸಾದ್‌ 1.50 ಲ. ರೂ. ಅಲ್ಲದೆ ಭವ್ಯ, ಧನ್ಯಶ್ರೀ, ಅಶ್ವಿನಿ, ದೀಕ್ಷಿತ್‌, ಯಕ್ಷಿತ್‌ ಅವರಿಂದ 14 ಲಕ್ಷ ರೂ. ಪಡೆದಿದ್ದ.

ರಾಮಪ್ರಸಾದ್‌ ಹೀಗೆ ಒಟ್ಟು ಸುಮಾರು 138ಕ್ಕೂ ಅಧಿಕ ಮಂದಿ ಉದ್ಯೋಗಾಕಾಂಕ್ಷಿಗಳಿಂದ ಚಂದ್ರಾವತಿ ಮತ್ತು ಪುತ್ತೂರಿನ ರಮೇಶ್‌ ಎಂಬುವರ ಮೂಲಕ ಸುಮಾರು 1.80 ಕೋ.ರೂ.ಗಳಿಗೂ ಅಧಿಕ ಹಣ ಪಡೆದು ವಂಚಿಸಿದ್ದಾನೆ.ವಂಚನೆ ಬಗ್ಗೆ ದೇವಿಪ್ರಸಾದ್‌ ನೀಡಿದ ದೂರಿನಂತೆ ಮಂಗಳೂರಿನ ಸೆನ್‌ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ರಾಮಪ್ರಸಾದ್‌ ಅಲ್ಲದೆ ಮೂಡಿಗೆರೆಯ ಹೇಮಂತ್‌, ಬೆಂಗಳೂರಿನ ಸುರೇಂದ್ರ ರೆಡ್ಡಿ, ದರ್ಶನ್‌ ಮತ್ತು ಇತರ ಹಲವರನ್ನು ಆರೋಪಿಗಳೆಂದು ಗುರುತಿಸಲಾಗಿದೆ.

ಈ ಪೈಕಿ ರಾಮಪ್ರಸಾದ್‌ನ್ನು ಬಂಧಿಸಲಾಗಿದ್ದು ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.ದ.ಕ. ಹಾಲು ಒಕ್ಕೂಟದಿಂದ ದೂರುದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದಲ್ಲಿ ನೇಮಕಾತಿ ಮಾಡಿ ಕೊಡುವ ಸಂಬಂಧ ರಾಮಪ್ರಸಾದ್‌ ಯಾನೆ ಹರೀಶ್‌ ಎಂಬಾತ ಸಾರ್ವಜನಿಕರಿಂದ ಹಣ ಪಡೆದು ವಂಚನೆ ಮಾಡಿರುವುದಾಗಿ ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಹರಡಿರುವ ವದಂತಿಯ ಬಗ್ಗೆ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

ದ. ಕ. ಸಹಕಾರಿ ಹಾಲು ಒಕ್ಕೂಟ ರೈತರ ಸಂಸ್ಥೆಯಾಗಿದ್ದು, ಪಾರದರ್ಶಕವಾಗಿ ಕೆಲಸ ನಿರ್ವಹಿಸುತ್ತಿದೆ. ಈ ಪ್ರಕರಣವು ಬಾಹ್ಯ ಪ್ರಕರಣಗಳಿಂದ ನಡೆದಿದ್ದು, ಇದರಿಂದಾಗಿ ಸಂಸ್ಥೆಯ ಹಿತಾಸಕ್ತಿಗೆ ಧಕ್ಕೆಯಾಗಿದೆ.

ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button