
ಬೆಂಗಳೂರು: ಶೆಡ್ ಕುಸಿದು ನಾಲ್ವರು ಕೂಲಿ ಕಾರ್ಮಿಕರು ಮೃತಪಟ್ಟಿದ್ದು, ಇನ್ನೂ ನಾಲ್ಕು ಮಂದಿ ಗಾಯಗೊಂಡಿರುವ ಘಟನೆ ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಸೌಖ್ಯ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಮೃತ ಕೂಲಿ ಕಾರ್ಮಿಕರನ್ನು ಉತ್ತರ ಭಾರತ ಮೂಲದವರು ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ವೈಟ್ ಪೀಲ್ಡ್ ನ ವೈದೇಹಿ ಅಸ್ವತ್ರೆಗೆ ದಾಖಲು ಮಾಡಲಾಗಿದೆ.
ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಸೌಖ್ಯ ಕೈಗಾರಿಕಾ ಪ್ರದೇಶದ ಸೌಪರ್ಣಿಕಾ ಅಪಾರ್ಟ್ಮೆಂಟ್ ಬಳಿ ಕೂಲಿ ಕಾರ್ಮಿಕರು ತಂಗಲು ನಿರ್ಮಿಸಿದ್ದ ತಾತ್ಕಾಲಿಕ ಶೆಡ್ ಕುಸಿದ ಪರಿಣಾಮ ನಾಲ್ವರು ಕೂಲಿ ಕಾರ್ಮಿಕರು ದುರ್ಮರಣ ಹೊಂದಿದ್ದಾರೆ. ಈ ಘಟನೆಯಲ್ಲಿ ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.
ಭಾರೀ ಮಳೆಯಿಂದಾಗಿ ಇಂದು ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಕೂಲಿ ಕಾರ್ಮಿಕರಿಗಾಗಿ ನಿರ್ಮಿಸಿದ್ದ ಶೆಡ್ ಮೇಲೆ ಪಕ್ಕದ ಹುಡಾನ್ ಕಂಪನಿಯ ವೇರ್ ಹೌಸ್ ನ ಗೊಡೆ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ.
ಈ ದುರ್ಘಟನೆಯಲ್ಲಿ ಮೃತಪಟ್ಟವರನ್ನು ಮನೋಜ್ ಕುಮಾರ್ ಸದಯ್ 35 ವರ್ಷ, ರಾಮ್ ಕುಮಾರ್ ಸದಯ್ 25, ನಿತೀಶ್ ಕುಮಾರ್ ಸದೆಯ 22, ಮಣಿತನ್ 28 ವರ್ಷ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸುನಿಲ್ ಮಂಡಲ್, ಶಂಭು ಮಂಡಲ, ದಿಲೀಪ್, ದುರ್ಗೇಶ್ ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಹೊಸಕೋಟೆ ಡಿವೈಎಸ್ಪಿ ಉಮಾಶಂಕರ್, ತಿರುಮಲಶೆಟ್ಟಿಹಳ್ಳಿ ಪೋಲಿಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.