ಅಂತಾರಾಷ್ಟ್ರೀಯರಾಜಕೀಯ

ಕುಸಿದ ಆರ್ಥಿಕತೆಗೆ ತಲೆದಂಡ: ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ರಾಜೀನಾಮೆ!

ಲಂಡನ್ (ಬ್ರಿಟನ್): ಬ್ರಿಟನ್ ಪ್ರಧಾನ ಮಂತ್ರಿ ಲಿಜ್ ಟ್ರಸ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ 6 ವಾರದಲ್ಲೇ ಲಿಜ್ ಟ್ರಸ್ ಅವರು ಅಧಿಕಾರ ತ್ಯಜಿಸಿದ್ದಾರೆ.
ಬ್ರಿಟನ್‌ನಲ್ಲಿ ಎದುರಾಗಿರುವ ಆರ್ಥಿಕ ಸಂಕಷ್ಟ ಹಾಗೂ ರಾಜಕೀಯ ಒತ್ತಡಗಳ ಹಿನ್ನೆಲೆಯಲ್ಲಿ ಬ್ರಿಟನ್‌ನ ಕನ್‌ಸರ್ವೇಟಿವ್ ಪಕ್ಷದಿಂದ ಪ್ರಧಾನಿ ಹುದ್ದೆಗೆ ಏರಿದ್ದ ಲಿಜ್ ಟ್ರಸ್ ಅವರು ರಾಜೀನಾಮೆ ನೀಡಬೇಕಾಗಿ ಬಂದಿದೆ.

ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಲಿಜ್ ಟ್ರಸ್ ದೇಶವನ್ನು ಆರ್ಥಿಕ ಸಂಕಷ್ಟದಿಂದ ಹೊರ ತರಲು ಹಲವು ಆರ್ಥಿಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು. ಆದರೆ, ಈ ಸುಧಾರಣಾ ಕ್ರಮಗಳು ತಿರುಗು ಬಾಣವಾಗಿ ದೇಶದ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಕಾರ್ಪೊರೇಟ್ ವಲಯ ಹಾಗೂ ಷೇರು ಮಾರುಕಟ್ಟೆ ಮೇಲೆ ಗಂಭೀರ ಪರಿಣಾಮ ಬೀರಿದ್ದ ಹಿನ್ನೆಲೆಯಲ್ಲಿ ರಾಜಕೀಯವಾಗಿಯೂ ಲಿಜ್ ಟ್ರಸ್ ಒತ್ತಡಕ್ಕೆ ಗುರಿಯಾಗಿದ್ದರು.

ಕೇವಲ 45 ದಿನಗಳ ಕಾಲ ಬ್ರಿಟನ್ ಪ್ರಧಾನಿ ಹುದ್ದೆಯಲ್ಲಿ ಇದ್ದ ಲಿಜ್ ಟ್ರಸ್ ಅವರು ತಮ್ಮ ಕಾರ್ಯಾವಧಿಯಲ್ಲಿ ಇಬ್ಬರು ಪ್ರಮುಖ ಸಚಿವರ ತಲೆದಂಡಕ್ಕೆ ಸಾಕ್ಷಿಯಾಗಿದ್ದರು. ಕನ್‌ಸರ್ವೇಟಿವ್ ಪಕ್ಷದ ಸಂಸದರ ವಿಶ್ವಾಸವನ್ನೇ ಲಿಜ್ ಟ್ರಸ್ ಅವರು ಕಳೆದುಕೊಂಡಿದ್ದ ಹಿನ್ನೆಲೆಯಲ್ಲಿ, ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕಾಯ್ತು.

ಇದೀಗ ಬ್ರಿಟನ್ ಸರ್ಕಾರಕ್ಕೆ ನೂತನ ನಾಯಕನ ಅಗತ್ಯತೆ ಎದುರಾಗಿದ್ದು, ಮುಂದಿನ ವಾರದೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಇನ್ನು ತಮ್ಮ ರಾಜೀನಾಮೆ ಕುರಿತಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಬ್ರಿಟನ್‌ನ ನಿರ್ಗಮಿತ ಪ್ರಧಾನ ಮಂತ್ರಿ ಲಿಜ್ ಟ್ರಸ್, ಬ್ರಿಟನ್ ಜನತೆಗೆ ತಾವು ನೀಡಿದ್ದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದ ಕಾರಣ ರಾಜೀನಾಮೆ ನೀಡುತ್ತಿದ್ದೇನೆ ಎಂದು ಎಂದರು. ಇದಲ್ಲದೆ ಕನ್‌ಸರ್ವೇಟಿವ್ ಪಕ್ಷದ ವಿಶ್ವಾಸ ಗಳಿಸಿ ಪ್ರಧಾನಿ ಹುದ್ದೆಗೆ ಏರಿದ್ದೆ, ಈಗ ಪಕ್ಷದ ವಿಶ್ವಾಸವನ್ನೂ ಕಳೆದುಕೊಂಡಿದ್ದೇನೆ ಎಂದು ಲಿಜ್ ಟ್ರಸ್ ತಮ್ಮ ನಿರ್ಗಮಿತ ಭಾಷಣದಲ್ಲಿ ಹೇಳಿದ್ದಾರೆ.

ಈ ಕುರಿತಾಗಿ ಬ್ರಿಟನ್ ರಾಜ ಚಾರ್ಲ್ಸ್ ಅವರಿಗೆ ತಮ್ಮ ರಾಜೀನಾಮೆ ಕುರಿತಾಗಿ ಲಿಜ್ ಟ್ರಸ್ ಅವರು ಮಾಹಿತಿ ರವಾನಿಸಿದ್ದಾರೆ. ಕಳೆದ ಶುಕ್ರವಾರದಿಂದ ಈವರೆಗೆ ಲಿಜ್ ಟ್ರಸ್‌ ಅವರು ತಮ್ಮ ಸಂಪುಟದ ನಾಲ್ವರು ಹಿರಿಯ ಸಚಿವರ ಪೈಕಿ ಇಬ್ಬರನ್ನು ಕಳೆದುಕೊಂಡಿದ್ದಾರೆ. ದೇಶದಲ್ಲಿ ಎದುರಾಗಿರುವ ಆರ್ಥಿಕ ಡೋಲಾಯಮಾನ ಸ್ಥಿತಿ ಎದುರಿಸುವಲ್ಲಿ ವಿಫಲರಾದ ಆರೋಪದ ಮೇಲೆ ಬ್ರಿಟನ್‌ನ ಹಣಕಾಸು ಸಚಿವರ ತಲೆದಂಡವೂ ಆಗಿದೆ. ಇನ್ನು ಲಿಜ್ ಟ್ರಸ್‌ ಅವರು ರೂಪಿಸಿದ್ದ ಆರ್ಥಿಕ ಸುಧಾರಣಾ ನೀತಿಗಳು ದೇಶದ ಜನತೆಯ ಪಾಲಿಗೆ ಹಾಸ್ಯಾಸ್ಪದ ಸಂಗತಿಯಾಗಿ ಪರಿಣಮಿಸಿವೆ ಎಂದು ಬ್ರಿಟನ್‌ನ ವಿರೋಧ ಪಕ್ಷದ ನಾಯಕರು ಆರೋಪಿಸಿದ್ದರು.

ಅದರಲ್ಲೂ ಕಾರ್ಪೊರೇಟ್ ವಲಯದ ತೆರಿಗೆ ಕಡಿತ ಸೇರಿದತೆ ಹಲವು ನೀತಿಗಳ ವಿರುದ್ಧ ಅಲ್ಲಿನ ಜನತೆ ಸಿಟ್ಟಿಗೆದ್ದಿದ್ದರು. ಈ ಸ್ಥಿತಿಗತಿಯನ್ನು ಇದೇ ರೀತಿ ಮುಂದುವರೆಯಲು ಬಿಡಲು ಸಾಧ್ಯವೇ ಇಲ್ಲ ಎಂದು ಕನ್‌ಸರ್ವೇಟಿವ್ ಪಕ್ಷದ ನಾಯಕರು ಬಹಿರಂಗವಾಗಿಯೇ ಮಾಧ್ಯಮಗಳ ಎದುರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದರು. ಬ್ರಿಟನ್ ಸಂಸತ್‌ನಲ್ಲೂ ಇದೇ ವಿಚಾರವಾಗಿ ಕೋಲಾಹಲ ಸೃಷ್ಟಿಯಾಗಿತ್ತು.

Related Articles

Leave a Reply

Your email address will not be published. Required fields are marked *

Back to top button