ಕುಮಾರ ಕೃಪ ಅತಿಥಿ ಗೃಹದ ಸಹಾಯಕ ಪ್ರಧಾನ ವ್ಯವಸ್ಥಾಪಕ ಎತ್ತಂಗಡಿ

ಕುಮಾರ ಕೃಪ ಅತಿಥಿ ಗೃಹದ ಸಹಾಯಕ ಪ್ರಧಾನ ವ್ಯವಸ್ಥಾಪಕ ದೇವರಾಜ್ ಎಚ್.ಎಸ್.ಅವರನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದೆ. ರೌಡಿ ಶೀಟರ್ ಸ್ಯಾಂಟ್ರೋ ರವಿಗೆ ಕುಮಾರ ಕೃಪ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಲು ಅವಕಾಶ ಕಲ್ಪಿಸಿಕೊಟ್ಟಿದ್ದರು ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿದ್ದ ದೇವರಾಜ್ ಎಚ್.ಎಸ್. ಅವರನ್ನು ವರ್ಗಾವಣೆ ಮಾಡಲಾಗಿದೆ.
ಮುಂದಿನ ಆದೇಶದವರೆಗೂ ದೇವರಾಜ್ ಅವರನ್ನು ಕೇಂದ್ರ ಕಚೇರಿಯಲ್ಲಿ ವರದಿ ಮಾಡಿಕೊಳ್ಳಬೇಕೆಂದು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸೂಚಿಸಿದ್ದಾರೆ.
ಮೂರು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪತ್ರಿಕಾಗೋಷ್ಠಿ ನಡೆಸಿ ಸ್ಯಾಂಟ್ರೋ ರವಿ ಕುಮಾರ ಕೃಪ ಅತಿಥಿ ಗೃಹದಲ್ಲಿ ಕೆಲವು ಸಚಿವರು ಮತ್ತು ಶಾಸಕರು ಭೇಟಿಯಾಗಿದ್ದರ ಚಿತ್ರಗಳನ್ನು ಬಿಡುಗಡೆ ಮಾಡಿದ್ದರು.ಇಲ್ಲಿ ಸ್ಯಾಂಟ್ರೋ ರವಿಗೆ ರಾಜ್ಯಾತಿಥ್ಯ ನೀಡಲಾಗುತ್ತಿದೆ. ಕೆಲವು ಪೊಲೀಸ್ ಅಧಿಕಾರಿಗಳು ಈತನಿಗೆ ಸರ್ ಎಂದು ಕರೆಯಬೇಕು.
ಐಎಎಸ್, ಐಪಿಎಸ್ ಸೇರಿದಂತೆ ಮತ್ತಿತರ ಅಧಿಕಾರಿಗಳ ವರ್ಗಾವಣೆಯಲ್ಲೂ ಈತ ಶಾಮೀಲಾಗಿದ್ದ ಎಂದು ಆರೋಪಿಸಿದ್ದರು.ಇದೀಗ ಸ್ಯಾಂಟ್ರೋ ರವಿ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರೀ ವಿವಾದವನ್ನು ಸೃಷ್ಟಿಸಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.