
ನಾನು ಅಧಿಕೃತವಾಗಿ ನಾಳೆ 11.15ಕ್ಕೆ ಸಿಹಿಸುದ್ದಿ ಕೊಡ್ತೀನಿ” ಎಂದು ನಟಿ ರಮ್ಯಾ ( Ramya ) ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದೇ ತಡ, ಏನಿರಬಹುದು ಎಂದು ಅವರ ಅಭಿಮಾನಿಗಳೆಲ್ಲ ಕಾಯುತ್ತಿದ್ದಾರೆ. ಸಿಹಿಸುದ್ದಿ ಕೊಡ್ತೀನಿ ಎಂದು ರಮ್ಯಾ ತಲೆಗೆ ಹುಳ ಬಿಟ್ಟಿದ್ದಾರೆ.
ನಟಿ ರಮ್ಯಾ ಅವರು ಗಣೇಶ ಚತುರ್ಥಿಯಂದು ಸಿಹಿಸುದ್ದಿ ನೀಡಲಿದ್ದಾರಂತೆ. ಇತ್ತೀಚೆಗೆ ಚಿತ್ರರಂಗದವರ ಜೊತೆ ಹೆಚ್ಚು ಸಮಯ ಕಳೆಯುತ್ತ, ಹೊಸ ಸಿನಿಮಾಗಳು, ಕಲಾವಿದರನ್ನು ಹುರಿದುಂಬಿಸುವ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕುತ್ತಿರುವ ರಮ್ಯಾ ಸಿಹಿ ಸುದ್ದಿ ನೀಡಲಿದ್ದೇನೆ ಎಂದಿದ್ದಾರೆ.
ರಮ್ಯಾ ಸಿಕ್ಕಾಗಲೆಲ್ಲ ಅವರ ಅಭಿಮಾನಿಗಳು ಯಾವಾಗ ಮದುವೆ? ಯಾವಾಗ ಸಿನಿಮಾ ಮಾಡ್ತೀರಾ ಎಂದು ಕೇಳುತ್ತಿರುತ್ತಾರೆ. ಸಿಹಿಸುದ್ದಿ ಮದುವೆನಾ? ಸಿನಿಮಾನಾ ಎಂಬ ಪ್ರಶ್ನೆ ಶುರುವಾಗಿದೆ. ವಾಸುಕಿ ವೈಭವ್, ಸಂಯುಕ್ತಾ ಹೊರನಾಡು ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಈ ಪೋಸ್ಟ್ ನೋಡಿ ಖುಷಿ ವ್ಯಕ್ತಪಡಿಸಿದ್ದಾರೆ.
ರಾಜ್ ಬಿ ಶೆಟ್ಟಿ ಸೇರಿದಂತೆ ಕೆಲವರ ಜೊತೆ ರಮ್ಯಾ ಕಾಣಿಸಿಕೊಂಡಿದ್ದರು. ಹಾಗಾಗಿ ರಾಜ್ ಬಿ ಶೆಟ್ಟಿ ಜೊತೆ ರಮ್ಯಾ ಸಿನಿಮಾ ಮಾಡುತ್ತಾರೆ ಎನ್ನಲಾಗಿತ್ತು. ಆಗ ವಿಜಯ ಕರ್ನಾಟಕ ವೆಬ್ ಜೊತೆ ಮಾತನಾಡಿದ್ದ ರಾಜ್, “ಈ ಸುದ್ದಿ ಎಲ್ಲಿಂದ ಬಂತೋ ನನಗಂತೂ ಗೊತ್ತಿಲ್ಲ. ನಾನಿನ್ನೂ ಕಥೆಯನ್ನೇ ಬರೆದಿಲ್ಲ. ಈ ಸುದ್ದಿ ಶುದ್ಧ ಸುಳ್ಳು” ಎಂದು ಹೇಳಿದ್ದರು.
ಈ ಹಿಂದೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿಕೊಂಡಿದ್ದ ರಮ್ಯಾ, “ಸಿನಿಮಾ ಮಾಡಲು ಉತ್ಸುಕತೆ ಇದೆ, ಸಿನಿಮಾ ಕಥೆ ಕೇಳುತ್ತಿದ್ದೇನೆ. ಆದಷ್ಟು ಬೇಗ ತೆರೆ ಮೇಲೆ ಕಾಣಿಸಿಕೊಳ್ಳುವೆ. ಈ ಬಗ್ಗೆ ನಾನು ಮಾಹಿತಿ ಕೊಡುವವರೆಗೂ ನೀವು ನಿಮ್ಮ ಕುತೂಹಲವನ್ನು ಹಾಗೆ ಇಟ್ಟುಕೊಳ್ಳಿ” ಎಂದು ಹೇಳಿದ್ದರು.
ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಷ್ಟು ಕಾಲ ನಂಬರ್ 1 ನಟಿಯಾಗಿ ಮೆರೆದ ರಮ್ಯಾ ರಾಜಕೀಯದ ಕಡೆ ಗಮನ ಕೊಟ್ಟು, ಸಿನಿಮಾ ರಂಗದಿಂದ ದೂರವಾಗುತ್ತ ಬಂದರು. ರಾಜಕೀಯಕ್ಕೂ ಗುಡ್‌ಬೈ ಹೇಳಿದ ಅವರು ವರ್ಷಗಳ ಕಾಲ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎಂದು ಅನೇಕರಿಗೆ ಸುಳಿವೇ ಇರಲಿಲ್ಲ. ಸೋಶಿಯಲ್ ಮೀಡಿಯಾದಿಂದಲೂ ಅವರು ದೂರವಿದ್ದು ಅಧ್ಯಾತ್ಮಕ್ಕೆ ಸಂಬಂಧಪಟ್ಟ ಕ್ಲಾಸ್ ತೆಗೆದುಕೊಳ್ಳುತ್ತಿದ್ದೇನೆ ಎಂದಿದ್ದರು.