ಆರೋಗ್ಯರಾಜ್ಯ

ಕಿಶೋರಿಯರು ಕಾರ್ಯಕ್ರಮಕ್ಕಿಲ್ಲ ಅನುದಾನ; ರಕ್ತಹೀನತೆಯುಳ್ಳ ಹೆಣ್ಣು ಮಕ್ಕಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ!

ಶಿವಮೊಗ್ಗ: ಶಾಲೆ ಬಿಟ್ಟ ರಕ್ತಹೀನತೆಯುಳ್ಳ ಹೆಣ್ಣು ಮಕ್ಕಳಿಗೆ ಕಬ್ಬಿಣಾಂಶದ ಮಾತ್ರೆ ಪೂರೈಸುವ ಉದ್ದೇಶದಡಿ ಅತೀ ಮಹತ್ವಾಕಾಂಕ್ಷೆಯಲ್ಲಿ ಜಾರಿಗೊಳಿಸಿದ ‘ಕಿಶೋರಿಯರು’ ಕಾರ‍್ಯಕ್ರಮಕ್ಕೆ ಪ್ರಸಕ್ತ ಸಾಲಿನಲ್ಲಿ ಸರಕಾರ ಅನುದಾನ ಬಿಡುಗಡೆ ಮಾಡದೆ ಆಡಳಿತದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್‌)ಯಲ್ಲಿ ಸಮೀಕ್ಷೆ ನಡೆಸಿ ರಕ್ತಹೀನತೆಯುಳ್ಳ ಹೆಣ್ಣು ಮಕ್ಕಳನ್ನು ಗುರುತಿಸಲಾಗಿದೆ. ಅಂಗನವಾಡಿ, ಆಶಾ ಕಾರ‍್ಯಕರ್ತೆಯರ ಸೇವಾ ವ್ಯಾಪ್ತಿಯಲ್ಲಿ ಕಬ್ಬಿಣಾಂಶದ ಮಾತ್ರೆಯನ್ನು ರಕ್ತಹೀನತೆಯುಳ್ಳ ಹೆಣ್ಣು ಮಕ್ಕಳಿಗೆ ವಿತರಿಸುವ ಜವಾಬ್ದಾರಿ ಹೊರಿಸಲಾಗಿದೆ.

ಮಹಿಳಾ ಮತ್ತು ಶಿಶು ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ಹೊಣೆಗಾರಿಕೆಯಲ್ಲಿ ಕಾರ‍್ಯಕ್ರಮ ಅನುಷ್ಠಾನಕ್ಕೆ ಸರಕಾರ ಅವಕಾಶ ಕಲ್ಪಿಸಿದೆ. 14 ವರ್ಷದೊಳಗಿನ ಶಾಲೆ ಬಿಟ್ಟ ರಕ್ತಹೀನತೆಯ ಹೆಣ್ಣು ಮಕ್ಕಳಿಗೆ 3 ವರ್ಷದಿಂದ ಕಬ್ಬಿಣಾಂಶದ ಮಾತ್ರೆ ದೊರೆಯುತ್ತಿಲ್ಲ ಎಂಬ ದೂರಿದೆ.

ಏತ್ಮನಧ್ಯೆ, ಅಂಗನವಾಡಿ ಸೇರ್ಪಡೆಗೊಂಡ ಮಕ್ಕಳ ಆರೋಗ್ಯ ತಪಾಸಣೆ ಕಾರ‍್ಯವು ಪರಿಣಾಮಕಾರಿಯಾಗಿ ನಡೆಯದಂತಾಗಿದೆ. ಆರೋಗ್ಯ ಇಲಾಖೆ ಪೂರೈಸುವ ರಕ್ತಹೀನತೆ ಮಾತ್ರೆಗಳು ಮಕ್ಕಳಿಗೆ ಸರಿಯಾಗಿ ತಲುಪುದಂತಹ ಸನ್ನಿವೇಶ ಉದ್ಭವಿಸಿದ್ದು, ಸರಕಾರದ ಕಾರ‍್ಯಕ್ರಮ ಮುಗ್ಗರಿಸಿದಂತಿದೆ.

ವಾರದ ಮಾತ್ರೆಇತ್ತೀಚಿನ ವರ್ಷಗಳಲ್ಲಿ 10ರಿಂದ 12 ವರ್ಷದೊಳಗಿನ ಹೆಣ್ಣು ಮಕ್ಕಳಲ್ಲಿ ಋುತುಸ್ರಾವ ಕಂಡು ಬರುತ್ತಿದೆ. ಬಹುತೇಕ ಹೆಣ್ಣು ಮಕ್ಕಳು ಋುತುಸ್ರಾವ ಅವಧಿಯಲ್ಲಿ ವಿಪರೀತ ಹೊಟ್ಟೆ ನೋವು, ಅಧಿಕ ರಕ್ತಸ್ರಾವದಿಂದ ಬಳಲುತ್ತಿದ್ದಾರೆ.

ಇಂತಹವರಲ್ಲಿ ರಕ್ತ ಹೀನತೆ ಉಂಟಾಗದಂತೆ ಎಚ್ಚರವಹಿಸುವ ಉದ್ದೇಶದಿಂದ ಕಬ್ಬಿಣಾಂಶದ ಮಾತ್ರೆ ಪೂರೈಸುವ ಸರಕಾರದ ಕಾರ‍್ಯಕ್ರಮ ಎಡವಿದಂತಿದೆ. ತಾಲೂಕಿನಲ್ಲಿ ಶಾಲೆ ಬಿಟ್ಟ ರಕ್ತಹೀನತೆಯುಳ್ಳ ಹೆಣ್ಣು ಮಕ್ಕಳ ಸಂಖ್ಯೆ ಕೇವಲ 3 ಎಂದು ಸಮೀಕ್ಷೆಯಲ್ಲಿ ಗುರುತಿಸಲಾಗಿದೆ.

ಸಮೀಕ್ಷೆಯಲ್ಲಿ ಬಹುತೇಕ ಹೆಣ್ಣು ಮಕ್ಕಳು ಹೊರಗುಳಿದಂತಿದ್ದು ಸರಕಾರ ವಿಶೇಷ ಆದ್ಯತೆ ಮೂಲಕ ನೈಜ ಸಮೀಕ್ಷೆ ಆರಂಭಿಸಿದರೆ ಸಾಕಷ್ಟು ಹೆಣ್ಣುಮಕ್ಕಳು ರಕ್ತಹೀನತೆ ಪಟ್ಟಿಗೆ ಸೇರ್ಪಡೆ ಆಗುವ ಸಾಧ್ಯತೆ ಇದೆ. ಕಿಶೋರಿಯರ ಆರೋಗ್ಯ ನಿರ್ವಹಣೆ ಜವಾಬ್ದಾರಿ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಗೆ ಸೇರಿದ್ದು, ಅವರಿಗೆ ಕಬ್ಬಿಣಾಂಶದ ಮಾತ್ರೆಯನ್ನು ವಾರಕ್ಕೊಮ್ಮೆ ನೀಡಬೇಕಿದೆ.

ಸಮೀಕ್ಷೆ ವಿಫಲರಕ್ತಹೀನತೆಯಿಂದ ಬಳಲುವ ಶಾಲೆ ಬಿಟ್ಟ ಹೆಣ್ಣು ಮಕ್ಕಳಿಗೆ ಅಂಗನವಾಡಿ, ಮಿನಿಅಂಗನವಾಡಿ ಕೇಂದ್ರಗಳ ಮೂಲಕ ಕಬ್ಬಿಣಾಂಶ ಸತ್ವ ಹೊಂದಿರುವ ಫೆರೋಸ್‌ ಸಲ್ಫೇಟ್‌ ಪೊಲೀಕ್‌ ಆ್ಯಸಿಡ್‌ ಮಾತ್ರೆ ಪೂರೈಸುವ ಉದ್ದೇಶದಿಂದ ಕಿಶೋರಿಯರು ಕಾರ‍್ಯಕ್ರಮವನ್ನು ಸರಕಾರ ಜಾರಿಗೊಳಿಸಿದೆ.

ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್‌)ಯಲ್ಲಿ ಸಮೀಕ್ಷೆ ನಡೆಸಿ ಕಿಶೋರಿಯರು ಕಾರ‍್ಯಕ್ರಮದಡಿ ರಕ್ತಹೀನತೆಯುಳ್ಳ ಹೆಣ್ಣು ಮಕ್ಕಳನ್ನು ಗುರುತಿಸಿ ಸೇರ್ಪಡೆಗೊಳಿಸಲಾಗಿದೆ.

ತಾಲೂಕಿನ 251 ಅಂಗನವಾಡಿ, 49 ಮಿನಿ ಅಂಗನವಾಡಿ ಕೇಂದ್ರಗಳ ವ್ಯಾಪ್ತಿ ಕೇವಲ 3 ಕಿಶೋರಿಯರನ್ನು ಮಾತ್ರ ಗುರುತಿಸಲಾಗಿದೆ. ರಕ್ತಹೀನತೆಯಿಂದ ಬಳಲುತ್ತಿರುವ ಮಕ್ಕಳನ್ನು ಪರಿಣಾಮಕಾರಿಯಾಗಿ ಗುರುತಿಸುವಲ್ಲಿ ಸಮೀಕ್ಷೆ ವಿಫಲವಾದಂತಿದೆ. ಕಬ್ಣಿಣಾಂಶ ಮಾತ್ರೆಯನ್ನು ಕಿಶೋರಿಯರಿಗಲ್ಲದೆ ಗರ್ಭಿಣಿ, ಬಾಣಂತಿಯರಿಗೂ ನೀಡಬಹುದಾಗಿದೆ.

ಪ್ರಸಕ್ತ ತಿಂಗಳಲ್ಲಿ 371 ಗರ್ಭಿಣಿಯರು, 273 ಬಾಣಂತಿಯರನ್ನು ಗುರುತಿಸಲಾಗಿದೆ. ಕಿಶೋರಿಯರು ಕಾರ‍್ಯಕ್ರಮ ನಿರ್ಲಕ್ಷ್ಯಕ್ಕೀಡಾದ ಪರಿಣಾಮ ರಕ್ತಹೀನತೆ ತಡೆಯುವ ಕಬ್ಬಿಣಾಂಶದ ಮಾತ್ರೆ ಹಂಚಿಕೆ ಸ್ಥಗಿತವಾಗಿದೆ.

ರಕ್ತಹೀನತೆಯುಳ್ಳ ಹೆಣ್ಣು ಮಕ್ಕಳನ್ನು ಗುರುತಿಸಿ ಕಬ್ಬಿಣಾಂಶದ ಮಾತ್ರೆ ನೀಡಲಾಗುವ ಕಿಶೋರಿಯರು ಕಾರ‍್ಯಕ್ರಮಕ್ಕೆ ಪ್ರಸಕ್ತ ಸಾಲಿನಲ್ಲಿ ಅನುದಾನ ಮಂಜೂರಾಗಿಲ್ಲ. ಶಾಲೆ ಬಿಟ್ಟ 14 ವರ್ಷದೊಳಗಿನ ರಕ್ತಹೀನತೆಯ 3 ಹೆಣ್ಣು ಮಕ್ಕಳನ್ನು ಸಮೀಕ್ಷೆಯಲ್ಲಿ ಗುರುತಿಸಲಾಗಿದೆ.

ಕಿಶೋರಿಯರು ಕಾರ‍್ಯಕ್ರಮವನ್ನು ಬಹಳ ಆಸಕ್ತಿಯಿಂದ ಸರಕಾರ ಹಲವು ವರ್ಷಗಳ ಹಿಂದೆ ಜಾರಿಗೊಳಿಸಿದೆ. ಈಗಿನ ಸರಕಾರ ಕಾರ‍್ಯಕ್ರಮಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ. ರಕ್ತಹೀನತೆಯುಳ್ಳ ಮಕ್ಕಳ ಸಂಖ್ಯೆಯನ್ನು ನಿಖರವಾಗಿ ಗುರುತಿಸುವ ಪ್ರಯತ್ನ ಆಡಳಿತದಲ್ಲಿ ಆಗಿಲ್ಲ. ಕಬ್ಬಿಣಾಂಶದ ಮಾತ್ರೆ ರಕ್ತಹೀನತೆ ಹೆಣ್ಣು ಮಕ್ಕಳಿಗೆ ಸಿಗುತ್ತಿಲ್ಲ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button