
ಪೋಷಕರಿಗೆ ತನ್ನ ಮೇಲೆ ಪ್ರೀತಿ ಇದೆಯೋ? ಇಲ್ಲವೋ? ಎಂದು ತಿಳಿದುಕೊಳ್ಳಲು ಪಿಯುಸಿ ಉತ್ತೀರ್ಣಗೊಂಡಿರುವ ವಿದ್ಯಾರ್ಥಿಯೊಬ್ಬ ‘ಕಿಡ್ನ್ಯಾಪ್’ ಕಥೆ ಕಟ್ಟಿ ಪೋಷಕರು, ಪೊಲೀಸರಿಗೆ ಟೆನ್ಶನ್ ತಂದಿಟ್ಟಿದ್ದ ಪ್ರಕರಣ ಬೆಳ್ಳಂದೂರಿನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಜಾರ್ಖಂಡ್ ಮೂಲದ 19 ವರ್ಷದ ವಿದ್ಯಾರ್ಥಿ ಸುಳ್ಳು ಕಿಡ್ನ್ಯಾಪ್ ಕೇಸ್ ಪಾತ್ರಧಾರಿ ಹಾಗೂ ರೂವಾರಿ. ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಉನ್ನತ ಸ್ಥಾನದಲ್ಲಿ ಉತ್ತೀರ್ಣಗೊಂಡಿರುವ ವಿದ್ಯಾರ್ಥಿ, ಎಂಜಿನಿಯರಿಂಗ್‌ಗೆ ಸೇರುವ ತಯಾರಿಯಲ್ಲಿದ್ದ
ಕಸವನಹಳ್ಳಿಯ ಸಂಬಂಧಿಕರ ಮನೆಯಲ್ಲಿದ್ದ ವಿದ್ಯಾರ್ಥಿ ಅಕ್ಟೋಬರ್ 11 ರಂದು ಮೆಜೆಸ್ಟಿಕ್ ಬಳಿಯಿರುವ ಮತ್ತೊಬ್ಬರು ಸಂಬಂಧಿಕರ ಮನೆಗೆ ಹೋಗುವುದಾಗಿ ತಿಳಿಸಿ ತೆರಳಿದ್ದ.
ಅದೇ ದಿನ ರಾತ್ರಿ 9 ಗಂಟೆ ಸುಮಾರಿಗೆ ಜಾರ್ಖಂಡ್‌ನಲ್ಲಿರುವ ವಿದ್ಯಾರ್ಥಿ ತಾಯಿಯ ಮೊಬೈಲ್‌ಗೆ ವಿದ್ಯಾರ್ಥಿ ಮೊಬೈಲ್‌ನಿಂದ ಸಂದೇಶ ಹೋಗಿದೆ. ‘ನಿಮ್ಮ ಮಗ ನಮ್ಮ ಜತೆಗಿದ್ದಾನೆ.
ನೀವು ಹತ್ತು ಲಕ್ಷ ರೂ. ಕೊಡದಿದ್ದರೆ ಜೀವಂತ ಬಿಡುವುದಿಲ್ಲ. ಪೊಲೀಸರಿಗೆ ದೂರು ನೀಡಿದರೂ ನಿಮ್ಮ ಮಗನನ್ನು ಪ್ರಾಣ ಸಹಿತ ಕಳುಹಿಸುವುದಿಲ್ಲ’ ಎಂದು ಸಂದೇಶ ನೀಡಲಾಗಿತ್ತು.
ಮಗನ ನಂಬರ್‌ಗೆ ಕರೆ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಕಂಗಾಲಾದ ವಿದ್ಯಾರ್ಥಿ ಪಾಲಕರು ಕಿಡ್ನ್ಯಾಪ್ ಕುರಿತು ಬೆಳ್ಳಂದೂರಿನಲ್ಲಿ ದೂರು ದಾಖಲಿಸಲು ಸೂಚನೆ ನೀಡಿದ್ದರು.
ದೂರಿನ ಬಳಿಕ ಪೊಲೀಸರು ಮೆಸೇಜ್ ಕಳುಹಿಸಿದ್ದ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ವಿದ್ಯಾರ್ಥಿ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದರು. ಆದರೆ, ವಿದ್ಯಾರ್ಥಿ ಮೊಬೈಲ್ ಕೆಲವೊಮ್ಮೆ ಸ್ವಿಚ್ ಆಫ್ / ಆನ್ ಆಗುವುದು ನಿರಂತರವಾಗಿತ್ತು.
ಕಡೆಗೆ ಇಡೀ ದಿನ ಕಾರ್ಯಾಚರಣೆ ನಡೆಸಿ ಮಾಗಡಿ ರಸ್ತೆಯ ಲಾಡ್ಜ್‌ವೊಂದರಲ್ಲಿ ತಂಗಿದ್ದ ವಿದ್ಯಾರ್ಥಿಯನ್ನು ರಕ್ಷಿಸಲಾಯಿತು ಎಂದು ಪೊಲೀಸರು ತಿಳಿಸಿದರು.
ವಿದ್ಯಾರ್ಥಿ ಕುಟುಂಬ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದೆ. ವಿದ್ಯಾರ್ಥಿ ಅಕೌಂಟ್‌ನಲ್ಲೂ ಹಣವಿತ್ತು. ಹಲವು ಆಯಾಮಗಳಲ್ಲಿ ಆತನನ್ನು ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಾಗಿದೆ. ವಿದ್ಯಾರ್ಥಿಗೆ ಎಚ್ಚರಿಕೆ ಕೊಟ್ಟು ಸಂಬಂಧಿಕರ ಜತೆ ಕಳುಹಿಸಿಕೊಡಲಾಗಿದೆ ಎಂದು ಅಧಿಕಾರಿ ಹೇಳಿದರು.