ಕಾಶ್ಮೀರಿ ಪಂಡಿತ್ ಕುಟುಂಬದ ಮಹಿಳಾ ಶಿಕ್ಷಕಿಯನ್ನು ಗುಂಡಿಕ್ಕಿ ಕೊಂದ ಉಗ್ರರು

ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತ್ ಕುಟುಂಬದ ಮಹಿಳಾ ಶಿಕ್ಷಕಿಯೊಬ್ಬರ ಹತ್ಯೆಯಾಗಿದೆ.
ಕುಲ್ಗಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಾಲ್‍ಪೋರ ಪ್ರದೇಶದ ಪ್ರೌಢಶಾಲೆ ಬಳಿ ಉಗ್ರಗಾಮಿಗಳು ಗುಂಡಿನ ದಾಳಿ ನಡೆಸಿದ್ದು, ಶಿಕ್ಷಕಿ ರಜಿನಿಬಾಲಾ (36)ಗಂಭೀರವಾಗಿ ಗಾಯಗೊಂಡಿದ್ದರು.
ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಆ ವೇಳೆಗೆ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.ರಜಿನಿಬಾಲಾ ಜಮ್ಮು ವಿಭಾಗದ ಸಾಂಬಾ ಪ್ರದೇಶದಲ್ಲಿ ವಾಸಿಸುತ್ತಿದ್ದರು.
ಹಿಂದು ಕುಟುಂಬಕ್ಕೆ ಸೇರಿದ ಇವರು ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಗುಂಡಿನ ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಆದರೆ, ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಪ್ರದೇಶವನ್ನು ಸುತ್ತುವರೆದಿದ್ದಾರೆ. ಉಗ್ರವಾದಿಗಳನ್ನು ಗುರುತಿಸಲಾಗುವುದು ಮತ್ತು ತಟಸ್ಥಗೊಳಿಸುವುದಾಗಿ ಕಾಶ್ಮೀರಿ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಕಾಶ್ಮೀರದಲ್ಲಿ ಇದು ಏಳನೇ ಉಗ್ರರ ದಾಳಿಯಾಗಿದೆ. ಮೂವರು ಪೊಲೀಸರು, ನಾಲ್ವರು ನಾಗರಿಕರು ಹತ್ಯೆಯಾಗಿದ್ದಾರೆ.
ಮೇ 19ರಂದು ಬುಡ್ಗಾಮ್ ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ಸರ್ಕಾರಿ ನೌಕರರಾಗಿದ್ದ ಆರ್.
ರಾಹುಲ್‍ಭಟ್ ಎಂಬ ಕಾಶ್ಮೀರಿ ಪಂಡಿತ್ ಕುಟುಂಬದ ವ್ಯಕ್ತಿಯನ್ನು ಉಗ್ರರು ಕೊಂದು ಹಾಕಿದ್ದರು.
ಇತ್ತೀಚೆಗೆ ವಲಸೆ ಕಾರ್ಮಿಕರನ್ನು ಗುರಿಯಾಗಿರಿಸಿಕೊಂಡು ಉಗ್ರರು ಪದೇ ಪದೇ ದಾಳಿ ನಡೆಸುತ್ತಿರುವುದು ರಕ್ಷಣಾ ಪಡೆಗಳ ಸಹನೆ ಕೆಡಿಸುತ್ತಿದೆ.