ಅಂತಾರಾಷ್ಟ್ರೀಯ

ಕಾರು ಅಪಘಾತದಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್‌ ನಿಧನ

ಕ್ವೀನ್ಸ್ ಲಾಂಡ್ : ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ, ಸ್ಫೋಟಕ ಆಲ್‌ರೌಂಡರ್‌ ಆಂಡ್ರ್ಯೂ ಸೈಮಂಡ್ಸ್‌ ಅವರು ಅಪಘಾತದಲ್ಲಿ ಮೃತಪಟ್ಟಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಪತ್ನಿ ಲೌರಾ ಮತ್ತು ಇಬ್ಬರು ಮಕ್ಕಳು ಚೋಲೆ ಮತ್ತು ಬಿಲ್ಲಿಯರನ್ನು ಅಗಲಿದ್ದಾರೆ.

ಶನಿವಾರ ತಡರಾತ್ರಿ ಕ್ವೀನ್ಸ್‌ಲ್ಯಾಂಡ್ಸ್‌ನ ಟೌನ್‌ವಿಲ್ಲೆ ಎಂಬಲ್ಲಿ ನಡೆದ ಕಾರು ಅಪಘಾತದಲ್ಲಿ ಮಾಜಿ ಲೆಜೆಂಡರಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್‌ ಅವರು ಮೃತಪಟ್ಟಿದ್ದು, ಆಸ್ಟ್ರೇಲಿಯಾ ಮಾತ್ರವಲ್ಲದೇ ಇಡೀ ಕ್ರಿಕೆಟ್‌ ಜಗತ್ತಿಗೆ ಬರಸಿಡಿಲು ಬಡಿದಪ್ಪಿದಂತಾಗಿದೆ. ಇತ್ತೀಚೆಗಷ್ಟೇ ಸಾರ್ವಕಾಲಿಕ ಶ್ರೇಷ್ಠ ಲೆಗ್‌ ಸ್ಪಿನ್ನರ್, ಕ್ರಿಕೆಟ್ ದಂತಕತೆ ಶೇನ್ ವಾರ್ನ್ ಅವರು ಥಾಯ್ಲೆಂಡ್‌ನಲ್ಲಿ ಹೃದಯಾಘಾತದಿಂದ ಹಠಾತ್ ನಿಧನಗೊಂಡಿದ್ದರು. ಅವರು ಸಾವಿನ ನೋವನ್ನು ಮರೆಯುವ ಮುನ್ನವೇ ಇದೀಗ ಮತ್ತೊಂದು ಅರಗಿಸಿಕೊಳ್ಳಲಾಗದ ಸಿಡಿಲು ಕ್ರೀಡಾಭಿಮಾನಿಗಳಿಗೆ ಅಪ್ಪಳಿಸಿದೆ.

ದುರ್ಘಟನೆ ನಡೆದ ತಕ್ಷಣ ಸ್ಥಳಕ್ಕೆ ಪೊಲೀಸ್ ಮತ್ತು ಆರೋಗ್ಯ ಸಿಬ್ಬಂದಿ ಧಾವಿಸಿದರೂ ಕೂಡ ಸೈಮಂಡ್ಸ್‌ ಗಂಭೀರ ಗಾಯಗೊಂಡಿದ್ದ ಕಾರಣ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಪಘಾತ ನಡೆದ ವೇಳೆ ಸೈಮಂಡ್ಸ್ ಅವರು ಒಬ್ಬರೇ ಕಾರ್‌ನಲ್ಲಿ ಇದ್ದರು ಎನ್ನಲಾಗಿದೆ. ಆಂಡ್ರ್ಯೂ ಸೈಮಂಡ್ಸ್‌ ಅವರ ನಿಧನದ ಸುದ್ದಿ ಕೇಳುತ್ತಿದ್ದಂತೆ ಕ್ರಿಕೆಟ್ ಲೋಕ ಮತ್ತು ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ಶೋಕದ ಅಲೆ ಎದ್ದಿದ್ದು, ಸೈಮಂಡ್ಸ್‌ ಅವರು ಅಪಘಾತದಿಂದ ನಿಧನಗೊಂಡಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಕ್ರಿಕೆಟ್‌ ದಿಗ್ಗಜರು ಕೂಡ ಆಘಾತಕ್ಕೊಳಗಾಗಿದ್ದಾರೆ.

46 ವರ್ಷದ ಆಂಡ್ರ್ಯೂ ಸೈಮಂಡ್ಸ್‌ ಅವರು ಆಸ್ಟ್ರೇಲಿಯಾ ಕ್ರಿಕೆಟ್‌ ಲೋಕಕ್ಕೆ ಅಪಾರ ಸೇವೆಗೈದಿದ್ದಾರೆ. 26 ಟೆಸ್ಟ್‌ ಮತ್ತು 198 ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಆಸ್ಟ್ರೇಲಿಯಾ ಗೆದ್ದ ಎರಡು ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದು ತನ್ನ ಚಾಕಚಕ್ಯತೆ ಮರೆದಿದ್ದರು.ಸ್ಫೋಟಕ ಆಲ್‌ರೌಂಡರ್‌ ಆಂಡ್ರ್ಯೂ ಸೈಮಂಡ್ಸ್‌ ಅವರ ದುರ್ಮರಣಕ್ಕೆ ಕ್ರಿಕೆಟ್‌ ಲೋಕದ ದಿಗ್ಗಜರು ಸೇರಿದಂತೆ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button