ಕಾಡು ಪ್ರಾಣಿ ದಾಳಿ ಮೃತರ ಕುಟುಂಬಕ್ಕೆ ೧೫ ಲಕ್ಷ ಪರಿಹಾರ

ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ೧೫ ಲಕ್ಷ ಪರಿಹಾರವನ್ನು ತುರ್ತಾಗಿ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ವಿಧಾನಸಭೆಯಲ್ಲಿ ತಿಳಿಸಿದರು.ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ಕೂಡಲೇ ೫ ಲಕ್ಷ ಪರಿಹಾರ ನೀಡಿ ಮರಣೋತ್ತರ ಪರೀಕ್ಷೆ ಹಾಗೂ ಎಸ್‌ಎಸ್‌ಎಲ್ ವರದಿ ಬಂದ ತಕ್ಷಣವೇ ಉಳಿದ ೧೦ ಲಕ್ಷ ಪರಿಹಾರವನ್ನು ನೀಡಲಾಗುವುದು, ಕಾಡು ಪ್ರಾಣಿಗಳು ಹಾಗೂ ಮನವ ನಡುವಿನ ಸಂಘರ್ಷ ಕಡಿಮೆ ಮಾಡಲು ಕಾಡಂಚಿನ ಪ್ರದೇಶಗಳಲ್ಲಿ ಆನೆ, ಚಿರತೆ, ಇನ್ನಿತರ ಕಾಡುಪ್ರಾಣಿಗಳು ಗ್ರಾಮಗಳಿಗೆ ನುಗ್ಗಿ ದಾಳಿ ಮಾಡದಂತೆ ತಂತಿ ಬೇಲಿ, ಹಳ್ಳ ತೋಡುವುದು, ಇನ್ನಿತರ ಕ್ರಮಗಳನ್ನು ವ್ಯವಸ್ಥಿತವಾಗಿ ಕೈಗೊಳ್ಳಲಾಗುತ್ತಿದೆ ಎಂದು ಅಶ್ವಿನ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದರು.
ಟೀ ನರಸೀಪುರ ಬಳಿ ಕಾಡು ಪ್ರಾಣಿಗಳ ದಾಳಿಯಿಂದ ನಾಲ್ವರು ಮೃತಪಟ್ಟಿದ್ದು, ಅವರ ಕುಟುಂಬಗಳಿಗೆ ಈಗಾಗಲೇ ಪರಿಹಾರ ಒದಗಿಸಲಾಗಿದೆ ಎಂದು ಹೇಳಿದರು.ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ ೧೫ ಲಕ್ಷ ಕೊಡುವ ಆದೇಶಕ್ಕಿಂತ ಹಿಂದೆ ಎಷ್ಟು ಅವಧಿಯವರೆಗೆ ನೀಡಬೇಕು ಎನ್ನುವುದರ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.