
ಕಾಂಪೌಂಡ್ ಮೇಲೆ ಮರ ಉರುಳಿಬಿದ್ದ ಪರಿಣಾಮ ಕೂಲಿ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ. ಅವಘಡದಲ್ಲಿ ಮೃತಪಟ್ಟ ಕಾರ್ಮಿಕನನ್ನು ಆನೇಕಲ್ ನಿವಾಸಿ ವಸಂತ್ (33) ಎಂದು ಗುರುತಿಸಲಾಗಿದೆ.
ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ ಐಐಎಸ್‍ಸಿ ಪಕ್ಕದ ರಸ್ತೆಯಲ್ಲಿ ಬಿಬಿಎಂಪಿ ವತಿಯಿಂದ ಇನ್ರಾಡ್ರೈನೇಜ್ ಕಾಮಗಾರಿ ನಡೆಸಲಾಗುತ್ತಿದೆ. ವಸಂತ್ ಮತ್ತಿತರರು ಇಂದು ಮುಂಜಾನೆ ಮೂರು ಗಂಟೆ ಸಮಯದಲ್ಲಿ ಡ್ರೈನೇಜ್ ಕಾಮಗಾರಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಐಐಎಸ್‍ಸಿ ಆವರಣದಲ್ಲಿರುವ ಭಾರೀ ಗಾತ್ರದ ಮರವೊಂದು ಕಾಂಪೌಂಡ್ ಮೇಲೆ ಉರುಳಿಬಿತ್ತು.
ಮರ ಉರುಳಿಬಿದ್ದ ರಭಸಕ್ಕೆ ಕಾಂಪೌಂಡ್ ಕೆಲಸಗಾರರ ಮೇಲೆ ಬಿದ್ದ ಹಿನ್ನೆಲೆಯಲ್ಲಿ ವಸಂತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಶವವನ್ನು ಮರಣೋತ್ತರ ಪರೀಕ್ಷೆಗೆ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಿರುವ ಯಶವಂತಪುರ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.