ಕಾಂಗ್ರೆಸ್ ವಿರುದ್ಧ ಸಿಎಂ ವಾಗ್ದಾಳಿ

ಕಾಂಗ್ರೆಸ್ಸಿಗರು ಯಾವ ಮುಖ ಇಟ್ಟುಕೊಂಡು ಬಳ್ಳಾರಿಯಲ್ಲಿ ಭಾರತ್ ಜೋಡೊ ಸಮಾವೇಶ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಸೋನಿಯಾಗಾಂಧಿ ಅವರು ಬಳ್ಳಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು ನಂತರ ರಾಜೀನಾಮೆ ನೀಡಿ ರಾಯ್ಬರೇಲಿ ಸ್ಥಾನವನ್ನು ಉಳಿಸಿಕೊಂಡರು. ಬಳ್ಳಾರಿಯಲ್ಲಿ ಗೆದ್ದಿದ್ದಕ್ಕೆ ಜನರಿಗೆ ಕೃತಜ್ಞತೆ ಹೇಳಲೂ ಸಹ ಬಳ್ಳಾರಿಗೆ ಬರಲಿಲ್ಲ.
ಈಗ ಯಾವ ಮುಖ ಇಟ್ಟುಕೊಂಡು ರಾಹುಲ್ಗಾಂಧಿ ಸಮಾವೇಶ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಸೋನಿಯಾಗಾಂಧಿ ಬಳ್ಳಾರಿ ಅಭಿವೃದ್ಧಿಗೆ ೩ ಸಾವಿರ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದ್ದರು ಆ ಪ್ಯಾಕೇಜ್ ಏನಾಯಿತು ಎಂದು ಯಾರಿಗೂ ಗೊತ್ತಿಲ್ಲ.
ಬಳ್ಳಾರಿಗೆ ಏನನ್ನೂ ಮಾಡದ ಕಾಂಗ್ರೆಸ್ಸಿಗರು ಸಮಾವೇಶ ಮಾಡುತ್ತಿರುವುದು ಅರ್ಥ ಇಲ್ಲ ಎಂದರು.ರಾಹುಲ್ಗಾಂಧಿ ಅವರ ಭಾರತ್ ಜೋಡೊ ಯಾತ್ರೆ ಯಾವುದಕ್ಕೆ ಎಂಬುದೇ ಅರ್ಥವಾಗುತ್ತಿಲ್ಲ. ಭಾರತ ಒಂದಾಗಿ ಒಗ್ಗಟ್ಟಾಗಿ ಬಲಿಷ್ಠವಾಗಿದೆ. ಹೀಗಿರುವಾಗ ಜೋಡಿಸೋ ಎಲ್ಲಿ ಬರುತ್ತೆ ಎಂದರು.ಇಡೀ ಜಗತ್ತೇ ಆರ್ಥಿಕ ಹಿಂಜರಿತದಲ್ಲಿದ್ದಾಗ ಭಾರತ ಶೇ. ೭ರ ಬೆಳವಣಿಗೆಯಿಂದ ಮುನ್ನಡೆದಿದೆ.
ಬಲಿಷ್ಠವಾಗಿ ಉಳಿದಿದೆ. ಹೀಗಿರುವಾಗ ಭಾರತ್ ಜೋಡೊ ಯಾತ್ರೆಗೆ ಅರ್ಥವೇ ಇಲ್ಲ. ರಾಹುಲ್ಗಾಂಧಿ ಯಾರನ್ನು ಏನನ್ನು ಜೋಡಿಸುತ್ತಿದ್ದಾರೆ ಎಂದರು.ಕಾಂಗ್ರೆಸ್ಸಿಗರು ಈ ಹಿಂದೆ ರಾಹುಲ್ಗಾಂಧಿ ಎಂಬ ಕ್ಷಿಪಣಿಯನ್ನು ಉಡಾಯಿಸಲು ಹೋಗಿ ವಿಫಲರಾದರು. ಈಗ ಮತ್ತೆ ಭಾರತ್ ಜೋಡೊಯಾತ್ರೆ ಮೂಲಕ ೨ನೇ ಬಾರಿಗೆ ಕ್ಷಿಪಣಿ ಉಡಾಯಿಸಲು ಪ್ರಯತ್ನ ನಡೆಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಜನಸಂಕಲ್ಪ ವಿಜಯಸಂಕಲ್ಪ ಆಗಲಿದೆಬಿಜೆಪಿಯ ಜನಸಂಕಲ್ಪ ಯಾತ್ರೆಗೆ ಹೋದೆಡೆಯಲ್ಲೆಲ್ಲ ಅಭೂತಪೂರ್ವ ಜನ ಬೆಂಬಲ ವ್ಯಕ್ತವಾಗುತ್ತಿದೆ. ಕಾರ್ಯಕರ್ತರು ಉತ್ಸಾಹದಿಂದಿದ್ದಾರೆ. ಜನರಲ್ಲೂ ಬಿಜೆಪಿ ಬಗ್ಗೆ ವಿಶ್ವಾಸವಿದೆ. ಹಾಗಾಗಿ, ಜನಸಂಕಲ್ಪಯಾತ್ರೆ ವಿಜಯಸಂಕಲ್ಪಯಾತ್ರೆಯಾಗಿ ಪರಿವರ್ತನೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
೨೦೨೩ರ ಚುನಾವಣೆಯಲ್ಲಿ ಬಿಜೆಪಿ ೧೫೦ ಸ್ಥಾನಗೆದ್ದು ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ೪ ಕಿ.ಮೀ ನಡೆದು ತೋರಿಸಲಿ ಎಂಬ ಸಿದ್ದರಾಮಯ್ಯರವರ ಸವಾಲಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಖಂಡಿತ ನಡೆದು ತೋರಿಸೋಣ, ನನ್ನ ಬಗ್ಗೆ ಸಿದ್ದರಾಮಯ್ಯ ವೈಯಕ್ತಿಕ ಟೀಕೆ ಮಾಡಿದ್ದಾರೆ. ನಾನು ಆ ಮಟಕ್ಕೆ ಹೋಗೋದಿಲ್ಲ.
ಅವರ ಆರೋಗ್ಯ ಚೆನ್ನಾಗಿರಲಿ, ಜಿಮ್ ಎಲ್ಲ ಮಾಡಿ ನೂರು ವರ್ಷ ಬಾಳಲಿ ಎಂದು ಹಾರೈಸುತ್ತೇನೆ ಎಂದರು.