ಕಸದ ರಾಶಿಯಲ್ಲಿ ಮಗು ಎಸೆದು ಹೋಗಿದ್ದರೂ ತಡೆಯಲಿಲ್ಲ ಕರುಳ ಕೂಗು..!

ಚಾಮರಾಜನಗರ : ನವಜಾತ ಶಿಶುಗಳನ್ನು ರಸ್ತೆ ಬದಿಯಲ್ಲಿ, ಕಸದ ರಾಶಿಯಲ್ಲಿ ಬಿಟ್ಟು ತೆರಳುವ ಸುದ್ದಿಯನ್ನು ದಿನ ಬೆಳಗಾದರೆ ಕೇಳುತ್ತಿರುತ್ತೇವೆ. ಇಲ್ಲಿ ಕೂಡಾ ಬೆಳಕಿಗೆ ಬಂದಿರುವುದು ಅಂಥದ್ದೇ ಪ್ರಕರಣ. ಆದರೆ ಇದು ಸ್ವಲ್ಪ ಭಿನ್ನವಾಗಿದೆ. ಇಲ್ಲಿ ತಾಯಿ ತನಗೆ ಮಗು ಬೇಡ ಎಂದು ಬಿಟ್ಟು ಹೋಗಿದ್ದಾಳೆ ನಿಜ. ಆದರೆ ಮತ್ತೆ ಪೋಲೀಸರ ಮುಂದೆ ಬಂದು ತಾನೇ ಈ ಮಗುವಿನ ತಾಯಿ ಎಂದು ಒಪ್ಪಿಕೊಂಡಿದ್ದಾಳೆ. ಹಾಗಂತ ಪ್ರಕರಣ ಇಲ್ಲಿಗೇ ಸುಖಾಂತ್ಯ ಕಂಡಿದ್ದೂ ಇಲ್ಲ.
ಬಸ್ ನಿಲ್ದಾಣದ ಸಮೀಪ ನವಜಾತ ಶಿಶು : ಕೊಳ್ಳೇಗಾಲ ತಾಲೂಕಿನ ಮತ್ತೀಪುರ ಬಸ್ ನಿಲ್ದಾಣದ ಸಮೀಪದಲ್ಲಿ ಇಂದು ಮುಂಜಾನೆ ಎರಡು ದಿನದ ಗಂಡು ಶಿಶು ಪತ್ತೆಯಾಗಿದೆ. ನಿಲ್ದಾಣದ ಸಮೀಪದಲ್ಲಿ ಮಗು ಕಂಡು ಹೌಹಾರಿದ ಸ್ಥಳೀಯರು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಚಾರ ಅರಿತು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸುವಾಗ ಆ ಜಾಗದಲ್ಲಿ ಮಗುವಿನ ತಾಯಿ ಪ್ರತ್ಯಕ್ಷಳಾಗಿದ್ದಾಳೆ. “ನಾನೇ ಈ ಮಗುವಿನ ತಾಯಿ, ನಾನೇ ಈ ಮಗುವನ್ನು ಬಿಟ್ಟು ಹೋಗಿದ್ದು” ಎಂದು ಪೊಲೀಸರ ಮುಂದೆ ಅವಲತ್ತುಕೊಂಡಿದ್ದಾಳೆ. ಈ ಬಗ್ಗೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ, ತನಗೆ ಮದುವೆ ಆಗಿದ್ದು ಗಂಡ ಬಿಟ್ಟು ಹೋಗಿದ್ದಾನೆ. ಇದೀಗ ಈ ಮಗುವನ್ನು ಸಾಕುವ ಆಸಕ್ತಿ ಇಲ್ಲ ಎಂದು ಹೇಳಿದ್ದಾಳೆ.
ಇಷ್ಟೆಲ್ಲಾ ಆದ ಮೇಲೆ ಪೊಲೀಸರು ಸದ್ಯಕ್ಕೆ ಮಗುವನ್ನು ತಾಯಿಯ ಸುಪರ್ದಿಗೆ ಕೊಟ್ಟಿದ್ದಾರೆ. ಮಗುವನ್ನು ಕಾನೂನು ಪ್ರಕಾರ ದತ್ತು ಕೊಡಿಸಲಾಗುವುದು. ಅಲ್ಲಿಯ ತನಕ ಮಗುವನ್ನು ನೋಡಿಕೊಳ್ಳುವಂತೆ, ಮತ್ತು ಯಾವುದೇ ರೀತಿಯಲ್ಲಿ ತೊಂದರೆ ಕೊಡದಂತೆ ಎಚ್ಚರಿಕೆ ನೀಡಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.