ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಭರಪೂರ ಕೊಡುಗೆ ಘೋಷಿಸಿದ ಸಿಎಂ ಬೊಮ್ಮಾಯಿ

ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರಪೂರ ಕೊಡುಗೆಗಳನ್ನು ಘೋಷಣೆ ಮಾಡಿದ್ದಾರೆ.ಪ್ರಸಕ್ತ ವರ್ಷದಲ್ಲಿ 2100 ಶಾಲಾ ಕೊಠಡಿಗಳ ನಿರ್ಮಾಣ, 64 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಪ್ರತಿಯೊಂದು ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ, ಕೈಗಾರಿಕೆಗಳ ಸ್ಥಾಪನೆ, 2500 ಅಂಗನವಾಡಿ ಕೇಂದ್ರಗಳು, ಕಲಬುರಗಿಯಲ್ಲಿ ಟೆಕ್ಸ್‍ಟೈಲ್ ಪಾರ್ಕ್ ನಿರ್ಮಾಣ ಸೇರಿದಂತೆ ಕಲ್ಯಾಣ ಕರ್ನಾಟಕದ ಭಾಗಕ್ಕೆ ಹಲವು ಕೊಡುಗೆಗಳನ್ನು ಘೋಷಿಸಿದ್ದಾರೆ.
ಕಲಬುರಗಿ ಜಿಲ್ಲಾಡಳಿತ ಹಾಗೂ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಸಮಿತಿ ವತಿಯಿಂದ ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕಲ್ಯಾಣ ಕರ್ನಾಟಕ, ಶಿಕ್ಷಣ, ಕೈಗಾರಿಕೆ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿಯಾಗಬೇಕೆಂಬುದು ನಮ್ಮ ಸರ್ಕಾರದ ಏಕೈಕ ಗುರಿಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಳೆದ ಸಾಲಿನ ಬಜೆಟ್‍ನಲ್ಲಿ 3000 ಕೋಟಿ ಅನುದಾನ ಮೀಸಲಿಟ್ಟಿದೆ ಎಂದು ಹೇಳಿದರು.
ಮೀಸಲಿಟ್ಟ ಅನುದಾನವನ್ನು ಅನುಷ್ಠಾನ ಮಾಡಲು ಕ್ರಿಯಾ ಯೋಜನೆಗೆ ಅನುಮೋದನೆ ಕೊಡಲಾಗಿದೆ. ಕಲ್ಯಾಣ ಕರ್ನಾಟಕ ಕೇವಲ ಹೆಸರಿಗೆ ಮಾತ್ರ ಕಲ್ಯಾಣ ಕರ್ನಾಟಕವಾದರೆ ಸಾಲದು ಇದು ಎಲ್ಲ ಕ್ಷೇತ್ರಗಳಲ್ಲೂ ಕಲ್ಯಾಣವಾಗಬೇಕೆಂಬುದು ನಮ್ಮ ಸರ್ಕಾರದ ಬದ್ದತೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕವನ್ನು ಅಭಿವೃದ್ದಿಪಡಿಸಲು ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಮಗೆ ಎಲ್ಲ ರೀತಿಯ ಸಹಕಾರ ಕೊಡುತ್ತಿದೆ. ಆ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಸುತ್ತಿದ್ದೆವೆ. ಕೇಂದ್ರ ಸರ್ಕಾರವು ಕಲಬುರ್ಗಿಯಲ್ಲಿ ಹಾಗೂ ರಾಜ್ಯ ಸರ್ಕಾರ ರಾಯಚೂರು ಮತ್ತು ಬಿಜಪುರದಲ್ಲಿ ಟೆಕ್ಸ್‍ಟೈಲ್ ಪಾರ್ಕ್ ಮಾಡಲು ನಿರ್ಧರಿಸಿದೆ ಎಂದು ಪ್ರಕಟಿಸಿದರು.
ರಾಯಚೂರು, ಬಳ್ಳಾರಿ ವಿಮಾನ ನಿಲ್ದಾಣ ಮಾಡಲು ತೀರ್ಮಾನಿಸಿದ್ದೇವೆ. ಈ ಭಾಗದ ಅಭಿವೃದ್ದಿಯಾಗಬೇಕೆಂದರೆ ರಾಜಕಾರಣಿಗಳು ಪಕ್ಷಬೇದ ಮರೆತು ಕೆಲಸ ಮಾಡಬೇಕು. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು.
ರಾಜಕಾರಣ ಮಾಡಿದರೆ ಈ ಭಾಗಕ್ಕೆ ದೊಡ್ಡ ದ್ರೋಹ ಮಾಡಿದಂತಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.ಪ್ರತಿ ಗ್ರಾಮದಲ್ಲಿ ಸ್ತ್ರೀ ಶಕ್ತಿ ಯೋಜನೆ ಘೊಷಣೆ ಮಾಡಿದ್ದೇವೆ. ಕಲ್ಯಾಣ ಕರ್ನಾಟಕದ ಪ್ರತಿ ಹಳ್ಳಿಯಲ್ಲಿಯು ಸಂಘ ಸ್ಥಾಪಿಸಲಾಗುವುದು. ಅದೇ ರೀತಿ ಪ್ರತಿ ಗ್ರಾಮದಲ್ಲಿ ಯುವಕ ಸಂಘ, ಎರಡು ಯುವಶಕ್ತಿ ಸಂಘ ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದೆ.
ಯುವಕರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಯೋಜನೆ ರೂಪಿಸಿದ್ದೇವೆ.ಇದರಿಂದ ಸುಮಾರು 1 ಲಕ್ಷ ಯುವಕರಿಗೆ ಉದ್ಯೋಗ ದೊರೆಯಲಿದ್ದು, ಕುಶಲ ಕರ್ಮಿಗಳ ಸಮುದಾಯದ ಯುವಕರಿಗೆ ಪ್ರತಿಯೊಬ್ಬರಿಗೆ 50 ಸಾವಿರ ರೂ..ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.ಈ ಭಾಗದ ಜನರು ಉದ್ಯೋಗಹರಿಸಿ ಇಲ್ಲಿಂದ ಬೇರೆ ಬೇರೆ ಕಡೆ ಗುಳೇ ಹೋಗುವುದನ್ನು ತಡೆಗಟ್ಟಲು ನಮ್ಮ ಸರ್ಕಾರ ಉದ್ಯೋಗ ಕ್ರಾಂತಿ ಸೃಷ್ಟಿಸಲಿದೆ.
ಬೀದರ್, ಬಳ್ಳಾರಿ,ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ನೀರಾವರಿ ಯೋಜನೆ ಕೈಗೆತ್ತಿಕೊಂಡಿದ್ದೇವೆ. ಬಸವರಾಜ್ ಪಾಟೀಲ್ ಸೇಡಂ ಅವರ ನೇತೃತ್ವದಲ್ಲಿ ಸಾಂಸ್ಕೃತಿಕ ಸಂಘ ಮಾಡಿದ್ದೇವೆ ಎಂದು ವಿವರಿಸಿದರು.ಸುಮಾರು 2 ಲಕ್ಷಕ್ಕಿಂತ ಹೆಚ್ಚು ಪ್ರದೇಶ ಬಂಜರು ಭೂಮಿ ಲಭ್ಯವಿದ್ದು, ಇಲ್ಲಿ ಕೃಷಿಗೆ ಹೆಚ್ಚಿನ ಅವಕಾಶವಿದೆ.
ಈ ಭಾಗದಲ್ಲಿ ಹಸಿರು ಪ್ರದೇಶ ಹೆಚ್ಚಿಸಲು ಕೊಪ್ಪಳದಿಂದ ಕಲಬುರ್ಗಿ, ಬಳ್ಳಾರಿಯಿಂದ ರಾಯಚೂರುವರೆಗೆ ಗ್ರೀನ್ ಕಾರಿಡಾರ್ ಮಾಡಲು ತೀರ್ಮಾನಿಸಿದ್ದೇವೆ. ಇದಕ್ಕಾಗಿ ಅರಣ್ಯ ಇಲಾಖೆಗೆ 10 ಕೋಟಿ ನೀಡಿದ್ದೇವೆ, 2 ಲಕ್ಷ ಎಕರೆ ಬಂಜರು ಭೂಮಿಯನ್ನು ಕೃಷಿಯೋಗ್ಯ ಮಾಡಲು ನಿರ್ಧರಿಸಲಾಗಿದೆ ಎಂದರು.