
ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ರಾಯಚೂರು, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನೂರಾರು ಎಕರೆ ಭತ್ತದ ಗದ್ದೆಗೆ ನೀರು ನುಗ್ಗಿ ಬೆಳೆ ನೀರು ಪಾಲಾಗಿವೆ.
ತುಂಗಭದ್ರಾ ಜಲಾಶಯದಿಂದ ಲಕ್ಷಾಂತರ ಕ್ಯೂಸೆಕ್ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ಮಂತ್ರಾಲಯಕ್ಕೂ ಗಂಡಾಂತರ ಎದುರಾಗಿದ್ದು, ರಾಘವೇಂದ್ರಸ್ವಾಮಿ ಜಪದ ಕಟ್ಟೆ ಜಲಾವೃತಗೊಂಡಿದೆ.ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಖಾನಾಪುರ ತಾಲ್ಲೂಕಿನ ಲಿಂಗನಮಠ ಗ್ರಾಮದಲ್ಲಿ ಗೋಡೆ ಕುಸಿದು ಬಾಲಕ ಮೃತಪಟ್ಟಿದ್ದಾನೆ.
ಮೃತ ಬಾಲಕನನ್ನು ಅನಂತು ಪಾ ಶೆಟ್ಟಿ ಎಂದು ಗುರುತಿಸಲಾಗಿದೆ. ನಿನ್ನೆ ತಡರಾತ್ರಿ ಮನೆ ಪಕ್ಕದಲ್ಲಿ ಹಸುವಿಗೆ ಮೇವು ಹಾಕಲು ತೆರಳಿದ್ದ ವೇಳೆ ಗೋಡೆ ಕುಸಿದು ಸಾವನ್ನಪ್ಪಿದ್ದಾನೆ.ಗೋಡೆ ಬಿದ್ದ ಸದ್ದು ಹಾಗೂ ಬಾಲಕನ ಚೀರಾಟ ಕೇಳಿ ಮನೆಯ ಸದಸ್ಯರು ತಕ್ಷಣ ಸ್ಥಳಕ್ಕೆ ಧಾವಿಸಿದರು.
ಅವಶೇಷಗಳಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಬಾಲಕನನ್ನು ಹೊರಗೆಳೆದರು.ಅಷ್ಟರೊಳಗೆ ಬಾಲಕ ಮೃತಪಟ್ಟಿದ್ದ ಎಂದು ಕುಟುಂಬದವರು ತಿಳಿಸಿದ್ದಾರೆ.ನಂದಘಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಖಾನಾಪುರ ಆಸ್ಪತ್ರೆಗೆ ರವಾನಿಸಲಾಗಿದೆ.ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ, ದೂದ್‌ಗಂಗಾ, ವೇದಗಂಗಾ ಹಾಗೂ ಘಟಪ್ರಭಾ ನದಿಗಳ ಒಳ ಹರಿವಿನಲ್ಲಿ ಮತ್ತಷ್ಟು ಏರಿಕೆಯಾಗಿದೆ.
ಮಳೆಯಿಂದಾಗಿ ಕೃಷ್ಣಾ ನದಿಗೆ ಒಟ್ಟು ೧.೨೬ ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹಿಪ್ಪರಗಿ ಜಲಾಶಯದಿಂದ ೧.೨೦ ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.ಘಟಪ್ರಭಾ ವ್ಯಾಪ್ತಿಯ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಹಿಡಕಲ್ ಜಲಾಶಯಕ್ಕೆ ೨೫ ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದಾಗಿ ಜಲಾಶಯದಲ್ಲಿ ಒಂದೇ ದಿನ ೫ ಅಡಿ ನೀರು ಏರಿಕೆಯಾಗಿದೆ.
ಖಾನಾಪುರ ತಾಲ್ಲೂಕಿನಲ್ಲೂ ಭಾರಿ ಮಳೆ ಸುರಿಯುತ್ತಿದ್ದು, ಮಲಪ್ರಭಾ ಜಲಾಶಯಕ್ಕೆ ೧೫ ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ಒಂದು ವಾರದಿಂದ ಬೆಳಗಾವಿ ಹಾಗೂ ಖಾನಾಪುರ ತಾಲ್ಲೂಕಿನಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಬಳ್ಳಾರಿ ನಾಲಾ ನೀರು ನುಗ್ಗಿ ಹೊರ ವಲಯದ ಯಳ್ಳೂರ ಮಾರ್ಗದಲ್ಲಿರುವ ಗಣಪತಿ ದೇವಾಲಯ ನೀರಿನಲ್ಲಿ ಮುಳುಗಿದೆ.
ದೇವಸ್ಥಾನದ ಪಕ್ಕದ ನೂರಾರು ಎಕರೆ ಭತ್ತದ ಗದ್ದೆ ನೀರಿನಲ್ಲಿ ಮುಳುಗಡೆಯಾಗಿದೆ. ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಗಿದ್ದರೂ ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಯಚೂರು ತಾಲ್ಲೂಕಿನ ಬಿಚ್ಚಾಲಿ ಗ್ರಾಮದ ತುಂಗಭದ್ರಾ ನದಿ ತೀರದಲ್ಲಿರುವ ಜಪದಕಟ್ಟೆ ಸುತ್ತಲೂ ನೀರು ಆವರಿಸಿಕೊಂಡಿದೆ. ಸಿಂಧನೂರು, ಮಾನ್ವಿ, ನದಿತೀರದ ಗ್ರಾಮಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ.ಜಿಲ್ಲಾಡಳಿತ ಮುನ್ನೆಚ್ಚೆರಿಕೆ ಕ್ರಮಕೈಗೊಂಡಿದ್ದು, ಜನ ಜಾನುವಾರು ನದಿ ತೀರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ.
ತುಂಗಭದ್ರಾ ನದಿಯಿಂದ ಲಕ್ಷಾಂತರ ಕ್ಯೂಸೆಕ್ ನೀರು ಹೊರಗೆ ಬಿಟ್ಟಿರುವುದರಿಂದ ಪ್ರವಾಹದ ಭೀತಿ ಎದುರಾಗಿದೆ. ನೂರಾರು ಎಕರೆ ಜಮೀನು ಜಲಾವೃತಗೊಂಡಿದೆ.
ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಮತ್ತು ಪ್ರವಾಹದಿಂದಾಗಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಗೋಡನಚಿನಮಲ್ಕಿ ಜಲಪಾತ ಭೋರ್ಗರೆಯುತ್ತಿದೆ.
ಜಲಪಾತದ ಸುತ್ತಮುತ್ತ ತೆರಳದಂತೆ ಪ್ರವಾಸಿಗರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಆದರೆ, ಪೊಲೀಸರ ಕಣ್ತಪ್ಪಿಸಿ ಜಲಪಾತದ ಬಳಿ ಬಂಡೆಗಲ್ಲುಗಳ ಮೇಲೆ ನಿಂತು ಯುವಕರ ಹುಚ್ಚಾಟ ಮುಂದುವರೆದಿದ್ದು, ಫೊಟೊ ತೆಗೆದುಕೊಳ್ಳುವ ಸಾಹಸಕ್ಕೆ ಮುಗಿ ಬಿದ್ದಿದ್ದಾರೆ.
ಕೊಪ್ಪಳ ಜಿಲ್ಲೆಯ ಕರಟಗಿ ತಾಲ್ಲೂಕಿನ ಬೆನ್ನೂರು ಗ್ರಾಮದ ಐತಿಹಾಸಿಕ ಹೊಳೆ ಬಸವೇಶ್ವರ ದೇವಸ್ಥಾನ ಸಂಪೂರ್ಣವಾಗಿ ಮುಳುಗಿ ಹೋಗಿದೆ.
ಅಕ್ಕಪಕ್ಕದ ಜಮೀನುಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.ಉತ್ತರ ಕನ್ನಡ ಜಿಲ್ಲೆಯ ವಿಭೂತಿ, ನಾಗರಮಡಿ, ಬೋಲಾರಿ ಜಲಪಾತ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಇದರಿಂದಾಗಿ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.ಹಾಸನಜಿಲ್ಲೆಯಲ್ಲೂ ಮಳೆ ಮುಂದುವರೆದಿದ್ದು, ನದಿ, ತೊರೆಗಳು ಉಕ್ಕಿ ಹರಿಯುತ್ತಿವೆ. ಹೆತ್ತೂರು, ಹುಂಬ್ರಳ್ಳಿ ಮಾರ್ಗದ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಜನರು ಪರದಾಡುವಂತಾಗಿದೆ.
ಇದೇ ವೇಳೆ ಕೊಡಗು ಜಿಲ್ಲೆಯಲ್ಲೂ ಮಳೆ ಮತ್ತು ಬಿರುಸಿನ ಗಾಳಿ ಮುಂದುವರೆದಿದ್ದು, ಭಾಗಮಂಡಲದಲ್ಲಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.ನಾಪೋಕ್ಲು-ಭಾಗಮಂಡಲ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ. ಸೋಮವಾರಪೇಟೆ ತಾಲ್ಲೂಕಿನ ದೊಡ್ಡಬೂರು ಗ್ರಾಮದಲ್ಲಿ ಮಳೆಯ ನೀರು ನುಗ್ಗಿ ಹಾನಿಯಾಗಿದೆ.