ಕರ್ನಾಟಕ ನಂ. ೧ : ಸಿಎಂ ಸಂಕಲ್ಪ

ಕರ್ನಾಟಕವನ್ನು ನಂ. ೧ ರಾಜ್ಯ ಮಾಡುವ ಸಂಕಲ್ಪ ತಮ್ಮದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ವಿಧಾನಸೌಧದ ಮೆಟ್ಟಿಲುಗಳ ಮೇಲಿಂದು ಕೋಟಿ ಕಂಠ ಗಾಯನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕ ಅತ್ಯಂತ ಸಮೃದ್ದ ನಾಡು, ಪ್ರಾಕೃತಿಕವಾಗಿಯೂ ಸಾಕಷ್ಟು ಸಂಪದ್ಭರಿತ ನಾಡು, ಈ ನಾಡನ್ನು ಇಡೀ ದೇಶದಲ್ಲಿ ಅಭಿವೃದ್ಧಿಯಲ್ಲಿ ನಂ. ೧ ರಾಜ್ಯವನ್ನು ಮಾಡಲು ಸಂಕಲ್ಪ ತೊಟ್ಟಿದ್ದೇನೆ.
ಕನ್ನಡ ನಾಡು ಎಲ್ಲದರಲ್ಲೂ ಮುಂದಿದೆ ಎನ್ನುವುದನ್ನು ನಾವು ತೋರಿಸಬೇಕಿದೆ ಎಂದರು.ಕೋಟಿ ಕಂಠ ಗಾಯನ ಮಾಡಿ ನಾವು ವಿಶ್ವ ದಾಖಲೆ ಮಾಡಿದ್ದೇವೆ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಈ ಕಾರ್ಯಕ್ರಮ ಮಾಡುತ್ತಿರುವುದು ವಿಶೇಷ, ಶಕ್ತಿಸೌಧದ ಮೂಲಕ ನಾಡಿನ ಎಲ್ಲ ಭಾಗಕ್ಕೂ ಕನ್ನಡದ ಕಂಪು ಪಸರಿಸಲಿ ಎಂದು ಈ ಕಾರ್ಯಕ್ರಮ ಮಾಡಿದ್ದೇವೆ ಎಂದರು.
ಕಂಠೀರವ ಕ್ರೀಡಾಂಗಣದಲ್ಲಿ ಗಾಯನಕ್ಕೆ ಚಾಲನೆ ಕೋಟಿ ಕಂಠ ಗಾಯನದ ಮೂಲಕ ಕನ್ನಡಕ್ಕಾಗಿ ನಾವೆಲ್ಲ ಒಂದು ಎಂಬ ಸಂದೇಶವನ್ನು ಸಾರಿ ಸಾರಿ ಹೇಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಂಠೀರವ ಕ್ರೀಡಾಂಗಣದಲ್ಲಿಂದು ಕನ್ನಡ ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕೋಟಿ ಕಂಠ ಗಾಯನಕ್ಕೆ ಚಾಲನೆ ನೀಡಿ ೬ ಹಾಡುಗಳಿಗೆ ದನಿಯಾದ ನಂತರ ಮಾತನಾಡಿದಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಕೋಟಿ ಕಂಠ ಗಾಯನಕ್ಕಾಗಿ ಇಡೀ ಕರ್ನಾಟಕಲ್ಲಿಂದು ಶಾಲಾ ಮಕ್ಕಳು, ಯುವಕರು, ಯುವತಿಯರು, ರೈತರು, ಕಾರ್ಮಿಕರು, ಕಲಾವಿದರು ಹೀಗೆ ಎಲ್ಲರೂ ಒಂದಾಗಿ ಕೋಟಿ ಕಂಠದಿಂದ ೬ ಕನ್ನಡದ ಹಾಡನ್ನು ಹಾಡುವ ಮೂಲಕ ಕನ್ನಡಕ್ಕಾಗಿ ನಾವೆಲ್ಲ ಒಂದು ಎಂದು ಸಾರಿ ಸಾರಿ ಹೇಳಿರುವ ಅಮೃತ ಘಳಿಗೆಯಲ್ಲಿ ನಾವೆಲ್ಲ ಭಾಗಿಯಾಗಿದ್ದೇವೆ ಎಂದು ಎಲ್ಲರಿಗೂ ಹೃದಯಪೂರ್ವಕ ಅಭಿನಂದನೆ ಎಂದರು.
ಈ ಗಾಯನದ ಮೂಲಕ ಕನ್ನಡ ಡಿಂಡಿಮಾವ ಬಾರಿಸಿ ಹುಟ್ಟಿದರೆ ಕನ್ನಡ ನಾಡಲ್ಲೇ ಹುಟ್ಟಬೇಕು ಎಂಬ ಬದ್ಧತೆಯನ್ನು ತೋರಿಸಿದ್ದೇವೆ. ನ. ೧ ರಂದು ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಹಾಗೂ ಪವರ್ ಸ್ಟಾರ್ ಪುನೀತ್ರಾಜ್‌ಕುಮಾರ್‌ರವರಿಗೆ ಕನ್ನಡ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತಿದೆ.ಇದರಲ್ಲೂ ಎಲ್ಲರೂ ಪಾಲ್ಗೊಳ್ಳುವಂತೆ ಕರೆ ನೀಡಿದ ಅವರು, ಒಬ್ಬ ಕನ್ನಡದ ರತ್ನನಿಗೆ ‘ಕರ್ನಾಟಕ ರತ್ನ’ ನೀಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.