ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಭಾ. ಮ. ಹರೀಶ್ ಆಯ್ಕೆಯಾಗಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಭಾರಿ ಕುತೂಹಲ ಮೂಡಿಸಿತ್ತು. ಅಧ್ಯಕ್ಷ ಸ್ಥಾನಕ್ಕೆ ಭಾ.ಮ. ಹರೀಶ್ ಮತ್ತು ನಿರ್ಮಾಪಕ ಸಾ.ರಾ. ಗೋವಿಂದು ಭಾರಿ ಪೈಪೋಟಿ ನಡೆಸಿದ್ದರು. ಇದೀಗ ಫಲಿತಾಂಶ ಹೊರಬಿದ್ದಿದ್ದು, ಭಾ.ಮ. ಹರೀಶ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಭಾರಿ ಕುತೂಹಲ ಮೂಡಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 64ನೇ ವಾರ್ಷಿಕ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ನಿರ್ಮಾಪಕ ಭಾ ಮ ಹರೀಶ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಜೈರಾಜ್ ಅವರು ಅಧ್ಯಕ್ಷರಾಗಿದ್ದರು. ಅವಧಿ ಮುಗಿದಿದ್ದರಿಂದ ಚುನಾವಣೆ ಘೋಷಣೆ ಆಗಿತ್ತು. ಈ ಬಾರಿ ಅಧ್ಯಕ್ಷ ಸ್ಥಾನದ ಮೇಲೆ ಭಾ ಮ ಹರೀಶ್ ಮತ್ತು ನಿರ್ಮಾಪಕ ಸಾ ರಾ ಗೋವಿಂದು ಕಣ್ಣಿಟ್ಟಿದ್ದರು. ಇಬ್ಬರ ನಡುವೆ ತೀವ್ರ ಪೈಪೋಟಿ ಇತ್ತು. ಆದರೆ ಅಂತಿಮವಾಗಿ ಭಾ ಮ ಹರೀಶ್ ಅವರ ತಂಡ ಗೆಲುವಿನ ನಗೆ ಬೀರಿದೆ.
ಈ ಬಾರಿ ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನವು ನಿರ್ಮಾಪಕರ ವಲಯಕ್ಕೆ ಮೀಸಲಾಗಿತ್ತು. ಹಾಗಾಗಿ, ನಿರ್ಮಾಪಕ ಭಾ.ಮ. ಹರೀಶ್ ಮತ್ತು ನಿರ್ಮಾಪಕ ಸಾ.ರಾ. ಗೋವಿಂದು ನಡುವೆ ನೇರಾನೇರ ಪೈಪೋಟಿ ಇತ್ತು. ಈ ಚುನಾವಣೆಯಲ್ಲಿ ಒಟ್ಟು 62% ಮತದಾನ ಆಗಿದ್ದು, ಶನಿವಾರ (ಮೇ 28) ಮಧ್ಯಾಹ್ನ 2ರಿಂದ ಸಂಜೆ 6ರ ತನಕ ಮತದಾನ ಆಗಿತ್ತು. ಹಿರಿಯ ನಟಿ ಲೀಲಾವತಿ, ವಿನೋದ್ ರಾಜ್, ಜಯಮಾಲಾ, ಶ್ರುತಿ, ರಾಘವೇಂದ್ರ ರಾಜ್‌ಕುಮಾರ್, ಸಚಿವ ಹಾಗೂ ನಿರ್ಮಾಪಕ ಮುನಿರತ್ನ ಸೇರಿದಂತೆ ಸಾಕಷ್ಟು ಮಂದಿ ಮತದಾನ ಮಾಡಿದರು. ನಿರ್ಮಾಪಕರ ವಲಯದಿಂದ ಒಟ್ಟು 769, ವಿತರಕ ವಲಯದಿಂದ 301 ಮತ್ತು ಪ್ರದರ್ಶಕ 679 ಮತಗಳು ಚಲಾವಣೆ ಆಗಿದ್ದವು. ಇದರಲ್ಲಿ ಭಾ.ಮ. ಹರೀಶ್‌ಗೆ 781 ಮತಗಳು ಬಂದರೆ, ಸಾ.ರಾ. ಗೋವಿಂದು ಅವರಿಗೆ 378 ಮತಗಳು ಸಿಕ್ಕಿವೆ. 410 ಮತಗಳ ಭಾರಿ ಅಂತರದಿಂದ ಭಾ.ಮ. ಹರೀಶ್ ಗೆಲುವು ಸಾಧಿಸಿ, ಮೊದಲ ಬಾರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಧ್ಯರಾತ್ರಿ ಚುನಾವಣಾ ಫಲಿತಾಂಶವನ್ನು ಘೋಷಣೆ ಮಾಡಲಾಯ್ತು.