ಕರ್ನಾಟಕದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಗುರುವಾರ ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ

ಕರ್ನಾಟಕದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಗುರುವಾರ ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ತಮಗೆ ಸೋಂಕು ಖಾತ್ರಿ ಆಗಿರುವುದರ ಬಗ್ಗೆ ಸ್ವತಃ ಸಚಿವರೇ ಟ್ವೀಟ್ ಮಾಡಿದ್ದಾರೆ.
ಮೂರು ಅಲೆಗಳ ಸಂದರ್ಭದಲ್ಲೂ ಕೋವಿಡ್ ಸೋಂಕಿನಿಂದ ಪಾರಾಗಿದ್ದ ನಾನು ಈಗ ಸೋಂಕಿಗೆ ತುತ್ತಾಗಿದ್ದೇನೆ. ಸಣ್ಣ ಪ್ರಮಾಣದ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ. ಕೆಲ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು ಹೋಮ್ ಐಸೋಲೇಷನ್ ನಲ್ಲಿ ಇದ್ದುಕೊಂಡೇ ಚಿಕಿತ್ಸೆ ಪಡೆಯುತ್ತಿದ್ದೇನೆ,” ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಇಳಿಮುಖವಾಯಿತು ಎನ್ನುವಷ್ಟರಲ್ಲೇ ಕ್ರಮೇಣ ಏರಿಕೆಯಾಗುತ್ತಿದೆ. ಕರ್ನಾಟಕದಲ್ಲಿ 100ಕ್ಕಿಂತ ಕಡಿಮೆಯಾಗಿದ್ದ ಹೊಸ ಪ್ರಕರಣಗಳ ಸಂಖ್ಯೆ ಈಗ 300ರ ಸನ್ನಿಹಿತಕ್ಕೆ ಬಂದಿದೆ. ಇದು ಕೋವಿಡ್-19 ಸೋಂಕಿನ ಅಪಾಯ ಇನ್ನೂ ಕಡಿಮೆಯೇನಿಲ್ಲ ಎಂಬ ಎಚ್ಚರಿಕೆಯನ್ನು ನೀಡುತ್ತಿದೆ.
ಕರ್ನಾಟಕದಲ್ಲಿ ಹೇಗಿದೆ ಕೊರೊನಾ ವೈರಸ್ ಲೆಕ್ಕ: ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲೇ 297 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪಕ್ಕಾ ಆಗಿದೆ. ಇದೇ ಅವಧಿಯಲ್ಲಿ 187 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.1.47ರಷ್ಟಾಗಿದೆ. ಇದರ ಮಧ್ಯೆ ರಾಜ್ಯದ ಒಟ್ಟಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 2204 ಆಗಿದೆ.
ಬೆಂಗಳೂರಿನಲ್ಲೇ ಅತಿಹೆಚ್ಚು ಕೋವಿಡ್-19 ಅಪಾಯ: ರಾಜ್ಯದಲ್ಲಿ ಒಟ್ಟು 300 ಹೊಸ ಕೋವಿಡ್-19 ಪ್ರಕರಣಗಳು ವರದಿಯಾದರೆ ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ಬೆಂಗಳೂರು ನಗರವೊಂದರಲ್ಲೇ ಪತ್ತೆಯಾಗುತ್ತವೆ. ಕಳೆದ 24 ಗಂಟೆಗಳ ಲೆಕ್ಕಾಚಾರ ಕೂಡ ಅದನ್ನೇ ಸೂಚಿಸುತ್ತಿದೆ. ಒಂದು ದಿನದಲ್ಲಿ ಪತ್ತೆಯಾದ ಒಟ್ಟು 297 ಪ್ರಕರಣಗಳಲ್ಲಿ 276 ಹೊಸ ಪ್ರಕರಣಗಳು ಸಿಲಿಕಾನ್ ಸಿಟಿಯಲ್ಲೇ ವರದಿಯಾಗಿದೆ. ಅದೇ ರೀತಿ ಒಟ್ಟು 187 ಮಂದಿ ಸೋಂಕಿತರು ಗುಣಮುಖರಾದರೆ, ಅದರಲ್ಲಿ 173 ಮಂದಿ ಬೆಂಗಳೂರಿನವರೇ ಆಗಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.