
ಬೆಂಗಳೂರು: ಸನ್ನಡತೆಯ ಕೈದಿಗಳನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿಸಿ ಅವರ ಬದುಕಿನಲ್ಲಿ ಆಶಾಕಿರಣ ಮೂಡಿಸಲು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯು ಪೆಟ್ರೋಲ್ ಬಂಕ್ ತೆರೆದು ಉದ್ಯೋಗಾವಕಾಶ ಕಲ್ಪಿಸಲು ಮಹತ್ವದ ಹೆಜ್ಜೆಯಿಟ್ಟಿದೆ.
ಕಾರಾಗೃಹದ ಕತ್ತಲ ಕೋಣೆಯಲ್ಲಿ ದಿನ ದೂಡುತ್ತಿರುವ ‘ಜೈಲು ಹಕ್ಕಿ’ಗಳಿಗೆ ಬಿಡುಗಡೆಯ ನಂತರ ಸಮಾಜದಲ್ಲಿ ಪುನರ್ವಸತಿ ಕಲ್ಪಿಸುವ ಮಹಾದಾಸೆಯೊಂದಿಗೆ ಇಲಾಖೆಯು ಭಾರತೀಯ ತೈಲ ನಿಗಮ (ಐಒಸಿ), ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಜತೆ ಒಡಂಬಡಿಕೆ ಮಾಡಿಕೊಂಡು ಬಂಕ್‌ಗಳನ್ನು ಆರಂಭಿಸಲು ಚಿಂತನೆ ನಡೆಸಿದೆ.
ರಾಜ್ಯದಲ್ಲಿ 8 ಕೇಂದ್ರ ಕಾರಾಗೃಹ, 19 ಜಿಲ್ಲಾ ಕಾರಾಗೃಹ, 1 ಬಯಲು ಬಂದೀಖಾನೆ, 1 ಬಾಲಾಪರಾಧಿ ಶಾಲೆ, 1 ತರುಣ ಬಂದೀಖಾನೆ ಮತ್ತು 72 ತಾಲೂಕು ಉಪ ಕಾರಾಗೃಹಗಳೂ ಸೇರಿದಂತೆ ಒಟ್ಟಾರೆ 102 ಜೈಲುಗಳಿವೆ.
ವಿವಿಧ ಅಪರಾಧ ಪ್ರಕರಣಗಳಲ್ಲಿ ಸುಮಾರು 16 ಸಾವಿರ ಕೈದಿಗಳು ಬಂಧಿತರಾಗಿ ಜೈಲುಗಳಲ್ಲಿದ್ದಾರೆ. ಈ ಪೈಕಿ ಶೇ 30ರಷ್ಟು ಮಂದಿ ಶಿಕ್ಷಾಧೀನ ಮತ್ತು ಶೇ 70ರಷ್ಟು ಮಂದಿ ವಿಚಾರಣಾಧೀನ ಕೈದಿಗಳಾಗಿದ್ದಾರೆ.
ಸರಕಾರ ಸನ್ನಡತೆ ಆಧಾರದಲ್ಲಿ ಕೈದಿಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಕೈದಿಗಳು ಜೈಲಿನಿಂದ ಬಿಡುಗಡೆಯಾದ ನಂತರ ಜೀವನ ನಿರ್ವಹಣೆಗೆ ಮುಂದೇನು ಎಂಬ ಸಂದಿಗ್ಧತೆಯಲ್ಲಿ ಸಿಲುಕುತ್ತಾರೆ. ಹೀಗಾಗಿ, ಅವರ ಜೀವನೋಪಾಯ ದೃಷ್ಟಿಯಲ್ಲಿಟ್ಟುಕೊಂಡು ಕಾರಾಗೃಹ ಇಲಾಖೆ ಸ್ವಉದ್ಯೋಗದ ಆಸರೆ ಕಲ್ಪಿಸಲು ಮುಂದಾಗಿದೆ.
ರಾಜ್ಯ ಕೌಶಲಾಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಪೆಟ್ರೋಲ್ ಬಂಕ್‌ಗಳಲ್ಲಿನ ಕಾರ್ಯಚಟುವಟಿಕೆಗಳ ನಿರ್ವಹಣೆ ಕುರಿತು ಕೈದಿಗಳಿಗೆ ಜೈಲಿನಲ್ಲೇ ಕೌಶಲ ತರಬೇತಿ ಕೊಡಿಸಲು ಇಲಾಖೆ ಉದ್ದೇಶಿಸಿದೆ.
ಈ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ನಿಗಮದ ಜತೆ ಚರ್ಚೆ ನಡೆಸಿದ್ದಾರೆ. ”ಕೈದಿಗಳ ಪೂರ್ವಾಪರ, ಆರ್ಥಿಕ ಮತ್ತು ಕೌಟುಂಬಿಕ ಹಿನ್ನೆಲೆ, ಆಸಕ್ತಿ ಆಧರಿಸಿ ಕೌಶಲ ತರಬೇತಿ ಕೊಡಿಸಲಾಗುತ್ತದೆ.
ಆರ್ಥಿಕವಾಗಿ ಸ್ಥಿತಿವಂತರಾಗಿರುವ ಕೈದಿಗಳು ಜೈಲಿನಲ್ಲಿ ಕೌಶಲ ತರಬೇತಿ ಪಡೆದು ಬಿಡುಗಡೆಯಾದ ನಂತರ ಸ್ವಂತವಾಗಿ ಪೆಟ್ರೋಲ್ ಬಂಕ್ ಆರಂಭಿಸಬಹುದು.
ಜತೆಗೆ ಅವರು ಹಲವರಿಗೆ ಉದ್ಯೋಗಾವಕಾಶ ಸಹ ಕಲ್ಪಿಸಬಹುದು. ಸ್ಥಿತಿವಂತರಲ್ಲದವರು ಇಲಾಖೆಯ ಪೆಟ್ರೋಲ್ ಬಂಕ್‌ಗಳಲ್ಲಿ ಉದ್ಯೋಗಿಗಳಾಗಿ ಬದುಕು ಕಟ್ಟಿಕೊಳ್ಳಬಹುದು. ಒಂದು ಬಂಕ್‌ನಿಂದ ಕನಿಷ್ಠ 45 ಮಂದಿಗೆ ಉದ್ಯೋಗಾವಕಾಶ ಸಿಗುವ ನಿರೀಕ್ಷೆಯಿದೆ,” ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.