
ರಾಜ್ಯ ಎದುರಿಸುತ್ತಿರುವ ತೀವ್ರ ವಿದ್ಯುತ್ ಕೊರತೆ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲಿ 4 ಗಂಟೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 6 ಗಂಟೆ ಅಘೋಷಿತ ಲೋಡ್ ಶೆಡ್ಡಿಂಗ್ ಹೇರಲಾಗಿದೆ. ಇಂಧನ ಇಲಾಖೆಯ ಉನ್ನತ ಮೂಲಗಳು ಈ ವಿಷಯ ತಿಳಿಸಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ರಾಜ್ಯ ಕತ್ತಲಲ್ಲಿ ಮುಳುಗಲಿದೆ ಎಂದಿವೆ.ರಾಜ್ಯದ ವಿದ್ಯುತ್ ಬೇಡಿಕೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬೇಡಿಕೆಗೆ ಹೋಲಿಸಿದರೆ ಉತ್ಪಾದನೆಯ ಪ್ರಮಾಣ ಶೇ.40ರಷ್ಟು ಕಡಿಮೆಯಾಗಿದೆ ಎಂದಿವೆ. ರಾಯಚೂರು ಉಷ್ಣ ವಿದ್ಯುತ್ ಸ್ಥಾವರದ ಆರು ಘಟಕಗಳ ಪೈಕಿ ಮೂರು ಘಟಕಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದಾಗಿ 1500 ಮೆಗಾವ್ಯಾಟ್ನಷ್ಟು ವಿದ್ಯುತ್ ಉತ್ಪಾದನೆ ಖೋತಾ ಆಗಿದೆ.ಛತ್ತೀಸ್ಗಢದಿಂದ ರಾಜ್ಯಕ್ಕೆ ಬರಬೇಕಿದ್ದ ಎರಡು ಸಾವಿರ ಮೆಗಾವ್ಯಾಟ್ ವಿದ್ಯುತ್ ಪೈಕಿ ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಬರುತ್ತಿದ್ದು, ಇದರಿಂದಾಗಿ ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಖೋತಾ ಆಗಿದೆ. ಈ ಮಧ್ಯೆ ಕೇಂದ್ರದ ವಿದ್ಯುತ್ ಸ್ಥಾವರಗಳಿಂದ ರಾಜ್ಯಕ್ಕೆ ಸಿಗಬೇಕಾದ ವಿದ್ಯುತ್ ಪೂರೈಕೆ ಸಮರ್ಪಕವಾಗಿಲ್ಲ.ಇದೇ ರೀತಿ ಸಿಂಗರೇಣಿಯಿಂದ ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಸಮರ್ಪಕ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆ ಆಗದಿರುವುದು ಸಮಸ್ಯೆ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ಹೀಗೆ ಎಲ್ಲವನ್ನು ಗಮನಿಸಿದರೆ ರಾಜ್ಯ ದಿನಂಪ್ರತಿ ನಾಲ್ಕು ಸಾವಿರ ಮೆಗಾವ್ಯಾಟ್ ನಷ್ಟು ವಿದ್ಯುತ್ ಕೊರತೆ ಅನುಭವಿಸುತ್ತಿದ್ದು, ಪರಿಣಾಮವಾಗಿ ಬೇರೆ ದಾರಿ ಕಾಣದ ಇಂಧನ ಇಲಾಖೆ ಅಘೋಷಿತ ಲೋಡ್ ಷೆಡ್ಡಿಂಗ್ ಅನ್ನು ಜಾರಿಗೊಳಿಸಿದೆ.ಈ ಮಧ್ಯೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಬಹುದು ಎಂಬ ಆತಂಕದಿಂದ ಶರಾವತಿ ಜಲ ವಿದ್ಯುದಾಗಾರದಲ್ಲಿ ಉತ್ಪಾದನೆಯನ್ನು ಕಡಿತಗೊಳಿಸಲಾಗಿದೆ. ಲಿಂಗನಮಕ್ಕಿ ಆಣೆಕಟ್ಟೆಯಲ್ಲಿ ಲಭ್ಯವಿರುವ ನೀರನ್ನು ಕಡುಬೇಸಿಗೆಯ ಬಳಕೆಗೆ ಎಂದು ಮೀಸಲಿಡಲು ಸರ್ಕಾರ ತೀರ್ಮಾನಿಸಿದ್ದು,ಇದರಿಂದಾಗಿ ಅಲ್ಲಿಂದ ಸಿಗುತ್ತಿದ್ದ ವಿದ್ಯುತ್ ಪ್ರಮಾಣವೂ ಕಡಿಮೆಯಾಗಿದೆ. ಇನ್ನು ವರಾಹಿ, ಕಾಳಿ ಆಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಕಡಿಮೆ ಇದ್ದು ಹೀಗಾಗಿ ನಿರೀಕ್ಷೆಗಿಂತ ಕಡಿಮೆ ವಿದ್ಯುತ್ ಲಭ್ಯವಾಗುತ್ತಿದೆ.ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕೇಂದ್ರದಿಂದ ಕಲ್ಲಿದ್ದಲ ಪೂರೈಕೆ ಕಡಿಮೆಯಾಗಿದ್ದು ಇದರಿಂದಾಗಿ ರಾಯಚೂರು ಸೇರಿದಂತೆ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯುತ್ ಸ್ಥಾವರಗಳು ಕೊರತೆಯಿಂದ ಬಳಲುತ್ತಿವೆ. ಅಲ್ಲಿ ವಿದ್ಯುತ್ ಉತ್ಪಾದನೆಯನ್ನು ಕಡಿಮೆ ಮಾಡಲಾಗಿದ್ದು,ಅದೇ ಕಾಲಕ್ಕೆ ಕಾರ್ಯನಿರ್ವಹಿಸುತ್ತಿರುವ ಘಟಕಗಳಲ್ಲಿ ಮುಂದಿನ ಹತ್ತು ದಿನಕ್ಕಾಗುವಷ್ಟು ಕಲ್ಲಿದ್ದಲು ಸಂಗ್ರಹದಲ್ಲಿ ಇದೆ.ಈ ಮಧ್ಯೆ ಆತಂಕಕಾರಿ ಸಂಗತಿ ಎಂದರೆ ತಾನು ಪಡೆಯುವ ವಿದ್ಯುತ್ ಗೆ ಪ್ರತಿಯಾಗಿ ಕರ್ನಾಟಕ ಪರ್ವ ಕಾಪೆರ್ರೇಷನ್ಗೆ 15 ಸಾವಿರ ಕೋಟಿ ರೂ .ನೀಡಬೇಕಿರುವ ಕೆಪಿಟಿಸಿಎಲ್ ಈ ಹಣ ಪಾವತಿಸುವುದು ಕಷ್ಟ ಎಂದು ಸರ್ಕಾರಕ್ಕೆ ಹೇಳಿದೆ. ಬೆಸ್ಕಾಂ,ಚಾಮುಂಡೇಶ್ವರಿ,ಹುಬ್ಬಳ್ಳಿ ವಿದ್ಯುತ್ ಕಂಪನಿಗಳನ್ನು ಹೊರತುಪಡಿಸಿ ಉಳಿದೆಲ್ಲ ವಿದ್ಯುತ್ ಕಂಪನಿಗಳು ಕಷ್ಟದಲ್ಲಿದ್ದು ಅವುಗಳಿಂದ ಆದಾಯವೇ ಇಲ್ಲದ ಹಾಗಾಗಿದೆ. ಸಂಗ್ರಹವಾಗುವ ಹಣದಲ್ಲಿ ಕೆಲ ಪ್ರಮಾಣದಷ್ಟು ಹಣ ನೀಡಿದರೂ ಕೆಪಿಸಿಗೆ ನೀಡಬೇಕಿರುವ ಹಣದ ಪ್ರಮಾಣ15 ಸಾವಿರ ಕೋಟಿಗೆ ತಲುಪಿದೆ.ಹೀಗಾಗಿ ಇದನ್ನು ಮಾಫಿ ಮಾಡಬೇಕು ಎಂಬ ಕೆಪಿಟಿಸಿಎಲ್ ಬೇಡಿಕೆಯನ್ನು ತಳ್ಳಿ ಹಾಕದಿರಲು ಸರ್ಕಾರ ಅನಿವಾರ್ಯವಾಗಿ ತಲೆ ಕೊಡಬೇಕಿದೆ.ಇಂತಹ ಆತಂಕಕಾರಿ ಪರಿಸ್ಥಿತಿಯ ನಡುವೆ ಬೇಸಿಗೆ ಇನ್ನೆರಡು ತಿಂಗಳು ಇರುವಾಗಲೇ ವಿದ್ಯುತ್ ಕೊರತೆ ಆರಂಭವಾಗಿದ್ದು ಮುಂದೇನು?ಎಂಬ ಚಿಂತೆ ಇಲಾಖೆಯನ್ನು ಕಾಡುತ್ತಿದೆ.