ರಾಜ್ಯ

ಕರುಳು ಹಿಂಡುವ ಕಣ್ಣೀರು: ನೀರಿನಲ್ಲಿ ಕೊಚ್ಚಿಹೋದ ಬಾಲಕಿ ಮೃತದೇಹ ಹೆತ್ತವರ ಮಡಿಲಿಗೆ; ಮುಳುಗುತಜ್ಞನ ಸಾಹಸಗಾಥೆ!

ಉಡುಪಿ: 3 ದಿನಗಳ ಮಳೆಯ ನಡುವೆಯೂ ಅನುಭವಿ ಮುಳುಗುತಜ್ಞರು, ಅಗ್ನಿಶಾಮಕ ಠಾಣಾ ಸಿಬ್ಬಂದಿಗಳು, ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆಕೆಯ ಸುಳಿವೇ ಗೋಚರಿಸಿದೆ ಇದ್ದಾಗ ಒಮ್ಮೆಲೆ ಊರಿಗೆ ಊರೇ ಹತಾಶಗೊಂಡಿತ್ತು.

3 ದಿನಗಳಿಂದ ಊಟ, ಉಪಹಾರವನ್ನೇ ಮಾಡದವರು ಹಲವರು. ಪಶ್ಚಿಮಘಟ್ಟದ ತಪ್ಪಲು ಪ್ರದೇಶದ ಪುಟ್ಟ ಕೇರಿಯಲ್ಲಿ ಚಿಣಕುರುಳಿ ಸನ್ನಿಧಿ ಕಾಲುಸಂಕದಿಂದ ಬಿದ್ದು ಕೊಚ್ಚಿಹೋದ ಘಟನೆ ಪ್ರತಿಯೊಬ್ಬರ ಕರಳು ಹಿಂಡುವಂತೆ ಮಾಡಿತ್ತು.

ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬೀಜಮಕ್ಕಿ ಎಂಬಲ್ಲಿ ಆ.8ರಂದು ನಡೆದ ಆ ದುರ್ಘಟನೆಗೆ ಇಡೀ ನಾಡೇ ಕಂಬನಿ ಮಿಡಿದಿತ್ತು. ಕೊಚ್ಚಿ ಹೋದ ಬಾಲಕಿಯ ಮೃತದೇಹ ಸಿಗದೇ ಇದ್ದಾಗ ಕುಟುಂಬದವರ ಸಹಿತ ಎಲ್ಲರೂ ಇನ್ನಷ್ಟು ದುಃಖಿತರಾದರು.

ಬುಧವಾರ ಇಡೀ ದಿನ ಇಲಾಖೆಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದು ಬರಿಗೈಯಲ್ಲಿ ವಾಪಾಸಾದಾಗ ನದಿಗೆ ಧುಮುಕಿದವರು ಗ್ರಾಮೀಣ ಭಾಗದ ಮುಳುಗುತಜ್ಞ ಮಂಜುನಾಥ ನಾಯ್ಕ್ ಕೊಡ್ಲಾಡಿ.

ಬಾಲಕಿ ಬಿದ್ದ ಜಾಗದಿಂದ 600ಮೀಟರ್‌ ಅಂತರದ ನಡುವೆಯೂ ನದಿ ಆಳದಲ್ಲಿ ಶೋಧ ಆರಂಭಿಸಿದ ಅವರಿಗೆ ನದಿಯ ಮಟ್ಟಿನಲ್ಲಿ ಬಾಲಕಿಯ ಕೈ ಗೋಚರಿಸಿದೆ. ಬೇರುಗಳ ನಡುವೆ ಸಿಲುಕಿದ ಆಕೆಯನ್ನು ಹೂವಿನಂತೆ ಮೇಲಕ್ಕೆ ಎತ್ತಿ ತಂದಾಗ ದಡದಲ್ಲಿ ನೆರೆದವರ ಉದ್ಗಾರ ಓ ದೇವರೇ…. ಮಗು ಸಿಕ್ಕಿತು… ಬೊಬ್ಬೆ, ಕೂಗು, ಆಕ್ರಂದನ.

ಏಯ್‌ ನೋವಾಗುತ್ತದೊ ಸರಿಯಾಗಿ ಹಿಡಿಯಿರಿ, ಕೈ ಕಾಲು ಸರಿಪಡಿಸಿ, ಬಟ್ಟೆ ಹಾಸಿ ಎಂಬ ಮಾತುಗಳು ದಡದಲ್ಲಿದ್ದವರ ಕಣ್ಣುಗಳು ತೇವವಾಗುವಂತೆ ಮಾಡಿಬಿಟ್ಟಿತ್ತು. ಹೆತ್ತವರ ಪಾಲಿಗೆ ಉಸಿರೇ ಆಗಿದ್ದ ಪುಟ್ಟ ಬಾಲೆ ಉಸಿರುಚೆಲ್ಲಿದ ಆ ಮೊಗವನ್ನು ಕಾಣಲಾಗದ ಸ್ಥಿತಿ. ಊರಿಗೆ ಊರೇ ಕಂಬನಿಯ ಧಾರೆಯಲ್ಲಿ ಮುಳುಗಿದ್ದಾಗಲೂ ಮುಳುಗುತಜ್ಞ ಮಂಜುನಾಥ ಕುರಿತಾಗಿ ಮೂಡಿತ್ತು ಅಭಿಮಾನ.

ಸಾಹಸಿಗ ಮುಳುಗುತಜ್ಞಮಲೆನಾಡು ತಪ್ಪಲಿನ ಬಾಂಡ್ಯ ಗ್ರಾಮದ ಕೊಡ್ಲಾಡಿ ನಿವಾಸಿ ಮಂಜುನಾಥ್‌ ನಾಯ್ಕ್ (46) ಜಿಲ್ಲೆಯ ಒಬ್ಬ ಸದ್ದಿಲ್ಲದ ಜೀವರಕ್ಷಕ. ತನ್ನ 17ನೇ ವಯಸ್ಸಿನಲ್ಲಿಯೇ ನೀರಿನಲ್ಲಿ ಮುಳುಗಿ ಮೃತಪಟ್ಟವರ ಶವ ಮೇಲಕ್ಕೆತ್ತುವ ಸೇವೆಗೆ ಸಮರ್ಪಿಸಿಕೊಂಡಿರುವ ಇವರು ಈವರೆಗೆ 105 ಶವ ಮೇಲಕ್ಕೆತ್ತಿದ್ದಾರೆ. ಐವರ ಜೀವ ರಕ್ಷಣೆ ಮಾಡಿದ್ದಾರೆ. ನೀರಿಗೆ ಆಕಸ್ಮಿಕ ಬಿದ್ದು ಕೊಚ್ಚಿಹೋದ ಐವರು ಚಿಕ್ಕ ಮಕ್ಕಳ ಮೃತದೇಹ ಮೇಲೆ ತಂದವರು. ಬಾವಿಗೆ ಬಿದ್ದ 2 ಚಿರತೆಯನ್ನು ಜೀವಂತವಾಗಿ ಮೇಲೆ ತಂದವರು.

ಎಲ್ಲ ಪ್ರಯತ್ನಗಳು ಕೈಚೆಲ್ಲಿದಾಗ ಜಿಲ್ಲೆಯಲ್ಲಿ ನೆನಪಾಗುವ ಏಕೈಕ ಮುಳುಗುತಜ್ಞ ಇವರು. ಕೇವಲ 5 ತರಗತಿ ಓದಿರುವ ಜನಪದ, ಕೃಷಿ ಹಾಗೂ ಮುಳುಗುತಜ್ಞನಾಗಿ ಅಪಾರ ಸಾಧನೆ ಮಾಡಿರುವ ಇವರು ಬಾಲಕಿ ಸನ್ನಿಧಿಯ ಮೃತದೇಹ ಮೇಲಕ್ಕೆ ತಂದಾಗ ಮಾತು ಹೊರಡದ ಸ್ಥಿತಿಗೆ ತಲುಪಿದ್ದರು.

5ಲಕ್ಷ ರೂ. ಪರಿಹಾರ ಘೋಷಣೆಕುಂದಾಪುರ: ಮರದ ಕಾಲುಸಂಕ ದಾಟುವಾಗ ಆಕಸ್ಮಿಕ ಬಿದ್ದು ನದಿಯಲ್ಲಿ ಕೊಚ್ಚಿಹೋಗಿ ಮೃತಪಟ್ಟ ಬಾಲಕಿ ಸನ್ನಿಧಿ ಕುಟುಂಬಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ 5ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಬುಧವಾರ ಬಾಲಕಿಯ ಮನೆಗೆ ಭೇಟಿ ನೀಡಿ ಹೆತ್ತವರಿಗೆ ಧೈರ್ಯ ತುಂಬಿದ ಅವರು ಪರಿಹಾರ ಘೋಷಿಸಿದರು. ಕಾಲುಸಂಕ ಇರುವಲೆಲ್ಲ ಶಾಶ್ವತ ಸಂಪರ್ಕ ಸೇತುವೆ ಮಾಡಿಸುವೆ ಎಂದು ಭರವಸೆ ನೀಡಿದರು.

ಮೂರು ದಿನ ಹಳ್ಳಿಯಲ್ಲೇ ಬೀಡುಬಿಟ್ಟ ತಹಸೀಲ್ದಾರ್‌ಬಾಲಕಿ ಸನ್ನಿಧಿ ಕೊಚ್ಚಿಹೋದ ಘಟನೆಯ ಬಳಿಕ ಮೂರು ದಿನ ಕುಂದಾಪುರ ತಹಸೀಲ್ದಾರ್‌ ಕಿರಣ್‌ ಗೋರಯ್ಯ ಹಳ್ಳಿಯಲ್ಲೇ ಬೀಡುಬಿಟ್ಟಿದ್ದರು. ಕಾರ್ಯಾಚರಣೆ ತಂಡದೊಂದಿಗೆ ಕೈಜೋಡಿಸಿ ಬಾಲಕಿಯ ಪತ್ತೆಗಾಗಿ ಶ್ರಮಿಸಿದ್ದರು. ಇತ್ತೀಚೆಗೆ ಶಿರೂರಿನಲ್ಲಿ ಮೇಘಸ್ಫೋಟ ಆದಾಗಲೂ ರಾತ್ರಿ ಹಗಲೆನ್ನದೆ ಜನರ ನಡುವೆ ಇದ್ದು ಸಹಕಾರ ನೀಡಿದ್ದ ತಹಸೀಲ್ದಾರರ ಕಾರ್ಯವೈಖರಿ ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.

ಅತೀವ ಸಂಕಟ ನೀಡಿದೆಲೆಕ್ಕವಿಲ್ಲದಷ್ಟು ಶವವನ್ನು ಮೇಲಕ್ಕೆತ್ತಿದ್ದೇನೆ. ಆದರೆ ಬಾಲಕಿ ಸನ್ನಿಧಿಯ ಶವ ಮೇಲಕ್ಕೆ ತರುವಾಗ ನೀರಿನಲ್ಲಿ ಮುಳುಗಿದ್ದಾಗ ಅರಿವಿಲ್ಲದೆ ನನ್ನ ಕಣ್ಣೀರು ನದಿ ನೀರನ್ನು ಸೀಳಿಕೊಂಡು ಬಂದಿತ್ತು. 3 ದಿನಗಳ ಕಾರ್ಯಾಚರಣೆ ಇಲಾಖೆಯಿಂದ ನಡೆದಿದೆ.

ಸುಳಿವು ಸಿಗದೆ ಹಿನ್ನೆಲೆಯಲ್ಲಿ ಧರ್ಮಸ್ಥಳ ಶೌರ್ಯ ತಂಡದ ಸದಸ್ಯನಾಗಿ ನಾನು, ಗೆಳೆಯರಾದ ಉಮೇಶ್‌ ಅಂಪಾರು, ರಾಘವೇಂದ್ರ ಕೊಡ್ಲಾಡಿ ಅಲ್ಲದೆ ಮಗನಾದ ಕೌಶಿಕ್‌ನೊಂದಿಗೆ ಅಂತಿಮ ಪ್ರಯತ್ನ ಎಂಬಂತೆ ಕಾಲುಸಂಕದ ಸುತ್ತಮುತ್ತಲಿನಲ್ಲೇ ಮುಳುಗಿ ಶೋಧ ಆರಂಭಿಸಿದ್ದೆವು.

ಮಗು ಬಿದ್ದ ಜಾಗದಿಂದ 600 ಮೀಟರ್‌ ದೂರದಲ್ಲಿ ನದಿಯ ಬದಿಯಲ್ಲಿ ಮಟ್ಟು ಬಿದ್ದಿರುವುದನ್ನು ಕಂಡು ಅಲ್ಲೇ ಮುಳುಗಿದೆ. 10 ಅಡಿಯಷ್ಟು ಆಳದಲ್ಲಿ ಸನ್ನಿಧಿಯ ಕೈ ಗೋಚರಿಸಿದಂತಾಯಿತು.

ಆಳಕ್ಕಿಳಿದು ಶೋಧಿಸಿದಾಗ ಆಕೆಯ ಕೈಗಳು ಬೇರುಗಳ ನಡುವೆ ಸಿಲುಕಿತ್ತು. ಮಗುವನ್ನು ಮೇಲಕ್ಕೆ ತಂದು ಎತ್ತಿ ತೋರಿಸಿದಾಗ ದಡದಲ್ಲಿ ನೆರೆದವರ ಅಳು, ಆಕ್ರಂದನ ನನ್ನೊಳಗಿನ ಮಾತು ನಿಲ್ಲಿಸಿತ್ತು.ಮಂಜುನಾಥ ನಾಯ್ಕ್ ಕೊಡ್ಲಾಡಿ, ಮುಳುಗುತಜ್ಞ

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button