Accidentಬೆಂಗಳೂರುಸಿನಿಮಾ

ಕರಿಯ ಚಿತ್ರದ ನಿರ್ಮಾಪಕ ಆನೇಕಲ್ ಬಾಲರಾಜ್ ರಸ್ತೆ ಅಪಘಾತದಲ್ಲಿ ನಿಧನ

ಬೆಂಗಳೂರು : ಸ್ಯಾಂಡಲ್‌ವುಡ್‌ ನಿರ್ಮಾಪಕ ಆನೇಕಲ್ ಬಾಲರಾಜ್ ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಕರಿಯ ಸಿನಿಮಾದಿಂದ ನಿರ್ಮಾಪಕರಾಗಿ ಎಂಟ್ರಿ ಕೊಟ್ಟಿದ್ದ ಆನೇಕಲ್ ಬಾಲರಾಜ್, ಆನಂತರ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಇಂದು (ಮೇ 15) ಜೆಪಿ ನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಆನೇಕಲ್ ಬಾಲರಾಜ್ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರು ಎಳೆದಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು. ಆನೇಕಲ್ ಬಾಲರಾಜ್ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಜೆಪಿ ನಗರದ ತಮ್ಮ ನಿವಾಸದ ಬಳಿ ಬಾಲರಾಜ್ ಅವರು ವಾಕಿಂಗ್ ಮಾಡುವಾಗ ಅಪಘಾತವಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ, ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.

2003ರಲ್ಲಿ ತೆರೆಕಂಡ ‘ಕರಿಯ’ ಚಿತ್ರವನ್ನು ನಿರ್ಮಿಸುವ ಮೂಲಕ ಆನೇಕಲ್ ಬಾಲರಾಜ್ ಚಿತ್ರರಂಗ ಪ್ರವೇಶ ಮಾಡಿದರು. ಅದು ಅವರಿಗೆ ಚೊಚ್ಚಲ ಸಿನಿಮಾವಾಗಿತ್ತು. ಹಾಗೆಯೇ ನಿರ್ದೇಶಕ ಜೋಗಿ ಪ್ರೇಮ್ ಅವರಿಗೂ ‘ಕರಿಯ’ ಚಿತ್ರವಾಗಿತ್ತು. ದರ್ಶನ್, ಅಭಿನಯಶ್ರೀ ಮುಖ್ಯಭೂಮಿಕೆಯಲ್ಲಿದ್ದ ‘ಕರಿಯ’ ಚಿತ್ರದಲ್ಲಿ ರಿಯಲ್ ರೌಡಿಗಳು ಕಾಣಿಸಿಕೊಂಡಿದ್ದು ವಿಶೇಷ. ಅಂಡರ್‌ವರ್ಲ್ಡ್‌ ಸಬ್ಜೆಕ್ಟ್ ಹೊಂದಿದ್ದ ‘ಕರಿಯ’ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದರು. ಹಾಡುಗಳು ದೊಡ್ಡ ಹಿಟ್ ಆಗಿದ್ದವು. ಆರಂಭದಲ್ಲಿ ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ ತೆರೆಕಂಡ ಈ ಸಿನಿಮಾ 56 ದಿನ ಯಶಸ್ವಿ ಪ್ರದರ್ಶನ ಕಂಡಿತ್ತು. ಆದರೆ ಪ್ರೇಕ್ಷಕರ ಒತ್ತಾಯದ ಮೇರೆಗೆ ಮತ್ತೆ ಬಿಡುಗಡೆ ಮಾಡಲಾಗಿತ್ತು. ಆಗ ಈ ಸಿನಿಮಾ ಕೆಲ ಚಿತ್ರಮಂದಿರಗಳಲ್ಲಿ 100 ದಿನ ಪ್ರದರ್ಶನ ಕಂಡಿತ್ತು. ಹಲವು ಬಾರಿ ಈ ಸಿನಿಮಾ ಮರುಬಿಡುಗಡೆಗೊಂಡು ದಾಖಲೆ ಬರೆದಿತ್ತು.

ಆನೇಕಲ್ ಬಾಲರಾಜ್ ಪುತ್ರ ಸಂತೋಷ್ ಕೂಡ ಚಿತ್ರರಂಗದಲ್ಲಿ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಪುತ್ರನಿಗಾಗಿ ‘ಕೆಂಪ’, ‘ಜನ್ಮ’, ‘ಗಣಪ’ ಸಿನಿಮಾಗಳನ್ನು ಆನೇಕಲ್ ಬಾಲರಾಜ್ ನಿರ್ಮಾಣ ಮಾಡಿದ್ದಾರೆ. ‘ಗಣಪ’ ಸಿನಿಮಾದಿಂದ ಸಂತೋಷ್ ಕರಿಯರ್‌ಗೆ ದೊಡ್ಡ ಗೆಲುವು ತಂದುಕೊಟ್ಟಿತ್ತು. ಅಲ್ಲದೆ, ಪುತ್ರ ಸಂತೋಷ್ ನಾಯಕತ್ವದಲ್ಲಿ ‘ಕರಿಯ 2’ ಸಿನಿಮಾವನ್ನು ಆನೇಕಲ್ ಬಾಲರಾಜ್ ನಿರ್ಮಾಣ ಮಾಡಿದ್ದರು. ಇನ್ನೂ ಸ್ಯಾಂಡಲ್‌ವುಡ್‌ನಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡುವ ಕನಸು ಹೊತ್ತಿದ್ದ ಆನೇಕಲ್‌ ಬಾಲರಾಜ್ ಅವರ ಆಕಾಲಿಕ ಮರಣ ಬೇಸರ ಮೂಡಿಸಿದೆ.

Related Articles

Leave a Reply

Your email address will not be published. Required fields are marked *

Back to top button