ಆರೋಗ್ಯರಾಜ್ಯ

ಕರಾವಳಿಯಲ್ಲಿ ಕಂಬಳಿ ಹೊದ್ದು ಮಲಗಿದ ಜನ: ಇಲಿ ಜ್ವರದ ಜೊತೆ ಎಂಟ್ರಿ ಕೊಟ್ಟಿದೆ ಎಚ್‌1ಎನ್‌1

ಮಂಗಳೂರು: ಕರಾವಳಿಯಲ್ಲಿ ಬಿರುಸಿನ ಮಳೆ ಮುಂದುವರಿದಿರುವಂತೆ ಸಾಂಕ್ರಾಮಿಕ ರೋಗಗಳು ಮತ್ತಷ್ಟು ಉಲ್ಭಣಗೊಂಡಿದೆ. ಡೆಂಗ್ಯೂ , ಮಲೇರಿಯಾ ನಿಯಂತ್ರಣದಲ್ಲಿದ್ದರೂ ಇಲಿಜ್ವರ ಪ್ರಮಾಣ ದಿಢೀರ್‌ ಏರಿಕೆಯಾಗಿದೆ. ಜತೆಗೆ ಎಚ್‌1ಎನ್‌1 ಕಾಯಿಲೆ ಕೂಡ ಕಾಣಿಸಿಕೊಂಡಿದೆ.

ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಬೀಳುತ್ತಿರುವ ಮಳೆಯಿಂದ ರೋಗ ರುಜಿನಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಕ್ಲಿನಿಕ್‌ಗಳ ಮುಂಭಾಗದಲ್ಲಿ ರೋಗಿಗಳ ಸರತಿ ಸಾಲು ಕಂಡು ಬರುತ್ತಿದೆ. ಬೆಳಗ್ಗಿನಿಂದಲೇ ವೈದ್ಯರ ಭೇಟಿಗೆ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಮಲೇರಿಯಾ ಜ್ವರ ಪ್ರಕರಣಗಳಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿರುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆ, ಈ ವರ್ಷ 6 ತಿಂಗಳಲ್ಲಿ ಬರೀ 100 ಪ್ರಕರಣಗಳು ಮಾತ್ರ ದಾಖಲಾಗಿವೆ. ಇದೇ ಮೊದಲ ಬಾರಿ ಸಂಖ್ಯೆ ಕುಸಿತವಾಗಿದೆ ಎನ್ನುವುದು ಆರೋಗ್ಯ ಇಲಾಖಾಧಿಕಾರಿಗಳ ಮಾಹಿತಿ.

ಡೆಂಗ್ಯೂ ವಿಚಾರದಲ್ಲೂ ದಕ್ಷಿಣ ಕನ್ನಡ ನಿಯಂತ್ರಣ ಸಾಧಿಸಿದೆ. ಆದರೆ ಇಲಿಜ್ವರ ಪ್ರಕರಣಗಳು ನಿಧಾನವಾಗಿ ಏರಿಕೆಯಾಗುತ್ತಿದೆ. ಇನ್ನೊಂದೆಡೆ ಎಚ್‌1ಎನ್‌1 (ಹಂದಿಜ್ವರ) ಪ್ರಕರಣಗಳು ಕಾಣಿಸಿಕೊಂಡಿದ್ದು, ಒಂದು ತಿಂಗಳ ಹಿಂದೆ ಬಂಟ್ವಾಳದ ಒಂದು ವರ್ಷದ ಮಗು ಇದೇ ಕಾರಣದಿಂದ ಮೃತಪಟ್ಟಿದೆ.

ವೈರಲ್‌ ಜ್ವರಕ್ಕೆ ಇಳಿದ ಕೋವಿಡ್‌: ಕೋವಿಡ್‌ ಪಾಸಿಟಿವ್‌ ಪ್ರಮಾಣ ಈ ತಿಂಗಳಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎನ್ನುವುದು ಆರೋಗ್ಯ ಇಲಾಖೆಯ ಲೆಕ್ಕಾಚಾರ. ಆದರೆ, ಕೋವಿಡ್‌ನ್ನು ವೈರಲ್‌ ಜ್ವರದಂತೆ ಸಾಮಾನ್ಯ ಜ್ವರವಾಗಿ ಜನರು ಭಾವಿಸುತ್ತಿದ್ದಾರೆ. ಇದರಿಂದ ಕೋವಿಡ್‌ ಈ ತಿಂಗಳಲ್ಲಿ ಜಾಸ್ತಿಯಾದರೂ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗೋದಿಲ್ಲ. ಕೋವಿಡ್‌ವೊಂದು ವೈರಲ್‌ ಜ್ವರದ ರೂಪವಾಗಿ ಬಿಟ್ಟಿದೆ ಎನ್ನುವುದು ವೈದ್ಯ ಲೋಕದ ತಜ್ಞರ ಮಾತು.

ಇಲಿಜ್ವರ ಹೆಚ್ಚಳಕ್ಕೆ ಕಾರಣ ಏನು?: ಕಳೆದ ಕೆಲವು ವರ್ಷಗಳಿಂದ ಇಲಿಜ್ವರದ ಪ್ರಮಾಣ ಅಷ್ಟೊಂದು ಇರಲಿಲ್ಲ. ಆದರೆ ಈಗ ಇಲಿಜ್ವರ ಮಳೆಗಾಲದಲ್ಲಿವಿಪರೀತ ರೀತಿಯಲ್ಲಿಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ರಾತ್ರಿ ವೇಳೆ ಇಲಿಗಳು ಮನೆ, ಅಂಗಡಿ ಒಳಗಡೆ ಹೆಚ್ಚಾಗಿ ಓಡಾಡುತ್ತಿವೆ. ಮನೆ ಪರಿಸರದಲ್ಲಿ ಸೋಂಕಿತ ಇಲಿಗಳು ಮಲ ಮೂತ್ರ ಮಾಡಿದರೆ, ಅವುಗಳು ಜನರ ಸಂಪರ್ಕಕ್ಕೆ ಬಂದರೆ ಜನರಿಗೂ ಸೋಂಕು ತಗುಲುತ್ತದೆ.

ಜನವರಿಯಿಂದ- ಜೂನ್‌ ತಿಂಗಳ ವರೆಗೆ ದ.ಕ ಜಿಲ್ಲೆಯಲ್ಲಿ ಸಾಂಕ್ರಾಮಿಕ ಕಾಯಿಲೆಗಳ ಪಟ್ಟಿ ದೊಡ್ಡದಾಗಿಯೇ ಇದೆ. ಎಚ್‌1ಎನ್‌1- 20 ಪ್ರಕರಣದಲ್ಲಿ ಒಂದು ಸಾವನ್ನಪ್ಪಿರುವ ಘಟನೆ ನಡೆದಿದೆ. 199 ಇಲಿಜ್ವರ ಪ್ರಕರಣಗಳು, 154 ಡೆಂಗ್ಯೂ ಪ್ರಕರಣಗಳು, 93 ಮಲೇರಿಯಾ ಪ್ರಕರಣಗಳು, 18 ಕ್ಷಯ ಪ್ರಕರಣಗಳು, 1016 ಟಿಬಿ ಪ್ರಕರಣಗಳು ದಾಖಲಾಗಿವೆ.

ಶಾಲೆಗಳಿಗೆ ಆರೋಗ್ಯ ಇಲಾಖೆಯಿಂದ ಸೂಚನೆದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ಆರೋಗ್ಯ ಇಲಾಖೆಯಿಂದ ವಿಶೇಷ ಸೂಚನೆ ರವಾನಿಸಲಾಗಿದೆ. ಶಾಲೆಗೆ ಬರುವ ಮಕ್ಕಳಲ್ಲಿ ವೈರಲ್‌ ಜ್ವರ ಸೇರಿದಂತೆ ಇತರ ಕಾಯಿಲೆಗಳು ಬಂದರೆ ತಕ್ಷಣವೇ ಇಲಾಖೆಗೆ ಗಮನಕ್ಕೆ ತರಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಸೇರಿದಂತೆ ಆರ್‌ಬಿಎಸ್‌ಕೆ ತಂಡದವರು ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯದ ಕುರಿತು ಮಾಹಿತಿ ಕಲೆ ಹಾಕುವ ಕಾರ್ಯ ಸಾಗುತ್ತಿದೆ.

ಶಾಲೆಗಳಲ್ಲಿ ಮಕ್ಕಳಲ್ಲಿ ಜ್ವರ ಸೇರಿದಂತೆ ಇತರ ಕಾಯಿಲೆಗಳು ಬಂದಾಕ್ಷಣ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಬಾರದು. ಇಲಾಖೆಗೆ ಮಾಹಿತಿ ರವಾನಿಸಿ ಮನೆಯಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಆರೋಗ್ಯ ದೃಷ್ಟಿಯಲ್ಲಿ ಮಳೆಗಾಲ ಎಂದರೆ ಕಾಯಿಲೆಗಳಿಗೆ ಹೇಳಿ ಮಾಡಿಸಿದ ಸಮಯ. ಮಳೆಗಾಲದಲ್ಲಿ ವೈರಲ್‌ ಫೀವರ್‌ ಜಾಸ್ತಿಯಾಗಿರುತ್ತದೆ. ಇದರ ಜತೆಯಲ್ಲಿ ಇತರ ಕಾಯಿಲೆಗಳು ಕೂಡ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಜನರು ಕೊಂಚ ಎಚ್ಚರಿಕೆಯಿಂದ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು. ಇಲಾಖೆ ಕೂಡ ತನ್ನ ಕೆಲಸವನ್ನು ಮಾಡುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಆರೋಗ್ಯಾಧಿಕಾರಿ ಡಾ. ಕಿಶೋರ್‌ ಕುಮಾರ್‌ ಹೇಳಿದ್ರು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button