
ಆಡಳಿತ ವರ್ಗಕ್ಕೆ ಮೇಜರ್ ಸರ್ಜರಿ ನಡೆಸಲು ಮುಂದಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್, ಕೆಲ ಡಿಸಿಪಿಗಳು ಸೇರಿದಂತೆ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಮುಂದಾಗಿದ್ದಾರೆ.ಇಂದು ಸಂಜೆ ಅಥವಾ ನಾಳೆಯೊಳಗೆ ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ವರ್ಗಾವಣೆಯಾಗಲಿದ್ದು, ತೆರವಾಗಲಿರುವ ಈ ಸ್ಥಾನಕ್ಕೆ ಮೂವರು ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರು ಕೇಳಿ ಬಂದಿದೆ. ಗುಪ್ತಚರ ವಿಭಾಗದ ಎಡಿಜಿಪಿ ಬಿ.ದಯಾನಂದ್, ಕೆಎಸ್‍ಆರ್‍ಪಿ ಎಡಿಜಿಪಿ ಅಲೋಕ್‍ಕುಮಾರ್ ಮತ್ತು ಸಿಐಡಿ ಎಡಿಜಿಪಿ ಉಮೇಶ್‍ಕುಮಾರ್ ಹೆಸರುಗಳು ನಗರ ಪೊಲೀಸ್ ನಗರ ಪೊಲೀಸ್ ಆಯುಕ್ತರ ಹುದ್ದೆಗೆ ಕೇಳಿ ಬಂದಿದ್ದು, ಮುಖ್ಯಮಂತ್ರಿಯವರ ಕೃಪೆ ಯಾರ ಮೇಲೆ ಬೀಳಲಿದೆ ಎಂಬುದು ನಿಗೂಢವಾಗಿಯೇ ಉಳಿದಿದೆ.
ಈ ಹಿಂದೆಯೇ ಕಮಲ್‍ಪಂತ್ ಅವರು ವರ್ಗಾವಣೆಯಾಗಲಿದ್ದಾರೆ ಎಂದು ಹೇಳಲಾಗಿತ್ತಾದರೂ ಮಾಜಿ ಮುಖ್ಯಮಂತ್ರಿಯೊಬ್ಬರ ಆಶೀರ್ವಾದ ಇದ್ದುದ್ದರಿಂದ ಬೊಮ್ಮಾಯಿ ಅವರು ಅವರನ್ನು ವರ್ಗಾವಣೆ ಮಾಡದೆ ಅದೇ ಸ್ಥಾನದಲ್ಲಿ ಮುಂದುವರೆಸಿದ್ದರು. ಕಮಲ್‍ಪಂತ್ ಅವರ ಮೇಲೆ ಯಾವುದೇ ಗುರುತರ ಆರೋಪಗಳು ಇಲ್ಲವಾದರೂ ಹೆಚ್ಚು ದಿನ ಈ ಸ್ಥಾನದಲ್ಲಿ ಮುಂದು ವರೆಸಬಾರದು ಎಂಬ ಕಾರಣಕ್ಕಾಗಿ ವಿಧಿಯಿಲ್ಲದೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ.
ಕಮಲ್‍ಪಂತ್ ವರ್ಗಾವಣೆಯಾದರೆ ಈ ಸ್ಥಾನಕ್ಕೆ ಮೂವರು ಎಡಿಜಿಪಿಗಳು ಕಣ್ಣಿಟ್ಟಿದ್ದಾರೆ. ಗುಪ್ತಚರ ವಿಭಾಗದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿರುವ ಬಿ.ದಯಾನಂದ್, ಖಡಕ್ ಅಧಿಕಾರಿ ಎಂದು ಗುರುತಿಸಿಕೊಂಡಿರುವ ಅಲೋಕ್‍ಕುಮಾರ್ ಹಾಗೂ ಸಿಐಡಿ ಎಡಿಜಿಪಿ ಉಮೇಶ್‍ಕುಮಾರ್ ಅವರ ಹೆಸರುಗಳೂ ಕೇಳಿ ಬಂದಿವೆ.ಈ ಹಿಂದೆ ಒಂದು ಬಾರಿ ನಗರ ಪೊಲೀಸ್ ಆಯುಕ್ತರಾಗಿದ್ದ ಅಲೋಕ್‍ಕುಮಾರ್ ಕೆಲವು ಕಠಿಣ ನಿರ್ಧಾರಗಳಿಂದ ಸಾರ್ವಜನಿಕರ ಪ್ರಸಂಸೆಗೂ ಪಾತ್ರರಾಗಿದ್ದರು. ಆದರೆ, ಒಂದಂಕಿ ಲಾಟರಿ ಪ್ರಕರಣದಲ್ಲಿ ಅವರ ಹೆಸರು ತಳುಕು ಹಾಕಿಕೊಂಡಿದ್ದರಿಂದ ಅಮಾನತು ಸಹ ಆಗಿದ್ದರು. ದೆಹಲಿಯಲ್ಲಿ ತಮ್ಮದೇ ಆದ ಪ್ರಭಾವ ಇಟ್ಟುಕೊಂಡಿರುವ ಅಲೋಕ್‍ಕುಮಾರ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದರೂ ಅಚ್ಚರಿಯಲ್ಲ.
ಇನ್ನು ಉಮೇಶ್‍ಕುಮಾರ್ ಹಾಗೂ ಬಿ.ದಯಾನಂದ್ ಅವರು ಕೂಡ ತಮ್ಮ ತಮ್ಮ ಗಾಡ್ ಫಾದರ್‍ಗಳ ಮೂಲಕ ಲಾಬಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಡಿಸಿಪಿಗಳ ವರ್ಗಾವಣೆ: ಮೂಲಗಳ ಪ್ರಕಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬೆಂಗಳೂರಿನ ಕೆಲವು ಡಿಸಿಪಿಗಳನ್ನು ಸಹ ವರ್ಗಾವಣೆ ಮಾಡುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.ಕೆಲವು ತಿಂಗಳಿನಿಂದ ಆಯಕಟ್ಟಿನ ವಿಭಾಗಗಳಲ್ಲಿ ಠಿಕಾಣಿ ಹೂಡಿರುವ ಡಿಸಿಪಿಗಳನ್ನು ವರ್ಗಾಯಿಸಿ ಹೊಸಬರನ್ನು ನೇಮಕ ಮಾಡಲು ಸಿಎಂ ಬೊಮ್ಮಾಯಿ ಅವರು ಈಗಾಗಲೇ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.